Advertisement

ಕ್ಷಯ ರೋಗ ಮುಕ್ತದತ್ತ ಕಾರ್ಕಳ ಹೆಜ್ಜೆ

11:02 PM Jan 12, 2021 | Team Udayavani |

ಕಾರ್ಕಳ :  ಕೋವಿಡ್ ರೋಗ ಲಕ್ಷಣ ಮತ್ತು ಕ್ಷಯ ರೋಗ ಲಕ್ಷಣಗಳು ಸಾಮಾನ್ಯ ಒಂದೇ ರೀತಿಯಲ್ಲಿದ್ದು, ಕ್ಷಯ ರೋಗ ಲಕ್ಷಣವಿದ್ದರೂ, ಅನೇಕರು  ಕೋವಿಡ್ ಭೀತಿಯಿಂದ ಪರೀಕ್ಷೆ  ಮಾಡಿಸಿಕೊಳ್ಳಲು  ಹಿಂದೇಟು ಹಾಕುತ್ತಿದ್ದರು. ಇದರ ನಡುವೆ  ತಾ|ನಲ್ಲಿ ಕ್ಷಯ ರೋಗ ಪ್ರಕರಣ ಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ.

Advertisement

ಮನೆ ಬಾಗಿಲಿಗೆ ತೆರಳಿ ಕ್ಷಯ ರೋಗ ಪತ್ತೆ ಹಚ್ಚುವ ಆಂದೋಲನ ತಾ|ನಲ್ಲಿ  ನಡೆದಾಗ  412 ಶಂಕಿತ ಸೋಂಕಿತರ ಗುರುತು ಪತ್ತೆ ಮಾಡಲಾಗಿತ್ತು. 396 ಮಂದಿಯ ಕಫ‌ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿತ್ತು. ಈ ಪೈಕಿ 7 ಸಕ್ರಿಯ ಪ್ರಕರಣ ಪತ್ತೆಯಾಗಿದ್ದು, ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ  ನೀಡಲಾಗುತ್ತಿದೆ.

ಕಾರ್ಕಳ ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಕ್ಷಯ ರೋಗ ಈ ಹಿಂದೆ ಪತ್ತೆಯಾಗಿತ್ತು. 6 ತಿಂಗಳಿಗೊಮ್ಮೆ ನಡೆಯುವ ಆಂದೋಲನದಲ್ಲಿ ಹಿಂದಿನ ಮೂರು ಸುತ್ತಿನಲ್ಲಿ  ಒಂದೂವರೆ ವರ್ಷಗಳ ಅವಧಿಯಲ್ಲಿ  ಕ್ಷಯ ರೋಗ ಪ್ರಕರಣಗಳ ಪಟ್ಟಿಯಲ್ಲಿ ಕಾರ್ಕಳ ತಾಲೂಕು ಮುಂಚೂಣಿಯಲ್ಲಿತ್ತು. ಅದು ಈ ಬಾರಿ ಇಳಿಕೆಯಾಗಿದ್ದು, ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು  9 ಪ್ರಕರಣಗಳು ಪತ್ತೆಯಾಗಿವೆ.

ಹೆಬ್ರಿ, ಕಾರ್ಕಳ ಕ್ಷಯ ರೋಗ ನಿರ್ಮೂಲನ ಘಟಕ ವ್ಯಾಪ್ತಿಯಲ್ಲಿ ಡಿ. 16ರಿಂದ 25ರ ತನಕ  ಜಾಗೃತಿ ಹಾಗೂ ಮನೆಗಳಲ್ಲಿ ಚಿಕಿತ್ಸೆ  ನಡೆದಿತ್ತು. 20 ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ  ಪತ್ತೆ ಹಾಗೂ ಚಿಕಿತ್ಸಾ  ಕಾರ್ಯ ನಡೆದಿತ್ತು. ತಾ|ನ ಜನಸಂಖ್ಯೆ ಆಧಾರದಲ್ಲಿ  ಘಟಕದ ಕ್ರಿಯಾ ಯೋಜನೆ ಪ್ರಕಾರ  ವಿಭಾಗವಾರು ತಂಡ ರಚಿಸಿ ಕ್ಷೇತ್ರ ಭೇಟಿ ಮಾಡಲಾಗಿತ್ತು.

ಪತ್ತೆ ಕಾರ್ಯ :

Advertisement

ಕಲ್ಲು ಕೋರೆ, ಫ್ಯಾಕ್ಟರಿ, ಕೊರಗರ ಕಾಲನಿ, ವಲಸೆ ಕಾರ್ಮಿಕರು ವಾಸವಿರುವ ಜಾಗ, ಅನಾಥಾಶ್ರಮಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವವರು, ಕಾರ್ಮಿಕರು ಕೆಲಸ ಮಾಡುವ ಸ್ಥಳ, ಅಸಂಘಟಿತ ಕಾರ್ಮಿಕರನ್ನು ಒಳಗೊಂಡ ಹೆಚ್ಚಿನ ಸಾಂದ್ರತೆಯಿರುವ ಕಡೆಗಳಲ್ಲಿ  ಪ್ರಚಾರ, ಪತ್ತೆ  ಹಾಗೂ ಚಿಕಿತ್ಸೆ ವಿಧಾನಗಳನ್ನು ಮಾಡಿಕೊಳ್ಳಲಾಗಿತ್ತು.

