Advertisement

ತುಳು ಡಿಪ್ಲೊಮಾ ಕೋರ್ಸ್‌: ತುಳುವರ ಕನಸು ನನಸು

08:44 PM May 27, 2019 | sudhir |

ವಿದ್ಯಾನಗರ:ಕಾಸರಗೋಡು ಅನೇಕ ಮತ, ಜಾತಿ, ಭಾಷೆ ಮತ್ತು ಸಂಸ್ಕೃತಿಗಳ ಸಂಗಮ ಸ್ಥಳ. ಆದರೆ ನಾನಾ ಕಾರಣಗಳಿಂದ ಸತತವಾಗಿ ಆಡಳಿತ, ಶೆ„ಕ್ಷಣಿಕ. ಔದ್ಯೋಗಿಕ ಕ್ಷೇತ್ರಗಳಲ್ಲಿ ಮಲಯಾಳಿಗಳ ದಬ್ಟಾಳಿಕೆಗೆ ಒಳಗಾಗುತ್ತಿರುವ ಭಾಷಾ ಅಲ್ಪಸಂಖ್ಯಾಕರಿರುವ, ಹಲವಾರು ವೈವಿಧ್ಯಗಳಿಂದ ಕೂಡಿರುವ ಗಡಿನಾಡಲ್ಲಿ ತುಳು ಭಾಷೆ ಮಾತನಾಡುವವರ ಸಂಖ್ಯೆಯೂ ಹೆಚ್ಚು.

Advertisement

ಪ್ರಾಚೀನ ಭಾಷೆಗಳಲ್ಲೊಂದಾದ ತುಳು ಭಾಷೆಯನ್ನು ದಕ್ಷಿಣ ಭಾರತದ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದೀಗ ಕಣ್ಣೂರು ವಿವಿಯು ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದಲ್ಲಿ ತುಳು ಡಿಪ್ಲೊಮಾ ಕೋರ್ಸ್‌ ಪ್ರಾರಂಭಿಸುವ ಮೂಲಕ ಕಾಸರ ಗೋಡಿನ ತುಳುವರ ಕನಸನ್ನು ನನಸಾಗಿಸಲು ಮುಂದಾಗಿದೆ.

ಜುಲೈಯಲ್ಲಿ ಪ್ರಾರಂಭ
ತುಳು ಮಾತƒಭಾಷೆಯಾಗಿರುವ ಸಾವಿರಾರು ತುಳುವರು ಕಾಸರಗೋಡಿನಲ್ಲಿದ್ದಾರೆ. ಸಂವಿಧಾನದ ಎಂಟನೇ ಪರಿಚ್ಛೇದ ದಲ್ಲಿ ತುಳು ಭಾಷೆಯನ್ನು ಸೇರಿಸಬೇಕೆಂಬ ಬೇಡಿಕೆ ಸತತವಾಗಿ ಸಾಗುತ್ತಿರುವಾಗಲೇ ಈ ಕೋರ್ಸ್‌ ಆರಂಭವಾಗಿರುವುದು ತುಳುವರ ಸಂತಸಕ್ಕೆ ಕಾರಣವಾಗಿದೆ.

ಮಾತ್ರವಲ್ಲದೆ ತುಳು ಭಾಷೆ ಮತ್ತು ಪ್ರಾಚೀನ ತುಳು ಸಾಹಿತ್ಯಕ್ಕೆ ಜೀವ ತುಂಬಿದಂತಾ ಗುವುದು. ಕಾಸರಗೋಡು ಮಾತ್ರವಲ್ಲದೆ ಮಂಗಳೂರು, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ ಆಸಕ್ತರಿಗೂ ತುಳು ಡಿಪ್ಲೊಮಾ ಕೋರ್ಸ್‌ ಮಾಡಬಹುದಾಗಿದೆ. ಅರ್ಜಿ ಮತ್ತು ಶುಲ್ಕದ ಬಗೆಗಿನ ಮಾಹಿತಿ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ.

