Advertisement

12 ವರ್ಷದಲ್ಲಿ ಕ್ಷಯರೋಗ ಹೆಚ್ಚು ಬೆಳಕಿಗೆ

12:45 PM Nov 17, 2019 | Suhan S |

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ಷಯ ರೋಗ ಮುಕ್ತ ಸಮಾಜ ನಿರ್ಮಿಸಲು ಹಲವು ಯೋಜನೆಗಳನ್ನು ಜಾರಿ ಮಾಡುತ್ತಿವೆ. ಜಿಲ್ಲಾ ಹಂತದಲ್ಲೂ ಕಾರ್ಯಕ್ರಮ ಜಾರಿ ಮಾಡಿದ್ದರೂ ಕ್ಷಯರೋಗ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಕ್ಷಯರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಬೆಳಕಿಗೆ ಬಂದಿವೆ.

Advertisement

ಹೌದು. ಜಿಲ್ಲೆಯ ಆರೋಗ್ಯ ಇಲಾಖೆಯ ಕ್ಷಯರೋಗ ವಿಭಾಗದ ಅಂಕಿ ಅಂಶಗಳ ಲೆಕ್ಕಾಚಾರ ಅವಲೋಕಿಸಿದರೆ 2008ರಲ್ಲಿ ಜಿಲ್ಲೆಯಲ್ಲಿನ ಕ್ಷಯ ರೋಗಿಗಳ ಸಂಖ್ಯೆ 1,743 ರಷ್ಟಿತ್ತು. 2019ಕ್ಕೆ 2,668 ಕ್ಷಯ ರೋಗಿಗಳನ್ನು ಪತ್ತೆ ಮಾಡಲಾಗಿದೆ. ಅಂದರೆ 12 ವರ್ಷಗಳಲ್ಲಿ 925 ರೋಗಿಗಳು ಪತ್ತೆಯಾಗಿದ್ದಾರೆ. ಮೊದಲೆಲ್ಲ ಕ್ಷಯ ತಪಾಸಣೆಗೆ ಅತ್ಯಾಧುನಿಕ ತಪಾಸಣಾ ಯಂತ್ರ ಇರಲಿಲ್ಲ. ಹಾಗಾಗಿ ಹೆಚ್ಚು ಕ್ಷಯರೋಗಿಗಳನ್ನು ಪತ್ತೆ ಮಾಡಲುಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಗ್ರಾಮೀಣ ಪ್ರದೇಶದ ಜನರು ಸ್ವಾಭಿಮಾನಕ್ಕೆ ಹೆದರಿ ಕ್ಷಯರೋಗ ಇರುವುದನ್ನೇ ಪರೀಕ್ಷೆ ಮಾಡಿಸಿಕೊಳ್ಳುತ್ತಿರಲಿಲ್ಲ. ಪ್ರಸ್ತುತ ಕ್ಷಯ ರೋಗ ಪತ್ತೆಗೆ ಆಧುನಿಕ ಯಂತ್ರ ಬಂದಿದ್ದು,ಕೆಲವೇ ನಿಮಿಷದಲ್ಲಿ ಕ್ಷಯರೋಗ ಪತ್ತೆ ಮಾಡಿ ವರದಿ ನೀಡುತ್ತಿವೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ಷಯರೋಗಿಗಳು ಪತ್ತೆಯಾಗುತ್ತಿದ್ದಾರೆ.