ಸಾಂಕ್ರಾಮಿಕ ರೋಗ :

ಕ್ಷಯ ಅಥವಾ ಟಿ.ಬಿ. ಸಾಂಕ್ರಾಮಿಕ  ರೋಗವಾಗಿದ್ದು, ಪ್ರಾಥಮಿಕ ಶ್ವಾಸಕೋಶವನ್ನು ಬಾಧಿಸುತ್ತದೆ ಮತ್ತು ಅನಂತರ ಮೆದುಳು, ದೇಹದ ಇತರ  ಅಂಗಗಳಿಗೆ ಹರಡಬಲ್ಲುದು. ಸೋಂಕು ಪೀಡಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಮಾತನಾಡಿದಾಗ ಅಥವಾ ಉಗುಳಿದಾಗ  ಅವು ಟಿಬಿ ಬ್ಯಾಸಿಲ್ಲಿ ಎಂಬ  ಕ್ಷಯ ರೋಗಾಣುಗಳನ್ನು  ಗಾಳಿಯಲ್ಲಿ  ಹರಡುತ್ತದೆ. ಇದು ಸೋಂಕು ಹರಡಲು ಕಾರಣವಾಗುತ್ತದೆ.

 

ಲಕ್ಷಣಗಳು ; ಕೆಮ್ಮು , ಕಫ‌ದ ಜತೆಗೆ ರಕ್ತ ಸೋರುವುದು, ಸಂಜೆ ವೇಳೆಗೆ ಜ್ವರ, ಹಸಿವೆ ಆಗದಿರುವುದು, ದೇಹದಲ್ಲಿ ತೂಕ ಇಳಿಕೆ, ದೇಹದಲ್ಲಿ ಬೆವರು, ಕ್ಷಯ ರೋಗದ  ಮುಖ್ಯ ಲಕ್ಷಣಗಳು. ಇಂತಹ ಲಕ್ಷಣವಿರುವ  ವ್ಯಕ್ತಿಗಳು ಸರಕಾರಿ ಸ್ಪತ್ರೆಗಳಲ್ಲಿ  ಉಚಿತವಾಗಿ  ಕಫ‌  ಪರೀಕ್ಷೆ  ಮಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕ್ಷಯ ಮುಕ್ತ ಭಾರತ ಗುರಿ :

2025ರ ವೇಳೆಗೆ ದೇಶದಲ್ಲಿ ಕ್ಷಯ ರೋಗವನ್ನು ಕೊನೆಗಾಣಿಸಿ ಕ್ಷಯ ಮುಕ್ತ ಭಾರತ ಘೋಷಿಸುವ ಗುರಿಯನ್ನು ಹೊಂದಲಾಗಿದೆ. ಜಗತ್ತಿನಲ್ಲಿ ಒಟ್ಟು 1 ಕೋ.  ಕ್ಷಯ ರೋಗಿಗಳ ಪೈಕಿ ಬರೋಬ್ಬರಿ  28 ಲಕ್ಷ ಮಂದಿ ಭಾರತದಲ್ಲಿ  ಇದ್ದಾರೆ ಎನ್ನುತ್ತದೆ  2018ರ  ವಿಶ್ವ ಆರೋಗ್ಯ ಸಂಸ್ಥೆ ವರದಿ.

ಹಿಂದಿನ ಮೂರು ಅಭಿಯಾನದ ಅವಧಿಯಲ್ಲಿ ತಾ|ನಲ್ಲಿ  ಇತರೆಡೆಗಿಂತ  ಹೆಚ್ಚು ಕ್ಷಯ ರೋಗಿಗಳು ಕಂಡು ಬಂದಿದ್ದರು. ಈ  ಬಾರಿ ಇಳಿಕೆಯಾಗಿದೆ. ನಿರಂತರ ಜಾಗೃತಿ ಮತ್ತು ನಾಗರಿಕರು ಸ್ವಯಂ ಎಚ್ಚರ ವಹಿಸಿರುವುದು ನಿಯಂತ್ರಣಕ್ಕೆ ಬರಲು ಕಾರಣವಾಗಿದೆ.ಶಿವಕುಮಾರ್‌, ಹಿರಿಯ ಕ್ಷಯರೋಗ ಚಿಕಿತ್ಸಾ  ಮೇಲ್ವಿಚಾರಕರು

Advertisement

Udayavani is now on Telegram. Click here to join our channel and stay updated with the latest news.

Next