Advertisement

ಮಹಾ ನಗರದಲ್ಲಿ ತುಳು ಕನ್ನಡಿಗರ ಸಾಧನೆ ಅಪಾರ:ಆಸ್ರಣ್ಣ

04:43 PM Aug 26, 2019 | Team Udayavani |

ಮುಂಬಯಿ, ಆ. 25: ಲಕ್ಷ್ಮೀ ನಾರಾಯಣರ ಜೋಡಿಯು ಯಾವತ್ತೂ ವಿಚ್ಛೇದನವಾಗದ ಜೋಡಿಯಾಗಿದ್ದು ಕೇವಲ ಲಕ್ಷ್ಮೀಯನ್ನು ಪೂಜಿಸಿದರೆ ಅದು ಫಲಪ್ರದವಾಗುವುದಿಲ್ಲ. ಅದ್ದರಿಂದ ಲಕ್ಷ್ಮೀನಾರಾಯಣರನ್ನು ಒಂದಾಗಿ ಪೂಜಿಸಿದರೆ ಅದರಿಂದ ಪೂರ್ಣ ಫಲ ಸಿಗುತ್ತದೆ. ಕಳೆದ ಹತ್ತು ವರ್ಷಗಳಿಂದ ನೀವೆಲ್ಲರೂ ವರಮಹಾಲಕ್ಷ್ಮೀ ವ್ರತಾಚರಣೆಯನ್ನು ಬಹಳ ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದೀರಿ. ಮಹಾನಗರದಲ್ಲಿ ತುಳು ಕನ್ನಡಿಗರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಉನ್ನತ ಮಟ್ಟಕ್ಕೇರಿದ್ದು ಅವರ ಸಾಧನೆ ಅಪಾರವಾಗಿದ್ದು, ನಿಮ್ಮ ಸಾಧನೆ ಮತ್ತಷ್ಟು ಬೆಳೆಯುವಂತಾಗಲಿ ಎಂದು ಕಟೀಲು ಕ್ಷೇತ್ರದ ಶ್ರೀ ಹರಿನಾರಾಯಣ ಆಸ್ರಣ್ಣರು ನುಡಿದರು.

Advertisement

ಆ. 18ರಂದು ಮಲಾಡ್‌ ಪೂರ್ವದ ಬಚ್ಚಾನಿ ನಗರದ ಚಿಲ್ಡ್ರನ್ಸ್‌ ಅಕಾಡೆಮಿಯ ಸಭಾಗೃಹದಲ್ಲಿ ಮಲಾಡ್‌ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಹತ್ತನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಯಕ್ಷಗಾನ ಅದು ಶ್ರೇಷ್ಠವಾದ ಕಲೆ. ಅಂತಹ ಯಕ್ಷಗಾನವನ್ನು ಈ ಸಮಿತಿಯ ಸದಸ್ಯರೆಲ್ಲರೂ ಸೇರಿ ಗೆಜ್ಜೆ ಕಟ್ಟಿ ಪ್ರದರ್ಶನವನ್ನು ನೀಡಿದ್ದೀರಿ. ಯಕ್ಷಗಾನವನ್ನು ಕಲಿಯುವ ಇಲ್ಲವೇ ಕಲಿಸುವ ಮೂಲಕವಾಗಿ ಮುಂಬಯಿ ಮಹಾನಗರದಲ್ಲಿ ಕಲೆ-ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ವರಮಹಾಲಕ್ಷ್ಮೀ ಪೂಜಾ ಸಮಿತಿಯಲ್ಲಿ ಉತ್ತಮ ಸಂಘಟನೆ ಹಾಗೂ ಪರಸ್ಪರ ಅನ್ಯೋನ್ಯತೆ ಇದೆ. ಸಮಿತಿಯಲ್ಲಿ ಸಂಘಟನಾ ಶಕ್ತಿ ಇದ್ದುದರಿಂದಲೇ ಇಂತಹ ದೊಡ್ಡಮಟ್ಟದಲ್ಲಿ ಧಾರ್ಮಿಕ ಸೇವಾ ಕಾರ್ಯಗಳು ನಡೆಯಲು ಸಾಧ್ಯವಾಗುತ್ತದೆ ಎಂದು ನುಡಿದರು.

ಗೌರವ ಅತಿಥಿಯಾಗಿ ಆಗಮಿಸಿದ ಉತ್ತರ ಮುಂಬಯಿ ಸಂಸದರಾದ ಗೋಪಾಲ್ ಶೆಟ್ಟಿ ಅವರು ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ತುಳು ಕನ್ನಡಿಗರನ್ನು ಒಂದುಗೂಡಿಸಿ ನಮ್ಮ ಧಾರ್ಮಿಕ ಆಚರಣೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇದು ಉತ್ತಮ ಕಾರ್ಯಕ್ರಮವಾಗಿದೆ. ಮುಂಬಯಿ ಮಹಾನಗರದಲ್ಲಿ ತಮ್ಮ ಉದ್ಯೋಗ, ಉದ್ಯಮಗಳ ನಡುವೆಯೂ ನಮ್ಮ ನಾಡಿನ ಸಂಸ್ಕೃತಿಯನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುದಕ್ಕೆ ಎಲ್ಲ ತುಳು ಕನ್ನಡಿಗರಿಗೆ ಅಭಿನಂದನೆಗಳು ಎಂದರು.

