ವಾಷಿಂಗ್ಟನ್: ಅಮೆರಿಕದ ಸಂಸತ್ತಿಗೆ ಆಯ್ಕೆಯಾದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿರುವ, ಡೆಮಾಕ್ರಾಟಿಕ್ ಪಕ್ಷದ ಸಂಸದೆ ತುಳಸಿ ಗಬ್ಟಾರ್ಡ್, 2022ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಇನ್ನೊಂದು ವಾರದಲ್ಲಿ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಅಮೆರಿಕ ಸಂಸತ್ತಿನ ಕೆಳಮನೆಯಾದ “ಹೌಸ್ ಆಫ್ ರೆಪ್ರಸೆಂಟೇಟಿವ್ಸ್’ಗೆ ಹವಾಯಿ ದ್ವೀಪದಿಂದ 4 ಬಾರಿ ಆಯ್ಕೆಯಾಗಿರುವ ಹೆಗ್ಗಳಿಕೆ ಗಬ್ಟಾರ್ಡ್ ಅವರದ್ದು.
ತಾವು ಅಧ್ಯಕ್ಷರಾದರೆ, ಅಮೆರಿಕನ್ನರಿಗೆ ಉತ್ತಮ ಆರೋಗ್ಯ ಸೇವೆ, ವಲಸೆ ನೀತಿಗಳ ಸಮಗ್ರ ಸುಧಾರಣೆ, ಮುಂದಿನ ಪೀಳಿಗೆಗಳಿಗಾಗಿ ಶುದ್ಧ ನೀರು, ಗಾಳಿ, ಹಳಿ ತಪ್ಪಿರುವ ಅಪರಾಧ ನಿಗ್ರಹ ವ್ಯವಸ್ಥೆಯನ್ನು ಮರಳಿ ಸರಿದಾರಿಗೆ ತರುವುದು, ಆಡಳಿತ ಯಂತ್ರವನ್ನು ಭ್ರಷ್ಟಾಚಾರ, ಲಾಬಿಗಳಿಂದ ಮುಕ್ತವಾಗಿಸುವುದು ಸೇರಿ ಹಲವಾರು ಗುರಿಗಳನ್ನು ತಾವು ಹೊಂದಿರುವುದಾಗಿ ಗಬ್ಟಾರ್ಡ್ ತಿಳಿಸಿದ್ದಾರೆ.
ಇವರೂ ಸೇರಿದಂತೆ, ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡೆಮಾಕ್ರಾಟಿಕ್ ಸಂಸದರ ಸಂಖ್ಯೆ 13ಕ್ಕೇರಿದೆ. ಇತ್ತೀಚೆಗೆ, ಇದೇ ಪಕ್ಷದ ಹಿರಿಯ ಸಂಸದೆ ಎಲಿಜಬೆತ್ ವಾರೆನ್, ಭಾರತ ಮೂಲದ ಕಮಲಾ ಹ್ಯಾರಿಸ್ ಕೂಡ ಇದೇ ಆಸೆಯನ್ನು ವ್ಯಕ್ತಪಡಿಸಿದ್ದರು.
ಅಮೆರಿಕ ಸಂಸತ್ತಿಗೆ ಆಯ್ಕೆಯಾದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿರುವ ತುಳಸಿ
ಹವಾಯಿ ದ್ವೀಪದಿಂದ ನಾಲ್ಕು ಬಾರಿ ಕೆಳಮನೆಗೆ ಆಯ್ಕೆಯಾಗಿರುವ ಡೆಮಾಕ್ರಾಟಿಕ್ ಪಕ್ಷದ ನಾಯಕಿ
ಮುಂದಿನವಾರ ಅಧಿಕೃತ ಘೋಷಣೆ