ವಿಧಾನಸಭೆ: ತುಕ್ಡೆ ತುಕ್ಡೆ ಗ್ಯಾಂಗ್ ಪದ ಬಳಕೆ ಮಂಗಳವಾರ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ನಿಲುವಳಿ ಸೂಚನೆಯಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿ ಸಿಎಎ, ಮಂಗಳೂರು, ಬೀದರ್ ಪ್ರಕರಣ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂವಿಧಾನದ ಹಕ್ಕು ಕಸಿಯಲಾಗಿದೆ, ವಾಕ್ ಸ್ವಾತಂತ್ರ್ಯಕ್ಕೆ ಕುತ್ತು ತರಲಾಗಿದೆ ಎಂದು ಆರೋಪಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪತ್ರಿಕಾ ಸ್ವಾತಂತ್ರ್ಯ ಕಸಿದು ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್. ಬಿಜೆಪಿ ಪ್ರಜಾಪ್ರಭುತ್ವಕ್ಕೆ ಬೆಲೆ ನೀಡಿದೆ ಎಂದು ಸಮರ್ಥಿಸಿಕೊಂಡರು. ಈಶ್ವರಪ್ಪ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ “ನೀವೂ ಇಂದಿರಾಗಾಂಧಿ ಅವರನ್ನು ವಿರೋಧಿಸಿದ್ದೀರಿ, ಆಗ ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದವರನ್ನು ಜೈಲಿಗೆ ಕಳುಹಿಸಲಾಗಿತ್ತು. ಅಂತಹ ಪರಿಸ್ಥಿತಿ ಈಗಿಲ್ಲ’ ಎಂದು ಹೇಳಿದರು.
ಆಗ ಸಿದ್ದರಾಮಯ್ಯ ಅವರು, ಭಾರತ ಮಾತೆ ಬಿಜೆಪಿ ಆಸ್ತಿಯಲ್ಲ. ದೇಶದ 135 ಕೋಟಿ ಜನರೂ ಭಾರತಾಂಬೆ ಮಕ್ಕಳೇ ಎಂದು ತಿಳಿಸಿದರು. ಬಿಜೆಪಿಯ ಸಿ.ಟಿ.ರವಿ ಎಲ್ಲರೂ ಭಾರತ ಮಾತೆಯ ಮಕ್ಕಳೇ ಆದರೆ ತುಕ್ಡೆ ತುಕ್ಡೆ ಗ್ಯಾಂಗ್ ಸದಸ್ಯರೂ ಇಲ್ಲಿದ್ದಾರೆ ಎಂದು ಹೇಳಿದರು. ಇದು ಕಾಂಗ್ರೆಸ್‌ನ ಜಮೀರ್ ಅಹಮದ್, ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ ಅವರನ್ನು ಕೆರಳಿಸಿತು. ಪ್ರಿಯಾಂಕ್ ಖರ್ಗೆ ಅವರು, ಕೇಂದ್ರದ ಗೃಹ ಸಚಿವರೇ ದೇಶದಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ ಎಂಬ ಸಂಘಟನೆ ಇಲ್ಲ ಎಂದು ಆರ್‌ಟಿಐನಲ್ಲಿ ತಿಳಿಸಿದ್ದಾರೆ. ತುಕ್ಡೆ ತುಕ್ಡೆ ಗ್ಯಾಂಗ್ ಇದ್ದರೆ ಬಂಧಿಸಿ ಎಂದು ಆಗ್ರಹಿಸಿದರು.