ಕಣ್ಣೂರು ವಿಶ್ವವಿದ್ಯಾಲಯದ ವಿದ್ಯಾನಗರದ ಚಾಲದಲ್ಲಿರುವ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದಲ್ಲಿ ಒಂದು ವರ್ಷದ ತುಳು ಡಿಪ್ಲೊಮಾ ಕೋರ್ಸ್‌ ನಡೆಸಲು ಅನುಮತಿ ಲಭಿಸಿದ್ದು ವಾರಾಂತ್ಯದ ತರಗತಿಗಳಿಗಾಗಿ ಪ್ರತಿ ಶನಿವಾರ ತರಗತಿಗಳು ನಡೆಯಲಿವೆ. ಪದವಿ ವಿದ್ಯಾರ್ಥಿಗಳು, ಶಿಕ್ಷಕರು, ಇತರ ಆಸಕ್ತರು ಡಿಪ್ಲೊಮಾ ಕೋರ್ಸಿಗೆ ಪ್ರವೇಶ ಪಡೆಯಬಹುದು. ಶೀಘ್ರವಾಗಿ ಪ್ರಕ್ರಿಯೆಗಳು ನಡೆಯಲಿದ್ದು ಪ್ರಸಕ್ತ ಶೆ„ಕ್ಷಣಿಕ ವರ್ಷದ ತರಗತಿಗಳು ಜುಲೆ„ಯಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ. ಇಲ್ಲಿ ಈಗಾಗಲೇ ಕನ್ನಡ ಎಂಫಿಲ್‌ ಕಾರ್ಯಾಚರಿಸುತ್ತಿದೆ.

Advertisement

ಅರೆ‌ಬಿಕ್‌ ಡಿಪ್ಲೊಮಾ ಕೋರ್ಸ್‌
ಬಹುಭಾಷಾ ಪ್ರದೇಶವಾದ ಕಾಸರಗೋಡಿನಲ್ಲಿ ತುಳುವಿನೊಂದಿಗೆ ಅರಬಿಕ್‌ ಡಿಪ್ಲೊಮಾ ಕೋರ್ಸ್‌ ಕೂಡ ಈ ಶೆ„ಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದೆ. 2019-20ನೇ ಶೆ„ಕ್ಷಣಿಕ ವರ್ಷದಿಂದ ಟ್ರಾನ್ಸ್‌ಲೇಶನ್‌ ಆ್ಯಂಡ್‌ ಅರೆಬಿಕ್‌ ಪಿಜಿ ಡಿಪ್ಲೊಮಾ ಹಾಗೂ ತುಳು ಭಾಷಾ ಕಲಿಕೆಯಲ್ಲಿ ಡಿಪ್ಲೊಮಾ ಕೋರ್ಸ್‌ ಆರಂಭಿಸಲು ಕಳೆದ ಶೆ„ಕ್ಷಣಿಕ ವರ್ಷದ ಆರಂಭದಲ್ಲೇ ತೀರ್ಮಾನಿಸಲಾಗಿತ್ತು.

ಅರ್ಹತೆ ತಲಾ ಮೂವತ್ತು ಸೀಟುಗಳಿರುವ ತುಳು ಮತ್ತು ಅರೆಬಿಕ್‌ ಡಿಪೊÉಮಾ ಕೋರ್ಸ್‌ ಇದಾಗಿದ್ದು ಅರಬಿಕ್‌ ಡಿಪ್ಲೊಮಾಕ್ಕೆ ಬಿಎ ಅರೆಬಿಕ್‌ ವಿದ್ಯಾರ್ಹತೆಯಾಗಿದೆ. ಪ್ಲಸ್‌ಟು ತೇರ್ಗಡೆಯಾದವರು ತುಳು ಡಿಪ್ಲೊಮಾಕ್ಕೆ ಸೇರಬಹುದಾಗಿದೆ. ಒಂದು ವರ್ಷದ ಕೋರ್ಸ್‌ನಲ್ಲಿ 200 ಗಂಟೆಗಳ ತರಗತಿ ನಡೆಯಲಿದೆ. ರೆಗ್ಯುಲರ್‌ ಕೋರ್ಸ್‌ಗೆ ತೆರಳುವವರು ಕೂಡ ತುಳೂ ಡಿಪ್ಲೊಮಾ ಕೋರ್ಸ್‌ ಮಾಡಬಹುದು. ತುಳು ಭಾಷೆ, ಪ್ರಾಚೀನ ಸಾಹಿತ್ಯ, ಪತ್ರಿಕೋದ್ಯಮ ಮೊದಲಾದವುಗಳಿಗೆ ಸಂಬಂ ಸಿದ ವಿಷಯಗಳಲ್ಲಿ ತರಗತಿ ನಡೆಯಲಿದೆ.

