ಬೀದರ: ಜಿಲ್ಲೆಯಲ್ಲಿ ನ. 25ರಿಂದ ಡಿ.10ರ ವರೆಗೆ ನಡೆಯಲಿರುವ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮ ನಿಮಿತ್ತ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಯಿತು.
ಈ ವೇಳೆ ಸಿಇಒ ಅವರು ಮಾತನಾಡಿ, ಹೆಚ್ಚು ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇರುವುದರಿಂದ ಇವರ ಮಾಹಿತಿ ಪಡೆಯಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ತಾಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ಅಭಿಯಾನದಲ್ಲಿ ಜಿಲ್ಲೆಯ 410010 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ 607 ತಂಡಗಳು ರಚಿಸಲಾಗಿದ್ದು, 1,214 ಸದಸ್ಯರ ಅವಶ್ಯಕತೆಯಿದೆ. 366 ಮೇಲ್ವಿಚಾರಕರು, 685 ಆಶಾ ಕಾರ್ಯಕರ್ತೆಯರು, 250 ಸ್ವಯಂ ಸೇವಕರು ಭಾಗವಹಿಸುವರು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ|ದೀಪಾ ಖಂಡ್ರೆ ಮಾತನಾಡಿ, ಕ್ಷಯರೋಗವು ಮೈಕ್ರೋಬ್ಯಾಕ್ಟಿರಿಯಂ ಟ್ಯೂಬರಕ್ಯುಲೋಸಿಸ್‌ಎಂಬ ರೋಗಾಣುವಿನಿಂದ ಬರುತ್ತದೆ. ಸೋಂಕಿತ ವ್ಯಕ್ತಿ ಸೀನುವುದು ಮತ್ತು ಕೆಮ್ಮಿದಾಗ ಹೊರಬರುವ ರೋಗಾಣುಗಳು ಗಾಳಿಯಲ್ಲಿ ಸೇರಿಕೊಂಡು ಒಬ್ಬರಿಂದೊಬ್ಬರಿಗೆ ಹರಡುತ್ತವೆ. ಈ ಕಾಯಿಲೆಗೆ ಹೆದರಬೇಕಾಗಿಲ್ಲ. ರೋಗ ಪೀಡಿತರು ಕಾಯಿಲೆಯನ್ನು ಗುಪ್ತವಾಗಿಡದೇ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆರು, ಹಾಗೂ ಸ್ವಯಂ ಸೇವಕರ ಗಮನಕ್ಕೆ ತಂದು ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚಿದಲ್ಲಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸ ಬಹುದಾಗಿದೆ. ಯಾವುದೇ ವ್ಯಕ್ತಿ ಕ್ಷಯರೋಗದಿಂದ ಬಳಲುತ್ತಿದ್ದಲ್ಲಿ ಅವರನ್ನು ಗುಣಪಡಿಸಲು ಸಹಕರಿಸುವ ವಾತಾವರಣ ನಿರ್ಮಿಸಬೇಕಿದೆ ಎಂದು ಹೇಳಿದರು.
ಬ್ರಿಮ್ಸ್ ವೈದ್ಯಕೀಯ ಆಸ್ಪತ್ರೆಯ ಡಾ| ಮಹೇಶ ತೊಂಡಾರೆ ಅವರು ಕ್ಷಯರೋಗದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ|ಇಂದುಮತಿ ಪಾಟೀಲ, ಡಾ|ರವೀಂದ್ರ ಸಿರಸಗೆ, ಡಾ|ರಾಜಶೇಖರ ಪಾಟೀಲ, ಡಾ| ಕೃಷ್ಣಾ ರೆಡ್ಡಿ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ|ಶರಣಯ್ಯ ಸ್ವಾಮಿ, ಡಾ| ಶಿವಕುಮಾರ ಸಿದ್ದೇಶ್ವರ, ಡಾ|ಶರಣಪ್ಪಾ ಮುಡಬಿ, ಡಾ|ವೈಜಿನಾಥ ತುಗಾಂವೆ, ಗೌತಮ ಜ್ಯೋತಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.