Advertisement

ಸುನಾಮಿ ರುದ್ರನರ್ತನಕ್ಕೆ ತತ್ತರಿಸಿದ ಇಂಡೋನೇಷ್ಯಾ

06:00 AM Sep 30, 2018 | |

ಪಾಲು: ಇಂಡೋನೇಷ್ಯಾದ ದ್ವೀಪವಾದ ಸುಲಾವೇಸಿಯಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದ ಪರಿಣಾಮ ಉಂಟಾದ ಸುನಾಮಿಯು ಅಂದಾಜು 400ರಷ್ಟು ಜನರನ್ನು ಬಲಿ ಪಡೆದಿದೆ. ಸರ್ಕಾರ ಪ್ರಕಟಿಸಿರುವ ಅಂಕಿ-ಅಂಶದ ಪ್ರಕಾರ, ಸಾವಿನ ಸಂಖ್ಯೆ 384ರಷ್ಟಿದ್ದು, ಇದು ಜಾಸ್ತಿಯಾಗುವ ಸಂಭವವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸುನಾಮಿ ಹೊಡೆತಕ್ಕೆ ಸಿಲುಕಿರುವ ಎರಡು ನಗರಗಳಾದ ಪಾಲು ಮತ್ತು ಡೊಂಗ್ಗಾಲ ನಗರಗಳಲ್ಲಿ 540ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಶುಕ್ರವಾರದ ಭೂಕಂಪ ಹಾಗೂ ಸುನಾಮಿಯ ನಂತರ ಶನಿವಾರ ಕಾಣಿಸಿಕೊಂಡ ಮತ್ತೂಂದು ಸುತ್ತಿನ ಕಂಪನದಿಂದಾಗಿ, ಈ ಪ್ರಾಂತ್ಯದಲ್ಲಿ ಕನಿಷ್ಠ ಒಬ್ಬ ಮೃತಪಟ್ಟಿದ್ದಾನೆ. 

ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ: ಪಾಲು ನಗರದ ಸಮುದ್ರ ಕಿನಾರೆಯಲ್ಲಿ ಬೀಚ್‌ ಫೆಸ್ಟಿವಲ್‌ಗಾಗಿ ಸಾವಿರಾರು ಜನರು ಸಿದ್ಧತೆಯಲ್ಲಿ ತೊಡಗಿದ್ದಾಗಲೇ ಆರು ಅಡಿಯಷ್ಟು ಎತ್ತರದ ದೈತ್ಯ ಅಲೆಗಳು ಬಂದು ಅಪ್ಪಳಿಸಿದ್ದು, ಸಾವಿನ ಸಂಖ್ಯೆ ಈ ಪರಿ ಏರಲು ಕಾರಣ ಎನ್ನಲಾಗಿದೆ. ಸುನಾಮಿಯ ತೀವ್ರ ಬಾಧೆ ಅನುಭವಿಸಿರುವ ಪಾಲು ನಗರ ಕೆಸರು ಹಾಗೂ ಅವಶೇಷಗಳ ಕೂಪವಾಗಿ ಕಾಣ ತೊಡಗಿದೆ. ಅನೇಕಾನೇಕ ದೈತ್ಯ ಕಟ್ಟಡ ಗಳು, ಮಸೀದಿಗಳು ಧರೆಗುರುಳಿವೆ. ರಕ್ಕಸ ಅಲೆಗಳಿಂದಾಗಿ ತೀವ್ರ ಹಾನಿಗೀಡಾ ಗಿರುವ ಪಾಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಭೂಕಂಪದ ತೀವ್ರತೆಯು 7.5ರಷ್ಟಿ ತ್ತೆಂದು ಹೇಳಿರುವ ತಜ್ಞರು,  ಇದೇ ಜುಲೈ, ಆಗಸ್ಟ್‌ನಲ್ಲಿ ಇಂಡೋನೇಷ್ಯಾದ ಮತ್ತೂಂದು ದ್ವೀಪವಾದ ಲಾಂಬೊಕ್‌ನಲ್ಲಿ ಹಲವರನ್ನು ಬಲಿ ಪಡೆದಿತ್ತು. ಆದರೆ, ಈಗ ಸಂಭವಿಸಿರುವ ಭೂಕಂಪ ಅದಕ್ಕಿಂತಲೂ ಹೆಚ್ಚು ಪ್ರಬಲವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. 

