Advertisement
ಈಗಿನ ಮಕ್ಕಳು ತುಳು ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ ಎಂಬ ಆರೋಪ ಸಾಮಾನ್ಯವಾದುದು ಮತ್ತು ಸಾರ್ವತ್ರಿಕವಾದುದು. ಆದರೆ ಅದು ಪೂರ್ತಿ ಸತ್ಯವಲ್ಲ ಎಂದು ತೋರಿಸಿಕೊಟ್ಟವರು ಜೂ. 30ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಮಕ್ಕಳು. ತುಳುನಾಡಿನಲ್ಲಿ ಹಿಂದಿನ ಮಕ್ಕಳು ಬೇರೆ ಬೇರೆ ಆಟಗಳ ಮೂಲಕ ಖುಷಿ ಪಡುತ್ತಿದ್ದರು. ಆದರೆ ಈಗ ಅವುಗಳನ್ನು ಕಾಣುವುದು ತುಂಬಾ ಕಷ್ಟ. ಹಳ್ಳಿ ಪ್ರದೇಶಗಳಿಗೆ ಸೀಮಿತವಾಗಿರುವ ಇವು ಈ ಸಭಾಂಗಣದಲ್ಲಿ ಕಂಡು ಬಂದವು ಮತ್ತು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ತುಳುಕೂಟ ಉಡುಪಿ ನೇತೃತ್ವದಲ್ಲಿ ಜರಗಿದ್ದ ಮದಿ ರೆಂಗಿದ ರಂಗ್ ಎಂಬ ತುಳು ಸಂಸ್ಕೃತಿ ಸಂಬಂಧಿ ಸಿದ ಕಾರ್ಯ ಕ್ರ ಮ ದಲ್ಲಿ ವಿವಿಧ ವಿಶಿಷ್ಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅವುಗಳಲ್ಲಿ ಮಕ್ಕಳಿಗೆಂದೇ ಕೆಲವು ಸ್ಪರ್ಧೆಗಳು ಮೀಸಲಾಗಿದ್ದರೆ, ಮತ್ತೆ ಕೆಲವು ಸ್ಪರ್ಧೆಗಳು ಮಹಿಳೆಯರಿಗೆ ಮತ್ತು ಪುರುಷರಿಗಾಗಿ ನಡೆದವು.
Related Articles
Advertisement
ಇಲ್ಲಿನ ಸ್ಪರ್ಧೆಗಳೆಲ್ಲವೂ ಸಾಂಪ್ರದಾಯಿಕ ರೀತಿಯಲ್ಲಿಯೇ ನಡೆದಿತ್ತು. ಮೆಹಂದಿ ಸ್ಪರ್ಧೆಯಲ್ಲಿ ಅದು ಹೆಚ್ಚು ಗಮನ ಸೆಳೆಯಿತು. ಇದರಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಕೋನ್ ಬಳಕೆಗೆ ಅವಕಾಶ ಇರಲಿಲ್ಲ. ಮಕ್ಕಳು ಚಕಚಕನೆ ಹಲಸಿನ ಬೀಜದ ಸಿಪ್ಪೆ ಸುಲಿದದ್ದು ತುಂಬಾ ಖುಷಿಯಾಯಿತು. ಇದೆಲ್ಲ ಹಿಂದಿನ ಮಕ್ಕಳು ಮಳೆಗಾಲದಲ್ಲಿ ಮಾಡುವಂಥದ್ದೇ ಆಗಿತ್ತು. ಎಲೆಯಲ್ಲಿ ವಿಷಲ್ ಊದುವುದು ಹಿಂದೆಲ್ಲ ಬಾಲ್ಯದಲ್ಲಿ ಸಾಮಾನ್ಯವಾಗಿತ್ತು. ಈಗಿನ ಮಕ್ಕಳಿಗೆ ಅದರ ಬಗ್ಗೆ ಮಾಹಿತಿ ಕಡಿಮೆ. ಆದರೆ ಈ ಕಾರ್ಯಕ್ರಮ ನೋಡಿದ ಬಳಿಕ ಎಷ್ಟೋ ಮಕ್ಕಳು ಮನೆ ಸಮೀಪದಲ್ಲಿ ಸಿಗುವ ಎಲೆಯಲ್ಲಿ ಇಂಥ ಪ್ರಯೋಗ ಮಾಡುವುದು ಖಚಿತ.
ಮಕ್ಕಳಲ್ಲಿರುವ ಕೌಶಲಕ್ಕೆ ಸಾಕ್ಷಿಯಾದುದು ಕೇಶಾಲಂಕಾರ ಮತ್ತು ಕಾಗದಗಳಲ್ಲಿ ಆಟಿಕೆ ತಯಾರಿಸುವುದು. ಅವರವರ ಕಲ್ಪನೆಗೆ ತಕ್ಕಂತೆ ಇಲ್ಲಿ ಕೇಶಾಲಂಕಾರ ಮತ್ತು ಆಟಿಕೆಗಳು ಮೂಡಿ ಬಂದವು. ಇಲ್ಲಿ ಬಹುಮಾನ ಪಡೆದವು ಕೆಲವಾದರೂ, ಅಲ್ಲಿ ಕಂಡು ಬಂದ ಪ್ರತಿಯೊಂದೂ ಹೊಸತನದಿಂದ ಕೂಡಿದ್ದವು ಎಂಬುದು ವಿಶೇಷ.
ಮಹಿಳೆಯರು ಮತ್ತು ಪುರುಷರು ಕೂಡ ತಮಗಿದ್ದ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತುಳು ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರಿಸಿದರು. ಜತೆಗೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮತ್ತೂಂದು ಅಂಶವೆಂದರೆ ಸಾವಯವ ತರಕಾರಿ ಮಾರಾಟ ಮಾಡುವ ಮೂವರು ಮಹಿಳೆಯರಿಗೆ ಸಂದಿರುವ ಸಮ್ಮಾನ. ಹಿಂದೆಲ್ಲ ಹಳ್ಳಿ ಭಾಗದಲ್ಲಿ ಸಾವಯವ ತರಕಾರಿಯೇ ಸಿಗುತ್ತಿತ್ತು. ಈಗ ಅದು ಅಪರೂಪವಾದರೂ, ತಾವೇ ಬೆಳೆಸಿದ ತರಕಾರಿ ಮಾರುತ್ತಾ ಜೀವನ ಸಾಗಿಸುವ ಮೂವರಿಗೆ ಸ್ಪರ್ಧೆ ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಸಮ್ಮಾನ ಸಂದಿರುವುದು ಶ್ಲಾಘನೀಯ.
ತುಳು ಸಂಸ್ಕೃತಿ ಮತ್ತು ಭಾಷೆಗಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಉಡುಪಿಯ ತುಳು ಕೂಟದ ಈ ಕಾರ್ಯಕ್ರಮ ಶ್ಲಾಘನೀಯ. ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಿದ ಸಂಘಟನೆಯ ಪ್ರಮುಖರಾದ ಗೌರವಾಧ್ಯಕ್ಷ ಡಾ| ಭಾಸ್ಕರಾನಂದ ಕುಮಾರ್, ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮತ್ತು ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರಿಗೆ ಮೆಚ್ಚುಗೆ ಅಗತ್ಯ.
ಪುತ್ತಿಗೆ ಪದ್ಮನಾಭ ರೈ