Advertisement

ಇಂಡೋನೇಷ್ಯಾದಲ್ಲಿ ಸುನಾಮಿ: 222 ಬಲಿ

06:00 AM Dec 24, 2018 | |

ಜಕಾರ್ತ: ಇದೇ ವರ್ಷ ಐದು ಬಾರಿ ಭೂಕಂಪಕ್ಕೆ ತುತ್ತಾಗಿರುವ ಇಂಡೋನೇಷ್ಯಾದಲ್ಲಿ ನಿಸರ್ಗ ಮತ್ತೂಮ್ಮೆ ರುದ್ರತಾಂಡವವಾಡಿದೆ. ಸುಮಾತ್ರಾ ಹಾಗೂ ಜಾವಾ ದ್ವೀಪಗಳ ನಡುವಿನ ಸುಂಡಾ ಜಲಸಂಧಿಯಲ್ಲಿ ಶನಿವಾರ ರಾತ್ರಿ ಸ್ಥಳೀಯ ಕಾಲಮಾನ 9:27ರ ಸುಮಾರಿಗೆ ಉಂಟಾದ ಸುನಾಮಿಗೆ 222 ಮಂದಿ ಸಾವನ್ನಪ್ಪಿದ್ದು, 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಂದಾಜು 50 ಜನರು ಕಾಣೆಯಾಗಿದ್ದಾರೆ. ಪರಿಹಾರ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ಸಾಗುತ್ತಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕವಿದೆ.
 
ಹೇಗಾಯ್ತು ಸುನಾಮಿ?
ಸುಂಡಾ ಜಲಸಂಧಿಯಲ್ಲಿ ಅನಕ್‌ ಕ್ರಟಾಟೌ ಎಂಬ ದ್ವೀಪವಿದೆ. ಇದಕ್ಕೆ ಜ್ವಾಲಾಮುಖೀಗಳ ದ್ವೀಪವೆಂದೇ ಹೆಸರು. ಇದರಲ್ಲಿನ ಕ್ರಟಾಟೌ ಜ್ವಾಲಾಮುಖೀ ಏಕಾಏಕಿ ಭುಗಿಲೆದ್ದಿದ್ದರಿಂದ ಅದರ ಪಕ್ಕದಲ್ಲಿದ್ದ ಸಾಗರದಲ್ಲಿ ಭೂಕಂಪವಾಗಿದೆ. ಸಾಗರ ತಳದಲ್ಲಿ ಹಠಾತ್ತನೆ ಏರುಪೇರಾಗಿದ್ದರಿಂದ ಸಮುದ್ರದ ನೀರು ಮುಗಿಲೆತ್ತರಕ್ಕೆ ಚಿಮ್ಮಿ ಸುನಾಮಿ ಉಂಟಾಗಿದೆ. ಶನಿವಾರ ಹುಣ್ಣಿಮೆಯೂ ಇದ್ದಿದ್ದರಿಂದ ಸಾಗರದಲ್ಲಿ ಅಲೆಗಳ ಏರಿಳಿತ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಾಗಿಯೇ ಇತ್ತು. ಸುನಾಮಿ ಸಂಭವಿಸುತ್ತಲೇ ಅಲೆಗಳು ರಕ್ಕಸ ಸ್ವರೂಪ ಪಡೆದು ಬಂದು ಸಾಗರ ತೀರಗಳಿಗೆ ಅಪ್ಪಳಿಸಿದೆ ಎಂದು ಹೇಳಲಾಗಿದೆ.  

Advertisement

ರಸನಿಮಿಷಗಳ ಜಲಸಮಾಧಿ
ಸುಮಾತ್ರಾ, ಜಾವಾ ದ್ವೀಪಗಳ ನಡುವಿನ ಜಾಗದಲ್ಲಿ ಹಿಂದೂ ಮಹಾ ಸಾಗರ ಹಾಗೂ ಜಾವಾ ಸಮುದ್ರಗಳು ಪರಸ್ಪರ ಒಂದನ್ನೊಂದು ಸೇರುತ್ತವೆ. ಇದನ್ನೇ ಸುಂಡಾ ಜಲಸಂಧಿ ಎಂದು ಕರೆಯುತ್ತಾರೆ. ಇಲ್ಲಿ ಚಿಕ್ಕಪುಟ್ಟ ದ್ವೀಪಗಳಿದ್ದು, ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿವೆ. ಈ ದ್ವೀಪಗಳ ತುಂಬೆಲ್ಲಾ ರೆಸ್ಟೋರೆಂಟ್‌ಗಳು, ಬಾರ್‌-ಪಬ್‌ಗಳು ಸೇರಿದಂತೆ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಈ ಬಾರಿಯ ವೀಕೆಂಡ್‌ ಹಾಗೂ ಕ್ರಿಸ್‌ಮಸ್‌ ರಜಾದಿನಗಳ ಹಿನ್ನೆಲೆಯಲ್ಲಿ ಹೆಚ್ಚು ಜನರು ಇಲ್ಲಿ ಜಮಾಯಿಸಿದ್ದರು. ಹಾಗಾಗಿಯೇ ಸಾವಿನ ಸಂಖ್ಯೆ ಏರುವ ಭೀತಿ ಎದುರಾಗಿದೆ.