ತುಂಗಾ ಹಾಸ್ಪಿಟಲ್ ಇದರ ನಿರ್ದೇಶಕ ರಾಜೇಶ್‌ ಶೆಟ್ಟಿ ಮಾತನಾಡಿ, ಜೀವನದಲ್ಲಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಕಾಳಜಿಯನ್ನು ವಹಿಸಿಕೊಳ್ಳಬೇಕು. ಮಾನವೀಯ ಗುಣ, ನಿತ್ಯ ವ್ಯಾಯಾಮ, ಉತ್ತಮ ಜೀವನ ಶೈಲಿಯಿಂದ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯವಿದೆ ಎಂದು ನುಡಿದರು.

ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್‌ ಶೆಟ್ಟಿ, ಕಾಂದಿವಲಿ ಅವೆನ್ಯೂ ಹೋಟೇಲಿನ ರಘುರಾಮ ಶೆಟ್ಟಿ, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಸಾಲ್ಯಾನ್‌, ಕುಲಾಲ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್‌, ಮಲಾಡ್‌ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್‌. ವಾಗ್ಲೆ, ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಗಣ್ಯರು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ ಎನ್‌. ಶೆಟ್ಟಿ, ಸಂಚಾಲಕ ಬಿ. ದಿನೇಶ್‌ ಕುಲಾಲ್, ಕೋಶಾಧಿಕಾರಿ ಜಗನ್ನಾಥ್‌ ಎಚ್. ಮೆಂಡನ್‌, ದಶಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಕೆ. ಪೂಜಾರಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್‌ ಪೂಜಾರಿ ಬ್ರಹ್ಮಾವರ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ದನ ಭಟ್ ಇವರನ್ನು ಸಮ್ಮಾನಿಸಿದರು.

Advertisement

ಕಾರ್ಯಕ್ರಮವನ್ನು ಬಾಬಾಪ್ರಸಾದ್‌ ಅರಸ, ರತ್ನಾ ದಿನೇಶ್‌ ಕುಲಾಲ್ ಮತ್ತು ಪ್ರಣೀತಾ ವರುಣ್‌ ಶೆಟ್ಟಿ ನಿರ್ವಹಿಸಿದರು. ಭಾರತಿ ಆಚಾರ್ಯ ಅವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ದನ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು ನಡೆಯಿತು. ಜರಿಮರಿಯ ದಿನೇಶ್‌ ಕೋಟ್ಯಾನ್‌ ಇವರು ಚೆಂಡೆ ವಾದ್ಯದಲ್ಲಿ ಸಹಕರಿಸಿದರು. ಈ ಸಮಾರಂಭಕ್ಕೆ ನಾಲಸೋಪಾರ ಉದ್ಯಮಿ ಶಶಿಧರ ಕೆ. ಶೆಟ್ಟಿ, ನಿತ್ಯಾನಂದ ಪೂಜಾರಿ, ಡಾ| ಎಂ. ಜೆ. ಪ್ರವೀಣ್‌ ಭಟ್, ಸತೀಶ್‌ ಭಟ್, ಪ್ರನೀತಾ ವರುಣ್‌ ಶೆಟ್ಟಿ, ಹರೀಶ್‌ ಶೆಟ್ಟಿ, ಸಂತೋಷ್‌ ಕೆ ಪೂಜಾರಿ, ಉಮೇಶ್‌ ಅಂಚನ್‌ ಮಾರ್ನಾಡ್‌, ಐತು ಆರ್‌. ಮೂಲ್ಯ, ಮುಂಡ್ಕೂರು, ದಿನೇಶ್‌ ಕಾಮತ್‌ ಮೊದಲಾದವರು ವಿವಿಧ ರೀತಿಯಲ್ಲಿ ಪ್ರಾಯೋಜಕರಾಗಿ ಸಹಕರಿಸಿದರು.

ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಕುಮರೇಶ್‌ ಆಚಾರ್ಯ, ಸಿದ್ದರಾಮ ಗೌಡ, ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ನಿತ್ಯಾನಂದ ಕೋಟ್ಯಾನ್‌, ಉಪ ಕಾರ್ಯಾಧ್ಯಕ್ಷರಾದ ಶೈಲೇಶ್‌ ಪೂಜಾರಿ, ದಿನೇಶ್‌ ಪೂಜಾರಿ, ಮಹಾಬಲ ಪೂಜಾರಿ, ಕಾರ್ಯದರ್ಶಿ ದಿನೇಶ್‌ ಕುಂಬ್ಳೆ, ಜತೆ ಕಾರ್ಯದರ್ಶಿಗಳಾದ ಸುಂದರ ಪೂಜಾರಿ, ಸನತ್‌ ಪೂಜಾರಿ, ಪೂಜಾ ಸಮಿತಿಯ ಸದಸ್ಯರಾದ ಗೋಪಾಲ್ ಎಂ ಪೂಜಾರಿ, ರಾಮ್‌ ಪೂಜಾರಿ, ವಿನಯ್‌ ಕುಲಾಲ್, ಜಯ ಪೂಜಾರಿ, ಸದಾನಂದ ಕೋಟ್ಯಾನ್‌, ಉಮೇಶ್‌ ಸಿ ಪೂಜಾರಿ, ಬಾಲಕೃಷ್ಣ ಅಮೀನ್‌, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರು ಸಹಕರಿಸಿದರು.

 

ಚಿತ್ರ-ವರದಿ: ಈಶ್ವರ್‌ ಐಲ್

Advertisement

Udayavani is now on Telegram. Click here to join our channel and stay updated with the latest news.

Next