ಹೈದರಾಬಾದ್: ಅನಾರೋಗ್ಯದಿಂದ ಕಳೆದ ವರ್ಷ ನಿಧನರಾಗಿದ್ದ ತಿರುಪತಿ ದೇವಸ್ಥಾನದ ಕೆಲಸಗಾರನ ಮನೆಯನ್ನು ಶೋಧಿಸಿದ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧಿಕಾರಿಗಳು ಬರೋಬ್ಬರಿ 6.15 ಲಕ್ಷ ರೂಪಾಯಿ ನಗದು ಹಾಗೂ 25 ಕೆಜಿಯಷ್ಟು ನಾಣ್ಯಗಳನ್ನು ಪತ್ತೆಹಚ್ಚಿರುವ ಘಟನೆ ತಿರುಪತಿಯ ಶೇಷಾಚಲ ನಗರದಲ್ಲಿ ನಡೆದಿದೆ.
ಚಿತ್ತೂರ್ ಜಿಲ್ಲೆಯ ತಿರುಪತಿ ನಗರದ ಶೇಷಾಚಲ ಕಾಲೋನಿಯ 75ನೇ ಸಂಖ್ಯೆಯ ಮನೆಯಲ್ಲಿ ಶ್ರೀನಿವಾಸುಲು ಅವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ಮೃತ ಶ್ರೀನಿವಾಸನ್ ಅವರು ತಿರುಮಲ ತಿರುಪತಿ ದೇವಸ್ವಂನ ಟ್ರಸ್ಟ್ ನಡಿ ಸಣ್ಣ ಉದ್ಯಮ ನಡೆಸುತ್ತಿದ್ದರು. ಅಲ್ಲದೇ ಇವರನ್ನು ಗುತ್ತಿಗೆ ಕೆಲಸಗಾರರನ್ನಾಗಿ ಬಳಸಿಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.
ಅನಾರೋಗ್ಯದಿಂದ ಶ್ರೀನಿವಾಸನ್ ಅವರು ನಿಧನ ಹೊಂದಿದ ಮೇಲೆ ದೀರ್ಘಕಾಲದಿಂದ ಅವರು ವಾಸವಾಗಿದ್ದ ಮನೆಗೆ ಬೀಗ ಹಾಕಲಾಗಿತ್ತು. ಆದರೆ ಈ ಮನೆಯನ್ನು ಸ್ಥಳೀಯರು ಆಕ್ರಮಿಸಲು ಯತ್ನಿಸುತ್ತಿದ್ದು, ಇದನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ಟಿಟಿಡಿ ಅಧಿಕಾರಿಗಳು ದೂರನ್ನು ಸ್ವೀಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಟಿಟಿಡಿ ಎಸ್ಟೇಟ್ ಅಧಿಕಾರಿ ಸ್ಥಳೀಯ ತಹಸೀಲ್ದಾರ್ ಅವರ ಬಳಿ ಶ್ರೀನಿವಾಸನ್ ಅವರ ಬಗ್ಗೆ ಮಾಹಿತಿ ಕಲೆ ಹಾಖಿದ್ದು, ಇವರಿಗೆ ಯಾವ ಕುಟುಂಬದ ಸದಸ್ಯರು ಇಲ್ಲ. ಶ್ರೀನಿವಾಸನ್ ಕುಟುಂಬ ಸದಸ್ಯರು ಕೂಡಾ ಈಗಾಗಲೇ ನಿಧನ ಹೊಂದಿರುವುದಾಗಿ ವಿವರ ನೀಡಿದ್ದರು.
ಸುಮಾರು ಒಂದು ತಿಂಗಳ ಬಳಿಕ ಟಿಟಿಡಿ ಅಧಿಕಾರಿಗಳು, ಸ್ಥಳೀಯ ಕಂದಾಯ ಅಧಿಕಾರಿಗಳು ವಿಜಿಲೆನ್ಸ್ ನವರು ಮನೆಯ ಬಾಗಿಲನ್ನು ತೆಗೆದು ಪರಿಶೀಲಿಸಿದಾಗ ಎರಡು ಟ್ರಂಕ್ ಗಳು ಪತ್ತೆಯಾಗಿದ್ದು, ಇದರಲ್ಲಿ ಕಂತೆ, ಕಂತೆ ನೋಟುಗಳು ಪತ್ತೆಯಾಗಿದ್ದವು. ಸುಮಾರು ನಾಲ್ಕು ಗಂಟೆಗಳ ಕಾಲ ಲೆಕ್ಕ ಮಾಡಿದಾಗ 6.15 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಗದು ಹಣ ಮತ್ತು 25 ಕೆಜಿಯಷ್ಟು ನಾಣ್ಯಗಳನ್ನು ಟಿಟಿಡಿಯ
ಖಜಾನೆಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.