ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರ ಸಂಬಂಧಿ ಮನೋಜ್ ಕುಮಾರ್ ನಾಯಕನಾಗಿ ನಟಿಸಿರುವ “ಟಕ್ಕರ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟೀಸರ್ ಹಾಗೂ ಆಡಿಯೋವನ್ನು ಅದ್ಧೂರಿಯಾಗಿ ಹೊರತಂದಿದೆ.
ನಟ ದರ್ಶನ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ “ಟಕ್ಕರ್’ ಚಿತ್ರದ ಟ್ರೇಲರ್ ಹಾಗೂ ಆಡಿಯೋವನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ವೇಳೆ ಮಾತನಾಡಿದ ದರ್ಶನ್, “ಮನೋಜ್ ಬೇರೆ ಯಾರೂ ಅಲ್ಲ. ನನ್ನ ಅಕ್ಕನ ಮಗ. ನಮ್ಮ ದೊಡ್ಡಪ್ಪನ ಮೊಮ್ಮಗ. ಈ ಹಿಂದೆ ನನ್ನ ಜೊತೆ “ಅಂಬರೀಶ’ ಹಾಗೂ “ಚಕ್ರವರ್ತಿ’ ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ಚಿತ್ರರಂಗದಲ್ಲಿ ಬೆಳೆಯಬೇಕೆಂದು ಸಾಕಷ್ಟು ಕಷ್ಟಪಡುತ್ತಿದ್ದಾನೆ. “ಟಕ್ಕರ್’ ಚಿತ್ರದಲ್ಲಿ ಒಳ್ಳೆಯ ಕಂಟೆಂಟ್ ಇದೆ. ಟೀಸರ್‌ನಲ್ಲಿ ಎಲ್ಲರ ಪರಿಶ್ರಮ ಎದ್ದು ಕಾಣುತ್ತಿದೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು.
ಈ ಹಿಂದೆ “ರನ್ ಆ್ಯಂಟನಿ’ ಚಿತ್ರವನ್ನು ನಿರ್ದೇಶಿಸಿದ್ದ ರಘು ಶಾಸ್ತ್ರಿ “ಟಕ್ಕರ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರಘು ಶಾಸ್ತ್ರಿ “ಇವತ್ತು ನಮ್ಮ ಮನೆಯ ಹೆಣ್ಣು ಮಕ್ಕಳು ನಮ್ಮ ಮನೆಯಲ್ಲೇ ಸೇಫ್ ಆಗಿಲ್ಲ ಎನ್ನುವುದೇ ಈ ಸಿನಿಮಾದ ಕಾನ್ಸೆಪ್ಟ್. ಸೈಬರ್ ಕ್ರೈಂ ಹಿನ್ನೆಲೆಯಲ್ಲಿ ಚಿತ್ರದ ಕಥೆ ನಡೆಯುತ್ತದೆ. ಸುಮಾರು 65 ದಿನಗಳ ಕಾಲ ಈ ಚಿತ್ರವನ್ನು ಮೈಸೂರು, ಬೆಂಗಳೂರು ಮತ್ತು ಮಲೇಶಿಯಾದಲ್ಲಿ ಮೂರು ಶೆಡ್ನೂಲ್‌ನಲ್ಲಿ ಚಿತ್ರೀಕರಿಸಿದ್ದೇವೆ. ಚಿತ್ರದಲ್ಲಿ ಸುಮಾರು 30 ನಿಮಿಷಗಳ ಗ್ರಾಫಿಕ್ಸ್ ಇದೆ. “ಟಕ್ಕರ್’ ಅಂದ್ರೆ ಪಾಸಿಟಿವ್ ಹಾಗೂ ನೆಗೆಟೀವ್ ಎರಡೂ ಆಗಿರಬಹುದು. ಚಿತ್ರದಲ್ಲಿ ಕೂಡ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷ ಕಾಣಬಹುದು. ಜೊತೆಗೆ ಒಂದೊಳ್ಳೆ ಲವ್ ಸ್ಟೋರಿ, ಆ್ಯಕ್ಷನ್ ಪ್ಯಾಕ್ ಈ ಚಿತ್ರದಲ್ಲಿದೆ’ ಎಂದು ವಿವರಣೆ ನೀಡಿದರು.
ಇದೇ ವೇಳೆ ಮಾತನಾಡಿದ ನಾಯಕ ಮನೋಜ್ ಕುಮಾರ್, “ನಮ್ಮ ಸುತ್ತಮುತ್ತ ನಡೆಯುವ ಸೈಬರ್ ಕ್ರೈಂಗೆ ಸಂಬಂಧಿಸಿದ ಕಥೆ ಇದರಲ್ಲಿದೆ. ಕಮರ್ಶಿಯಲ್ ಆಗಿ ಚಿತ್ರವನ್ನು ಹೇಳಬೇಕೆಂದು ಐದು ಫೈಟ್ಸ್ ಇಟ್ಟಿದ್ದೇವೆ. ಒಂದು ಎಂಟರ್‌ಟೈನ್ಮೆಂಟ್ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ನಮ್ಮ ಚಿತ್ರದಲ್ಲಿದೆ. ಇನ್ನು ನಮ್ಮ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲಿನಿಂದಲೂ ಬೆನ್ನೆಲುಬಾಗಿ ನಿಂತಿದ್ದಾರೆ. ಚಿತ್ರದ ಪ್ರತೀ ಹಂತದಲ್ಲೂ ದರ್ಶನ್ ಮತ್ತು ದಿನಕರ್ ಅವರು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ ಅವರಿಗೆ “ಟಕ್ಕರ್’ ತಂಡ ಆಭಾರಿಯಾಗಿದೆ’ ಎಂದರು.
ಕೆ.ಎನ್.ನಾಗೇಶ್ ಕೋಗಿಲು ನಿರ್ಮಾಣದ “ಟಕ್ಕರ್’ ಚಿತ್ರದಲ್ಲಿ ನಾಯಕ ಮನೋಜ್‌ಗೆ ನಾಯಕಿಯಾಗಿ “ಪುಟ್ಟಗೌರಿ ಮದುವೆ’ ಖ್ಯಾತಿಯ ರಂಜನಿ ರಾಘವನ್ ಕಾಣಿಸಿಕೊಂಡಿದ್ದಾರೆ. ಖಳನಾಯಕನಾಗಿ “ಭಜರಂಗಿ’ ಖ್ಯಾತಿಯ ಸೌರವ್ ಲೋಕಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಡುಗಡೆಯಾಗಿರುವ “ಟಕ್ಕರ್’ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಕದ್ರಿ ಮಣಿಕಾಂತ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ವಿಜಯಪ್ರಕಾಶ್, ಅನುರಾಧ ಭಟ್, ಸಂಚಿತ್ ಹೆಗ್ಡೆ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಡಾ. ವಿ ನಾಗೇಂದ್ರ ಪ್ರಸಾದ್ ಹಾಗೂ ರಘುಶಾಸ್ತ್ರಿ ಸಾಹಿತ್ಯವಿದೆ. ಸದ್ಯ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ “ಟಕ್ಕರ್’.