ಆರೋಗ್ಯ ಇಲಾಖೆ ವರದಿಯಂತೆ ಪ್ರತಿ ಒಂದು ಲಕ್ಷಕ್ಕೆ 191 ಕ್ಷಯ ರೋಗಿಗಳು ಪತ್ತೆಯಾಗಬೇಕು. ಆದರೆ ಜಿಲ್ಲೆಯಲ್ಲಿ ಒಂದು ಲಕ್ಷ ಜನರಲ್ಲಿ 179 ಜನರು ಕ್ಷಯ ರೋಗದಿಂದ ಬಳಲುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಅಂದರೆ ಇನ್ನೂ ಕೆಲ ಕ್ಷಯ ರೋಗಿಗಳನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಗೂ ಸಾಧ್ಯವಾಗಿಲ್ಲ ಎನ್ನುತ್ತಿದೆ ವೈದ್ಯರ ತಂಡ. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 15,406 ಜನರನ್ನು ತಪಾಸಣೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಇಲಾಖೆ ಇಲ್ಲಿವರೆಗೂ 30,445 ಜನರನ್ನು ತಪಾಸಣೆಗೆ ಒಳಪಡಿಸಿದೆ. ಇದರಲ್ಲಿ 2668 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಹೆಚ್ಚು: ಜಿಲ್ಲೆಯಲ್ಲಿ 2008ರಲ್ಲಿ 1743 ಕ್ಷಯರೋಗಿಗಳಿದ್ದರೆ, 2009ರಲ್ಲಿ -1716, 2010ರಲ್ಲಿ -1641, 2011ರಲ್ಲಿ-1860, 2012-1891, 2013-1758, 2014-1855, 2016-1634, 2017-2010, 2018-1826, 2019-2668 ಜನರು ಕ್ಷಯ ರೋಗಿಗಳು ಪತ್ತೆಯಾಗಿದ್ದಾರೆ. ಕ್ಷಯರೋಗದ ಲಕ್ಷಣ: ಕ್ಷಯರೋಗದ ಲಕ್ಷಣಗಳಲ್ಲಿಪ್ರಮುಖವಾಗಿ 15 ದಿನಗಳ ಕಾಲ ಕೆಮ್ಮು, ಸಂಜೆ ವೇಳೆ ಜ್ವರ, ತೂಕ ಕಡಿಮೆಯಾಗುವುದು. ರಾತ್ರಿ ಬೆವರುವ ಲಕ್ಷಣಗಳಿದ್ದರೆ ಅದರಲ್ಲೂ ಮಧುಮೇಹ, ಎಚ್‌ಐವಿ, ಅಪೌಷ್ಟಿಕತೆ, ಧೂಮಪಾನ, ಮದ್ಯಪಾನ ಮಾಡುವವರಲ್ಲಿ ಕ್ಷಯ ರೋಗವು ಹೆಚ್ಚು ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲೂ ಸಹಿತ ಜ್ವರ, ಕೆಮ್ಮು, ತೂಕ ಕಡಿಮೆಯಾಗುವುದು. ಒಟ್ಟಿನಲ್ಲಿ ಆರೋಗ್ಯ ಇಲಾಖೆ ಸಹಿತ ಕ್ಷಯಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಿದೆ. ವಿವಿಧ ಹಂತದಲ್ಲಿ ಕ್ಷಯರೋಗಿಗಳನ್ನು ಪತ್ತೆ ಮಾಡಿ ರೋಗ ವಾಸಿಯಾಗುವವರೆಗೂ ನಿಗಾ ವಹಿಸಿ ಚಿಕಿತ್ಸೆ ನೀಡಬೇಕಿದೆ.

ಖಾಸಗಿ ಆಸ್ಪತ್ರೆಗಳ ಅಸಹಕಾರ!: ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಸರ್ಕಾರಿ ವೈದ್ಯಾಧಿಕಾರಿಗಳ ಮಾತೇ ಕೇಳುತ್ತಿಲ್ಲ ಎನ್ನುವುದು ಸಾಮಾನ್ಯವಾಗಿದೆ. ಯಾವುದೇ ರೋಗದ ಸಂಬಂಧ ಮಾಹಿತಿ ಕೇಳಿದರೂ ಸರಿಯಾಗಿ ವರದಿ ಮಾಡದೇ ಇರುವುದನ್ನು ಸ್ವತಃ ಸರ್ಕಾರಿ ಅಧಿಕಾರಿಗಳೇ ಹೇಳುತ್ತಿದ್ದಾರೆ. ಕ್ಷಯರೋಗಿಗಳು ಪತ್ತೆಯಾದವರನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸುವುದು ತುಂಬ ಕಡಿಮೆ ಎನ್ನುವುದು ಅಧಿ ಕಾರಿಗಳ ಅಳಲು. ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಖಾಸಗಿ ವೈದ್ಯರ ನಡವಳಿಕೆಗೆ ಸರ್ಕಾರಿ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಕ್ಷಯರೋಗಿಗಳು ಪತ್ತೆಯಾಗುತ್ತಿದ್ದಾರೆ. ಅವರಿಗೆ ವಿವಿಧ ಹಂತದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಮೊಟ್ಟ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಲ್ಲೇ ಸಿಬಿನಾಟ್‌ ಯಂತ್ರದ ಮೂಲಕ ಕ್ಷಯರೋಗದ ತಪಾಸಣೆ ನಡೆಸಲಿದ್ದೇವೆ. ನ. 18ರಿಂದ ವಾಹನವು ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಗಮಿಸಲಿದೆ. ಕ್ಷಯಮುಕ್ತ ಸಮಾಜಕ್ಕೆ ಪ್ರತಿಯೊಬ್ಬರ ಸಹಕಾರವೂ ನಮಗೆ ಬೇಕಿದೆ.  –ಡಾ| ಮಹೇಶ, ಕ್ಷಯರೋಗ ನಿಯಂತ್ರಣಾಧಿಕಾರಿ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next