Advertisement

ರಾಜ್ಯ ಭಾಷೆಯಾಗಿ ತುಳು : ಅಧಿವೇಶನದಲ್ಲಿ ಮೊಳಗಲಿದೆ ಕರಾವಳಿಯ ಕೂಗು !

08:08 PM Sep 02, 2021 | Team Udayavani |

ಮಹಾನಗರ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಯನ್ನಾಗಿ ಘೋಷಣೆ ಮಾಡಬೇಕು ಎಂಬ ಹೋರಾಟಕ್ಕೆ ಇದೀಗ ಮರುಜೀವ ಬಂದಿದೆ. ಈ ತಿಂಗಳು ಆರಂಭವಾಗಲಿರುವ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾವ ಮಾಡಲು ಕರಾವಳಿ ಭಾಗದ ಜನಪ್ರತಿನಿಧಿಗಳು ಮುಂದಾಗಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಕರಾವಳಿ ಭಾಗದ ಸುನಿಲ್‌ ಕುಮಾರ್‌ ಅವರೇ ಇದ್ದು, ಈ ಪ್ರಸ್ತಾವನೆಗೆ ಇದೀಗ ಮತ್ತಷ್ಟು ಬಲ ಬಂದಿದೆ. ತುಳುವನ್ನು ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡುವಂತೆ ರಾಜ್ಯ ಸರಕಾರಕ್ಕೆ ಪೂರಕ ಅಂಶ ನೀಡುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಈಗಾಗಲೇ ಕಮಿಟಿಯೊಂದನ್ನು ರಚನೆ ಮಾಡಿದ್ದು, ರಾಜ್ಯ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಮುಖರ ಜತೆ ಕೆಲವು ದಿನಗಳ ಹಿಂದೆ ಚರ್ಚೆ ನಡೆದಿದೆ.

ಹಿರಿಯ ಸಾಹಿತಿಗಳನ್ನೊಳಗೊಂಡ ಈ ಸಮಿತಿಯು ತುಳು ಭಾಷೆಯ ಮೌಲ್ಯಗಳನ್ನು, ಲಿಪಿಯ ಪ್ರಾಚೀನತೆ, ಶಿಲಾಶಾಸನಗಳ ಬಗ್ಗೆ ಸರಕಾರದ ಗಮನ ಸೆಳೆದಿದೆ. ಅದೇರೀತಿ, ಕರಾವಳಿಯ ರಾಜಕೀಯ ಮತ್ತು ಆರ್ಥಿಕ ಪ್ರಾಬಲ್ಯ, ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಗೆ ಹಿನ್ನಡೆ ಉಂಟಾದುದ್ದೆಲ್ಲಿ?, ತುಳುನಾಡಿನ ಸಂಸ್ಕೃತಿ, ಆಚರಣೆ, ಸಾಂಸ್ಕೃತಿಕ ಕಲೆ ಸಹಿತ ವಿವಿಧ ಆಯಾಮಗಳನ್ನು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿ, ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಘೊಷಿಸಲು ಈ ಸಮಿತಿ ಪೂರಕ ಮಾಹಿತಿ ಒದಗಿಸಿದೆ.

ಉಭಯ ಜಿಲ್ಲೆಗಳ 13 ವಿಧಾನಸಭೆ ಕ್ಷೇತ್ರದ ಪೈಕಿ 12 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಶಾಸಕರು ಇದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಇದೇ ಭಾಗವದರು. ಕೇಂದ್ರ, ರಾಜ್ಯದಲ್ಲಿ ಕರಾವಳಿ ಭಾಗದ ಸಚಿವರಿದ್ದು, ಕೇಂದ್ರದಲ್ಲಿಯೂ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಹೀಗಿದ್ದಾಗ ಒಗ್ಗೂಡಿ ರಾಜಕೀಯವಾಗಿ ತಮ್ಮ ಇಚ್ಛಾಶಕ್ತಿ ಯನ್ನು ಪ್ರದರ್ಶಿಸುವ ಮೂಲಕ ಕೇಂದ್ರ, ರಾಜ್ಯ ಸರಕಾರದ ಮಟ್ಟದಲ್ಲಿ ಒತ್ತಡ ಹೇರಿದರೆ, ತುಳು ಭಾಷೆಗೆ ಸಂವಿಧಾನದ ಮಾನ್ಯತೆ ದೊರಕಿಸುವುದು ಕಷ್ಟದ ಕೆಲಸವಲ್ಲ.

ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್‌ “ಉದಯವಾಣಿ’ ಜತೆ ಮಾತನಾಡಿ, “ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ಸದನದಲ್ಲಿ ಕೇಳುವ ಪ್ರಶ್ನೆಯನ್ನು ಸಿದ್ಧಪಡಿಸಿದ್ದೇವೆ. ಕರಾವಳಿ ಜಿಲ್ಲೆಯ ಯಾರೇ ಶಾಸಕರ ಪ್ರಶ್ನೆಗೆ ಅವಕಾಶ ಸಿಕ್ಕರೂ ಈ ಭಾಗದ ಎಲ್ಲ ಶಾಸಕರು ಒಗ್ಗಟ್ಟಾಗಿ ವಿಸ್ತೃತ ಚರ್ಚೆಗೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇವೆ. ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿಸಿ, ಅಧಿಕೃತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಖಂಡಿತವಾಗಿಯೂ ಪ್ರಯತ್ನಿಸಲಾಗುವುದು’ ಎಂದಿದ್ದಾರೆ.