ಪ್ರಯತ್ನಕ್ಕೆ ಸಿಕ್ಕಿತು ಫಲ
2015ರಲ್ಲಿ ಕಾಸರಗೋಡು ಕ್ಯಾಂಪಸ್‌ನ ಭಾರತೀಯ ಭಾಷಾ ಅಧ್ಯಯನಾಂಗ ವಿಭಾಗದ ಸಂಯೋಜಕರಾಗಿ ಸೇರ್ಪಡೆಗೊಂಡ ಡಾ| ಯು. ಮಹೇಶ್ವರಿ ಕಾಸರಗೋಡಿನಲ್ಲಿ ತುಳು ಡಿಪ್ಲೊಮಾ ಕೊರ್ಸ್‌ ಆರಂಭಿಸುವಂತೆ ವಿವಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ವಿವಿಯು ಅದನ್ನು ಅಂಗೀಕರಿಸದಿದ್ದಾಗ ತುಳು ಡಿಪ್ಲೊಮಾ ಕೋರ್ಸ್‌ನ ಸಾಧ್ಯೆತೆಗಳು ಮತ್ತು ಅದರ ಅಗತ್ಯದ ಬಗ್ಗೆ ಸಮಗ್ರ ಅಧ್ಯಯನ ವರದಿ ಸಲ್ಲಿಸಿದ್ದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ವಿಳಂಬಗೊಂಡಿರುವುದು ಮತ್ತು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಅಗತ್ಯದ ಸ್ಥಳಾವಕಾಶ ಇಲ್ಲದಿರುವುದರಿಂದ 2018ರಲ್ಲಿ ವಿವಿಯು ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗವನ್ನು ಚಾಲದ ಕ್ಯಾಂಪಸ್‌ಗೆ ಸ್ಥಳಾಂತರಿಸಿದ್ದು ಡಾ| ರಾಜೇಶ್‌ ಬೆಜ್ಜಂಗಳ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿತು.

ಕಾಸರಗೋಡು ಸರಕಾರಿ ಕಾಲೇಜು ಮತ್ತು ಮಂಜೇಶ್ವರ ಸರಕಾರಿ ಕಾಲೇಜುಗಳಲ್ಲಿ ವಿವಿಧ ಕೋರ್ಸ್‌ಗಳ ಸಾಧ್ಯತೆಯನ್ನು ಮನಗಂಡು ಅವುಗಳನ್ನು ಜಾರಿಗೊಳಿಸುವಂತೆ ಸತತವಾಗಿ ವಿವಿಯನ್ನು ಒತ್ತಾಯಿಸುತ್ತಿದ್ದ ಬೆಜ್ಜಂಗಳ ಅವರು ತುಳು ಕೋರ್ಸಿನ ಅನುಮತಿಗಾಗಿ ಸತತ ಪ್ರಯತ್ನ ಮಾಡುತ್ತಲೇ ಇದ್ದರು. ಕೊನೆಗೂ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ ತುಳು ಮತ್ತು ಅರೆಬಿಕ್‌ ಡಿಪ್ಲೊಮಾ ಕೋರ್ಸ್‌ಗಳು. ಇದು ಶ್ಲಾಘನೀಯ. ಚಾಲದಲ್ಲಿ ಅಗತ್ಯ ಸ್ಥಳಾವಕಾಶ ಇರುವುದು ಇದಕ್ಕೆ ಅನುಕೂಲಕರವಾಯಿತು.