ನಷ್ಟದ ಅಂದಾಜು ಸಾಧ್ಯವಾಗುತ್ತಿಲ್ಲ 
ಈ ನೈಸರ್ಗಿಕ ವಿಕೋಪದ ಬಗ್ಗೆ ಮಾಹಿತಿ ನೀಡಿದ ಇಂಡೋನೇಷ್ಯಾದ ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ (ಬಿಎನ್‌ಪಿಬಿ) ವಕ್ತಾರ ಸುಪೋಟೋ ಪುವೊì ನುಗ್ರಾಹೊ, “”ಕಳೆದೊಂದು ವರ್ಷದಿಂದ ನೆರೆಯ ದೇಶವಾದ ಗಿಲಿಯ ಸಮಾನಾಂತರ ರೇಖೆಯಲ್ಲಿ ಸಂಭವಿಸಿರುವ ಅನೇಕ ಭೂಕಂಪಗಳಿಂದ ಇಂಡೋನೇಷ್ಯಾದಲ್ಲಿ ಸುಮಾರು 555ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪಾಲು ನಗರದಲ್ಲೇ 540 ಜನರು ಪ್ರಾಣ ತೆತ್ತಿದ್ದಾರೆ. ಇದೀಗ, ಮತ್ತೂಮ್ಮೆ ನಿಸರ್ಗ ತನ್ನ ಕರಾಳ ಹಸ್ತ ಚಾಚಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸುನಾಮಿಯಿಂದ ಕೆಲವಾರು ಪ್ರಾಂತ್ಯಗಳಲ್ಲಿ ಸಂವಹನ ತಂತ್ರಜ್ಞಾನಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಆದ ನಷ್ಟದ ಅಂದಾಜು ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ವಕಾರಾ ಸುಪೋಟೋ ತಿಳಿಸಿದರು. 

ಎಲ್ಲೆಲ್ಲೂ ಶೋಕ, ಸೂತಕ
ಅಸಂಖ್ಯ ಗಾಯಾಳುಗಳು ಆಸ್ಪತ್ರೆಗಳಲ್ಲಿ ಭರ್ತಿಯಾಗುತ್ತಿದ್ದು, ಯಾವುದೇ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಜಾಗವಿಲ್ಲ ದಂತಾಗಿದೆ. ಹಾಗಾಗಿ, ನೂರಾರು ಮಂದಿಗೆ ಆಸ್ಪತ್ರೆಯ ಆವರಣದಲ್ಲೇ ನೆಲದ ಮೇಲೆಯೇ ಮಲಗಿಸಿ ಶುಶ್ರೂಷೆ ನೀಡಲಾಗುತ್ತಿದೆ. ಪಾಲು ನಗರದ ಅಲ್ಲಲ್ಲಿ ಅರ್ಧ ಮುಖ ಮುಚ್ಚಿಕೊಂಡಿರುವ ಪಾರ್ಥಿವ ಶರೀರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರ ನಡುವೆಯೇ ವ್ಯಕ್ತಿಯೊಬ್ಬ, ಕೆಸರು ಮೆತ್ತಿದ ತನ್ನ ಮೃತ ಮಗುವಿನ ಶವವನ್ನು ಹೆಗಲ ಮೇಲೆ ಹೊತ್ತು ರೋದಿಸಿಕೊಂಡು ಹೋಗುತ್ತಿದ್ದ ದೃಶ್ಯವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿ ಎಲ್ಲರ ಮನ ಕಲಕಿದೆ. ಶುಕ್ರವಾರ ಸಂಭವಿಸಿದ ಭೂಕಂಪದ ನಂತರವೂ ಪಾಲು ನಗರ ಹಾಗೂ ಸುತ್ತಿನ ಪ್ರಾಂತ್ಯಗಳಲ್ಲಿ 100ಕ್ಕಿಂತಲೂ ಲಘು ಕಂಪನಗಳು ಅನುಭವಕ್ಕೆ ಬಂದಿವೆ ಎಂದು ಆ ಪ್ರಾಂತ್ಯದ ನಾಗರಿಕರು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next