ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಮತ್ತು ಆದಿವಾಸಿಗಳು ಗೆಡ್ಡೆ ಗೆಣಸು ತಿಂದು ಬದುಕಿದ್ದರು ಎಂಬುದನ್ನು ಕೇಳಿದ್ದೇವೆ. ಗೆಡ್ಡೆ- ಗೆಣಸುಗಳು, ಮಣ್ಣಿನ ಕಸುವನ್ನು ಪಡೆದ ಪುಷ್ಟಿದಾಯಕ ಆಹಾರ. ಇವುಗಳಲ್ಲಿ ನಾರಿನಂಶ ಹೆಚ್ಚಿರುವುದರಿಂದ ವಿಸರ್ಜನ ಕ್ರಿಯೆಗೆ ಸಹಕಾರಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ, ಚರ್ಮದ ಮೈಕಾಂತಿ ವೃದ್ಧಿಸಲು ಮತ್ತು ವಯಸ್ಸನ್ನು ನಿಧಾನಿಸಲು ಗೆಡ್ಡೆ ಗೆಣಸು ಸಹಕರಿಸುತ್ತವೆ. ಇವುಗಳಲ್ಲಿ ಕಾಬೋಹೈಡ್ರೇಟ್ ಸಂಯುಕ್ತ ರೂಪದಲ್ಲಿದ್ದು, ರಕ್ತದಲ್ಲಿ ಸಕ್ಕರೆ ಅಂಶ ಒಮ್ಮೆಲೇ ಹೆಚ್ಚುವುದಿಲ್ಲ. ಮಧುಮೇಹ ರೋಗಿಗಳು ಯಾವುದೇ ಆತಂಕ ವಿಲ್ಲದೆ ಗೆಡ್ಡೆ ಗೆಣಸು ಸವಿಯಬಹುದು.
ಆಯುರ್ವೇದ ಮತ್ತು ಜನಪದ ವೈದ್ಯದಲ್ಲಿ ಬಹುಪಾಲು ಗೆಡ್ಡೆ ಗೆಣಸನ್ನು ಔಷಧಿಯಾಗಿ ಬಳಸಲಾಗುತ್ತದೆ. ಇಷ್ಟೆಲ್ಲಾ ಉಪಯೋಗಗಳು ಇರುವ ಗೆಡ್ಡೆ ಗೆಣಸುಗಳ ಅದ್ಭುತ ಲೋಕವನ್ನು ಬೆಂಗಳೂರಿಗರಿಗೆ ಪರಿಚಯಿಸಲು, ಸಹಜ ಆರ್ಗಾನಿಕ್ಸ್ ಮತ್ತು ಗ್ರೀನ್‌ಪಾತ್ ಜೊತೆಗೂಡಿ “ಗೆಡ್ಡೆ ಗೆಣಸು ಹಬ್ಬ’ವನ್ನು ಆಯೋಜಿಸಿವೆ.
ಏನೇನಿರುತ್ತೆ?: ಈ ಮೇಳದಲ್ಲಿ ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು, ಗೆಣಸಿನ ಅಡುಗೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಶನಿವಾರ 3 ಗಂಟೆಗೆ ಗೆಡ್ಡೆ ಗೆಣಸು ಅಡುಗೆ ತಯಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ.
ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ: ಫಾಸ್ಟ್‌ಫುಡ್ ಆಹಾರಗಳಿಗೆ ಮಾರು ಹೋಗಿರುವ ಇಂದಿನ ಪೀಳಿಗೆಗೆ, ಸಾಂಪ್ರದಾಯಿಕ ಅಡುಗೆಗಳನ್ನು ಪರಿಚಯಿಸುವ ಉದ್ದೇಶದಿಂದ “ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ’ ಆಯೋಜಿಸಲಾಗಿದೆ. ಕಾಡಿನ ಅಥವಾ ಕೃಷಿ ಮೂಲದ ಗೆಡ್ಡೆ ಗೆಣಸುಗಳನ್ನು ಬಳಸಿ ತಯಾರಿಸುವ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ರುಚಿಯಾಗಿರಬಹುದು.
ವಿವಿಧ ಜಾತಿಯ ಗೆಡ್ಡೆ ಗೆಣಸುಗಳನ್ನು ಬಳಸಿ ಮಾಡಿದ ಅಡುಗೆಯನ್ನು, ಮನೆಯಲ್ಲೇ ತಯಾರಿಸಿ, ಗೆಡ್ಡೆ ಗೆಣಸು ಮೇಳಕ್ಕೆ ಫೆ.2ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ತರಬೇಕು. ಅಪರೂಪದ ಅಡುಗೆ ತಯಾರಿಸಿದವರಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು. ಆಲೂಗಡ್ಡೆ ಹೊರತುಪಡಿಸಿ ಮಾಡಿದ ಕೆಸು, ಹುತ್ತರಿ, ಸುವರ್ಣ ಗೆಡ್ಡೆ , ಸಾಂಬ್ರಾಣಿ ಗೆಡ್ಡೆ ಮತ್ತು ಕಾಡು ಗೆಡ್ಡೆಯ ಅಡುಗೆಗಳಿಗೆ ವಿಶೇಷ ಮನ್ನಣೆ.
ಯಾವಾಗ?: ಫೆ.1- 2, ಬೆಳಗ್ಗೆ 10.30- 8.30
ಎಲ್ಲಿ?: ದ ಗ್ರೀನ್‌ಪಾತ್, ಮಲ್ಲೇಶ್ವರ ಮೆಟ್ರೋ ನಿಲ್ದಾಣದ ಎದುರು
ಹೆಚ್ಚಿನ ವಿವರಗಳಿಗೆ: 9448774871