ಬಹುಭಾಷಾ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಿರುವ ಕಾಸರಗೋಡಿನ ಜನತೆಗೆ ವಿಪುಲವಾದ ಅಧ್ಯಯನ ಮತ್ತು ಸಂಶೋಧನಾ ಸಾಧ್ಯತೆಯ ಬಾಗಿಲುಗಳು ಒಂದೊಂದಾಗಿ ತೆರೆಯುತ್ತಿದ್ದು ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸುವ ಮನಃಸ್ಥಿತಿ ನಮ್ಮದಾಗಬೇಕು.

ಏನೆಲ್ಲ ಕಲಿಯಬಹುದು?
ತುಳು ಡಿಪ್ಲೊಮಾ ಕೋರ್ಸ್‌ಗೆ ಎರಡು ಪೇಪರ್‌ ಹಾಗೂ ಒಂದು ಸಂಪ್ರಬಂಧ ಇದೆ. ಪ್ರಾಚೀನ ತುಳು ಕಾವ್ಯ, ತುಳಿ ಕಥೆ, ಹೊಸ ತುಳು ಕಾವ್ಯ, ಸಾಹಿತ್ಯ-ಸಾಂಸ್ಕೃತಿಕ ಚರಿತ್ರೆ ಇತ್ಯಾದಿ ಸಿಲಬಸ್‌ನಲ್ಲಿದೆ. ಅರೆಬಿಕ್‌ ಡಿಪೊÉಮಾ ಕೋರ್ಸ್‌ನಲ್ಲಿ ಭಾಷಾಂತರ ಪ್ರಧಾನವಾಗಿದೆ. ಅರಬ್‌ ರಾಷ್ಟ್ರಗಳಲ್ಲಿ ಉದ್ಯೋಗಾವಕಾಶ ಹೇರಳವಾಗಿರುವ ಕೋರ್ಸ್‌ ಇದಾಗಿದ್ದು ಕಾಸರಗೋಡಿನ ಜನತೆಗೆ ಈ ಕೋರ್ಸ್‌ಗಳು ವರದಾನವಾಗಿ ಪರಿಣಮಿಸಿದೆ.

ಅಭಿನಂದನೀಯ
ಕಾಸರಗೋಡಿನಲ್ಲಿ ತುಳು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯುತ್ತಮ ಹೆಜ್ಜೆ. ಕನ್ನಡ ಭಾಷೆಯ ದುಃಸ್ಥಿತಿಯಲ್ಲಿ ತುಳುಭಾಷೆಯ ಬೆಳವಣಿಗೆಯಾಗುತ್ತಿರುವುದು ಮಹತ್ವದ ವಿಚಾರ.ಮಲಯಾಳ ಲಿಪಿಯು ತುಳುವಿನಿಂದ ಸ್ವೀಕರಿಸಿದ್ದು ಎಂಬುದನ್ನು ಮಲೆಯಾಳ ಭಾಷಾತಜ್ಞರು ಈಗಾಗಲೇ ಅಂಗೀಕರಿಸಿದ್ದಾರೆ. ಆದುದರಿಂದ ಈ ಕೋರ್ಸ್‌ ಭಾಷಾ ಬೆಳವಣಿಗೆ ಮತ್ತು ಸಾಹಿತ್ಯ, ಸಂಶೋಧನೆಗೆ ಮೈಲುಗಲ್ಲಾಗಲಿದೆ. ತುಳುಭಾಷಿಗರ ಸಹಕಾರ ಮತ್ತು ಪ್ರೇರಣೆ ಅತೀ ಅಗತ್ಯವಾಗಿ ಇರಬೇಕು. ತುಳು ಮತ್ತು ಅರೆಬಿಕ್‌ ಡಿಪ್ಲೊಮಾ ಕೋರ್ಸ್‌ ಆರಂಭಿಸಿದ ವಿವಿಯನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
-ಡಾ| ರಾಜೇಶ್‌ ಬೆಜ್ಜಂಗಳ
ನಿರ್ದೇಶಕರು, ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗ.

– ವಿದ್ಯಾಗಣೇಶ್‌ ಅಣಂಗೂರು

Advertisement

Udayavani is now on Telegram. Click here to join our channel and stay updated with the latest news.

Next