ವರ್ಷಾಂತ್ಯಕ್ಕೂ ಭೂಕಂಪಕ್ಕೂ ವಿಚಿತ್ರ ನಂಟು!
ವರ್ಷಾಂತ್ಯಕ್ಕೂ ಇಂಡೋನೇಷ್ಯಾ ಸುನಾಮಿಗೂ ನಂಟು ಇದ್ದಂತಿದೆ. 2004ರ ಡಿ. 26ರಂದು ಸುಮಾತ್ರಾದ ಸಾಗರದಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಉಂಟಾದ ಮಹಾಸುನಾಮಿಯಿಂದ ಹಿಂದೂ ಮಹಾಸಾಗರಕ್ಕೆ ಆತುಕೊಂಡಿರುವ ಎಲ್ಲಾ ದೇಶಗಳಲ್ಲಿ ಒಟ್ಟಾರೆ 2,20,000 ಜನರು ಸಾವನ್ನಪ್ಪಿದ್ದರು. ಇಂಡೋನೇಷ್ಯಾದಲ್ಲೇ 1,68,000 ಜನ ಸಾವಿಗೀಡಾಗಿದ್ದರು. 

ನೇಪಾಳದಲ್ಲಿ ಲಘು ಭೂಕಂಪ 
ಇಂಡೋನೇಷ್ಯಾದಲ್ಲಿ ಸುನಾಮಿ ಸಂಭವಿಸಿದ ಬೆನ್ನಲ್ಲೇ, ಭಾರತದ ನೆರೆ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಿಂದ 80 ಕಿ.ಮೀ. ದೂರದಲ್ಲಿರುವ ಸಿಂಧುಪಾಲ್‌ ಚೌಕ್‌ ಎಂಬ ಜಿಲ್ಲೆಯಲ್ಲಿ ಭಾನುವಾರ ಬೆಳಗಿನ ಜಾವ 5:06ರ ಹೊತ್ತಿಗೆ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ಇದರ ತೀವ್ರತೆ 4.7ರಷ್ಟಿತ್ತು ಎಂದು ಹೇಳಲಾಗಿದೆ. 

50ರಿಂದ 70 ಅಡಿಯ ಅಲೆ!
ಅಲ್ಲಿನ ಬೀಚ್‌ ರೆಸ್ಟೋರೆಂಟ್‌ ಒಂದರಲ್ಲಿ ಸಂಗೀತ ಬ್ಯಾಂಡ್‌ ಒಂದರಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿರುವಾಗಲೇ ಸುನಾಮಿ ಅಪ್ಪಳಿಸಿದ್ದು ಈ ಕಾರ್ಯಕ್ರಮದ ವಿಡಿಯೋ ಚಿತ್ರೀಕರಿಸುತ್ತಿದ್ದ ಪ್ರವಾಸಿಗರೊಬ್ಬರ ಮೊಬೈಲಿನಲ್ಲಿ ದಾಖಲೆಯಾಗಿದೆ. ಆ ವಿಡಿಯೋ ಕ್ಲಿಪ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸುನಾಮಿಯಿಂದ ಎದ್ದ ದೈತ್ಯ ಅಲೆ ಸುಮಾರು 50ರಿಂದ 70 ಅಡಿಗಳಷ್ಟಿತ್ತು. ಆ ಅಲೆಯ ಬಡಿತಕ್ಕೆ ಇಡೀ ದ್ವೀಪದ ಅಂದ-ಚೆಂದ, ಪ್ರವಾಸಿಗರ ಸಡಗರ, ಗಾನ-ಪಾನಗಳೆಲ್ಲವೂ ಕ್ಷಣಾರ್ಧದಲ್ಲಿ ಕೊಚ್ಚಿ ಹೋದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 

Advertisement

ಅಂಕಿ-ಅಂಶ: 
800 – ಗಂಭೀರವಾಗಿ ಗಾಯಗೊಂಡವರ ಸಂಖ್ಯೆ 
50 – ಸುನಾಮಿಯಲ್ಲಿ ಕಾಣೆಯಾದವರ ಸಂಖ್ಯೆ 
50ರಿಂದ 70 ಅಡಿ – ಸುನಾಮಿ ಅಲೆಯ ಅಂದಾಜು ಎತ್ತರ 
6 – ಈ ವರ್ಷ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪಗಳ ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next