Advertisement

Award: ಟಿಎಸ್ಸಾರ್‌, ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

12:44 AM Sep 23, 2024 | Team Udayavani |

ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೆ ನೀಡುವ ಟಿ.ಎಸ್‌.ರಾಮಚಂದ್ರ ರಾವ್‌ (ಟಿಎಸ್ಸಾರ್‌) ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆ ಗುರುತಿಸಿ ನೀಡುವ “ಮೊಹರೆ ಹಣಮಂತರಾಯ’ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಸರಕಾರ ಶನಿವಾರ ಘೋಷಣೆ ಮಾಡಿದೆ.

Advertisement

ಹಿರಿಯ ಪತ್ರಕರ್ತರಾದ ಶಿವಾಜಿ ಗಣೇಶನ್‌, ಪದ್ಮರಾಜ ದಂಡಾವತಿ, ಡಾ| ಆರ್‌. ಪೂರ್ಣಿಮಾ, ಸರಜೂ ಕಾಟ್ಕರ್‌ ಸೇರಿ ಐವರನ್ನು “ಟಿಎಸ್ಸಾರ್‌ಆರ್‌’ ಪ್ರಶಸ್ತಿಗೆ ಮತ್ತು ಇಂದೂಧರ ಹೊನ್ನಾಪುರ, ಪಾಲೆತ್ತಾಡಿ, ಕ್ರಾಂತಿ ಮಂಜುನಾಥ ಸೇರಿ 5 ಮಂದಿಯನ್ನು

“ಮೊಹರೆ ಹಣಮಂತರಾಯ’ ಪ್ರಶಸ್ತಿಗೆ ಆಯ್ಕೆ

ಮಾಡಲಾಗಿದೆ. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ಅಧ್ಯಕ್ಷತೆಯಲ್ಲಿ ನೇಮಿಸಲಾಗಿದ್ದ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದೆ. 2019ರಿಂದ 2023ನೇ ಸಾಲಿನ ಒಟ್ಟು 5 ವರ್ಷಗಳ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಪ್ರಶಸ್ತಿ ತಲಾ 2 ಲಕ್ಷ ರೂ. ನಗದು ಮತ್ತು ಪುರಸ್ಕಾರ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು. ಕೋವಿಡ್‌ ಸೇರಿ ನಾನಾ ಕಾರಣಗಳಿಂದ ಈ ಹಿಂದೆ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಣೆ ಮಾಡಿರಲಿಲ್ಲ ಎಂದು ವಾರ್ತಾಇಲಾಖೆಯ ಆಯುಕ್ತರಾದ ಹೇಮಂತ್‌ ಎಂ. ನಿಂಬಾಳ್ಕರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಿಎಸ್ಸಾರ್‌ ಪತ್ರಿಕೋದ್ಯಮ ಪ್ರಶಸ್ತಿ
2019ನೇ ಸಾಲಿಗೆ ಶಿವಾಜಿ ಎಸ್‌ ಗಣೇಶನ್‌
1978ರಿಂದ ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ವಿವಿಧ ಹುದ್ದೆಗಳಲ್ಲಿ 33 ವರ್ಷ ಸೇವೆ. ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಹೊಸದಿಲ್ಲಿ ಸೇರಿದಂತೆ ವಿವಿಧೆಡೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಅಂಕಣ ಬರಹ.
2020ನೇ ಸಾಲಿಗೆ ಶ್ರೀಕಾಂತಾಚಾರ್ಯ ಆರ್‌. ಮಣೂರ1973ರಿಂದ ಸಂಯುಕ್ತ ಕರ್ನಾಟಕದಲ್ಲಿ ಸೇವೆ ಆರಂಭಿಸಿದ ಮಣ್ಣೂರ ಅವರು ಕಲಬುರಗಿ ಆವೃತ್ತಿಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ.