Advertisement

ಶಾಸಕ ಉಮಾನಾಥ ಕೋಟ್ಯಾನ್‌ ಪ್ರತಿಕ್ರಿಯಿಸಿ “ತುಳು ಅಧಿಕೃತ ರಾಜ್ಯ ಭಾಷೆಯಾಗಬೇಕು. ಬಳಿಕ ಸಂವಿಧಾನದ ಮಾನ್ಯತೆ ನೀಡುವ ಪ್ರಸ್ತಾವಕ್ಕೆ ಮತ್ತಷ್ಟು ಬಲ ಬರುತ್ತದೆ. ಈ ನಿಟ್ಟಿನಲ್ಲಿ ಸಚಿವ ಸುನಿಲ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದು, ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾವಿಸುತ್ತೇನೆ’ ಎನ್ನುತ್ತಾರೆ.

ಶಾಸಕ ಯು.ಟಿ. ಖಾದರ್‌ ಪ್ರತಿಕ್ರಿಯಿಸಿ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಕೂಗು ಅನೇಕ ವರ್ಷಗಳದ್ದು, ಆದರೆ ಈ ಬೇಡಿಕೆ ಇನ್ನು ಈಡೇರಲಿಲ್ಲ. ಮುಂಬರುವ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ಅಧಿವೇಶನಕ್ಕೂ ಮುನ್ನ ಅಭಿಯಾನ :

ಸೆಪ್ಟಂಬರ್‌ 13ರಿಂದ 24ರ ವರೆಗೆ ಅಧಿವೇಶನ ನಡೆಯಲಿದ್ದು, ಅದಕ್ಕೂ ಮುನ್ನ ಅಂದರೆ ಸೆ. 5ರಂದು ಜೈ ತುಳುನಾಡು ಸಹಿತ ತುಳುನಾಡಿನ ವಿವಿಧ ಸಂಘಟನೆಗಳ ಆಶ್ರಯದಲ್ಲಿ “ಟ್ವೀಟ್‌ ಅಭಿಯಾನ’ ನಡೆಯಲಿದೆ. ಅಧಿವೇಶನದಲ್ಲಿ “ನಮ್ಮ ಶಾಸಕರು ಮಸೂದೆ ಮಂಡನೆ ಮಾಡಿ ತುಳು ಭಾಷೆಯನ್ನು ನಮ್ಮ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು’ ಎಂಬ ಒತ್ತಾಯದೊಂದಿಗೆ ಸೆ. 4ರ ಮಧ್ಯರಾತ್ರಿ 12 ಗಂಟೆಯಿಂದ ಸೆ. 5ರ ಮಧ್ಯರಾತ್ರಿ 11.59ರ ವರೆಗೆ #TuluOfficialinKA_KL ಮತ್ತು#SpeakUpForTulu  ಎಂಬ ಹ್ಯಾಶ್‌ಟ್ಯಾಗ್‌ ಮುಖೇನ ಟ್ವಿಟ್ಟರ್‌ ಅಭಿಯಾನ ನಡೆಯಲಿದೆ.

ತುಳುವನ್ನು ರಾಜ್ಯ ಭಾಷೆಯನ್ನಾಗಿಸಬೇಕು ಎಂಬ ಪ್ರಸ್ತಾವನೆ ಈಗಾಗಲೇ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡ ನನ್ನ ವ್ಯಾಪ್ತಿ ಬರುವ ಕಾರಣ ಶೀಘ್ರದಲ್ಲಿಯೇ ನಿರ್ಣಯ ಕೈಗೊಳ್ಳುತ್ತೇನೆ. ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಮಾರ್ಪಾಡು ಮಾಡಲು ಏನೆಲ್ಲ ತೊಡಕುಗಳಿವೆ ಎಂಬ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚೆ ಮಾಡಿ ಮಾಹಿತಿ ಪಡೆಯುತ್ತೇನೆ. ಈ ಬಾರಿ ಅಧಿವೇಶದಲ್ಲಿಯೂ ಈ ಬಗ್ಗೆ ಚರ್ಚೆ ಮಾಡಲಾಗುವುದು. ಸುನಿಲ್‌ ಕುಮಾರ್‌,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು

ತುಳುವನ್ನು ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಪೂರಕ ಅಂಶ ಕಲೆ ಹಾಕಲು ಹಿರಿಯ ಸಾಹಿತಿಗಳನ್ನೊಳಗೊಂಡ ಕಮಿಟಿಯೊಂದನ್ನು ರಚನೆ ಮಾಡಿದ್ದು, ರಾಜ್ಯ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಮುಖರ ಜತೆ ಕೆಲವು ದಿನಗಳ ಹಿಂದೆ ಚರ್ಚೆ ನಡೆಸಿದೆ. ಬೇರೆ ರಾಜ್ಯಗಳಲ್ಲಿ ಒಂದಕ್ಕೂ ಹೆಚ್ಚು ಅಧಿಕೃತ ಭಾಷೆಗಳಿವೆ. ಕರ್ನಾಟಕದಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆ. ಬಳಿಕ ತುಳುವನ್ನು 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಸಾಗುತ್ತದೆ.ದಯಾನಂದ ಕತ್ತಲಸಾರ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು 

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next