ಮುಗಿಬಿದ್ದ ಜಮೀರ್: ಜಮೀರ್ ಅಹಮದ್, “ನಿಮಗೆ ನೀವೇ ಊಹಿಸಿಕೊಂಡು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಹೇಳಿಕೊಳ್ಳುತ್ತಿದ್ದೀರಿ. ಶಾಸಕ ಸೋಮಶೇಖರ್ ಅವರು ಪ್ರಚೋದನಾಕಾರಿ ಭಾಷಣ ಮಾಡಿದರೂ ಏಕೆ ಪ್ರಕರಣ ದಾಖಲಿಸಲಿಲ್ಲ’. ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ನೀವು ಬೆಂಕಿ ಹಚ್ಚುತ್ತಿದ್ದೀರಿ ಎಂದು ಗೃಹ ಸಚಿವರ ಮೇಲೆ ಮುಗಿಬಿದ್ದರು. ಯು.ಟಿ.ಖಾದರ್, ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಹೇಳುತ್ತಲೇ ಇದ್ದೀರಿ. ಒಬ್ಬರನ್ನಾದರೂ ಪತ್ತೆ ಹಚ್ಚಿದ್ದೀರಾ? ಎಂದು ಪ್ರಶ್ನಿಸಿದರು.
ತುಕ್ಡೆ ತುಕ್ಡೆ ಗ್ಯಾಂಗ್ ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ಪ್ರತಿಪಕ್ಷ ಸದಸ್ಯರತ್ತ ನೋಡಿ ಬಸವರಾಜ ಬೊಮ್ಮಾಯಿ ಹೇಳಿದರು. ಪ್ರಿಯಾಂಕ್ ಖರ್ಗೆ, ಗೊತ್ತಿದ್ದರೆ ಬಂಧಿಸಿ, ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕಿದರು. ಕನ್ಹಯ್ಯಕುಮಾರ್ ದೇಶದ್ರೋಹದ ಹೇಳಿಕೆ ಕೊಡುವುದನ್ನು ಸಮರ್ಥಿಸುವವರು ನೀವು ಎಂದು ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ ಹೇಳಿದರು.
ಇದಕ್ಕೆ ದಿನೇಶ್ ಗುಂಡೂರಾವ್, ಉಗ್ರ ಅಜರ್ ಮಸೂದ್‌ನನ್ನು ಬಿಟ್ಟುಕೊಟ್ಟವರು ನೀವು ಎಂದು ತಿರುಗೇಟು ಕೊಟ್ಟರು. ಪಾಕಿಸ್ತಾನಕ್ಕೆ ಕದ್ದುಮುಚ್ಚಿ ಹೋಗಿ ಬಿರಿಯಾನಿ ತಿಂದವರು ನಿಮ್ಮ ಪ್ರಧಾನಿ ಎಂದು ಆರೋಪಿಸಿದರು. ಗಮನಿಸಿದ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ನಮ್ಮ ಕಡೆಯಿಂದ ಯಾರೂ ಮಾತನಾಡಬೇಡಿ ಎಂದು ತಾಕೀತು ಮಾಡಿ ಕುಳ್ಳಿರಿಸಿದರು. ಆಗ, ಸಿದ್ದರಾಮಯ್ಯ, ಅನುಭವ ಇದ್ದವರಿಗೆ ಇದೆಲ್ಲಾ ಗೊತ್ತಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ, ಸಿ.ಟಿ.ರವಿಯತ್ತ ನೋಡಿ ಹೇಳಿದರು.
ಮಾತು ಮುಂದುವರಿಸಿ, ತುರ್ತು ಪರಿಸ್ಥಿತಿ ದೇಶದಲ್ಲಿ ಹೇರಿದ್ದು ನಿಜ. ಆದರೆ, ರಾಜ್ಯದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇರುವುದು ನಿಜ ಎಂದರು. ಇದಕ್ಕೆ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ ಎದ್ದು ನಿಂತಾಗ, ಸುಮ್ಮನಾಗಿಸಿದರು. ಈ ಮಧ್ಯೆ, ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ತುರ್ತು ಪರಿಸ್ಥಿತಿ ಹೇರಬಹುದು ಎಂದು ಸಂವಿಧಾನದಲ್ಲೇ ಇದೆ ಎಂದು ಹೇಳಿದರು. ಆಗ ವಾಗ್ವಾದ ನಡೆಯಿತು. ಮತ್ತೆ, ಸ್ಪೀಕರ್ ಅವರು, ಸಿದ್ದರಾಮಯ್ಯ ಅವರು ಮಾತ್ರ ಮಾತನಾಡಲಿ ಎಂದು ಸುಮ್ಮನಾಗಿಸಿದರು.