2021ನೇ ಸಾಲಿಗೆ ಡಾ| ಆರ್‌. ಪೂರ್ಣಿಮಾ
1981ರಿಂದ ವೃತ್ತಿ ಆರಂಭಿಸಿದ ಪೂರ್ಣಿಮಾ ಅವರು ಪ್ರಜಾವಾಣಿ, ಉದಯವಾಣಿಯಲ್ಲಿ ಸುದೀರ್ಘ‌ ಸೇವೆ ಸಲ್ಲಿಸುವುದರ ಜತೆಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಉದಯವಾಣಿಯ ಬೆಂಗಳೂರು ಆವೃತ್ತಿಯ ಸಂಪಾದಕ ಸ್ಥಾನದ ಜವಾಬ್ದಾರಿ ಹೊತ್ತ ಪ್ರಥಮ ಮಹಿಳೆ ಎಂಬ ಹಿರಿಮೆ ಇವರದ್ದಾಗಿದೆ.

Advertisement

2022ನೇ ಸಾಲಿಗೆ ಡಾ| ಪದ್ಮರಾಜ ದಂಡಾವತಿ
ಮೂಲತಃ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದವರಾದ ಪದ್ಮರಾಜ ದಂಡಾವತಿ 1982ರಲ್ಲಿ ಪ್ರಜಾವಾಣಿಗೆ ಸೇರಿ 36 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ.

2023ನೇ ಸಾಲಿಗೆ ಡಾ| ಸರಜೂ ಕಾಟ್ಕರ್‌
ಬೆಳಗಾವಿಯವರಾದ ಸರಜೂ ಕಾಟ್ಕರ್‌ ಅವರು, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ದಿ. ಇಂಡಿಯನ್‌ ಎಕ್ಸಪ್ರಸ್‌ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ 45 ವರ್ಷ ಸೇವೆ ಸಲ್ಲಿಸಿದ್ದಾರೆ.

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ

2019ನೇ ಸಾಲಿಗೆ ರಾಜೀವ್‌ ಕಿದಿಯೂರ
ಗದಗ-ಬೆಟಗೇರಿ ಅವಳಿ ನಗರದಿಂದ ಮುದ್ರಣಗೊಳ್ಳುವ ನವೋದಯ ಕನ್ನಡ ದಿನಪತ್ರಿಕೆಯಲ್ಲಿ ರಾಜೀವ್‌ ಕಿದಿಯೂರ ಅವರು 1989ರಿಂದ ಪತ್ರಿಕೆಯ ಸಂಪಾದಕ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ.

2020ನೇ ಸಾಲಿಗೆ ಇಂದೂಧರ ಹೊನ್ನಾಪುರ

ಮೈಸೂರಿನ ಆಂದೋಲನ, ಪ್ರಜಾವಾಣಿ ದಿನಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮುಂಗಾರು ದಿನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ, ಸುದ್ದಿ ಸಂಗಾತಿ ವಾರಪತ್ರಿಕೆಯ ಸ್ಥಾಪಕ ಸಂಪಾದಕರಾಗಿ, ಸಂವಾದ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ.

2021ನೇ ಸಾಲಿಗೆ ಎನ್‌.ಮಂಜುನಾಥ್‌
ಶಿವಮೊಗ್ಗದ “ಕ್ರಾಂತಿದೀಪ’ ಕನ್ನಡ ದಿನಪತ್ರಿಕೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಚ್ಚು ಮೊಳೆಯ ಮುದ್ರಣದಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿದ ಇವರು ಕಾಲಕ್ಕನುಗುಣವಾಗಿ ಹೊಸಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪತ್ರಿಕೆಯನ್ನು ಜನಪ್ರಿಯಗೊಳಿಸಿದ್ದಾರೆ.

2022ನೇ ಸಾಲಿಗೆ ಚಂದ್ರಶೇಖರ್‌ ಪಾಲೆತ್ತಾಡಿ
ದ.ಕ. ಜಿಲ್ಲೆಯ ಪಾಲೆತ್ತಾಡಿಯವರಾದ ಚಂದ್ರಶೇಖರ ಅವರು ಮುಂಬಯಿಯಲ್ಲಿ ನೆಲೆಸಿದ್ದು, 1992ರಿಂದ ಅನೇಕ ಸವಾಲುಗಳ ಮಧ್ಯೆಯೂ ಕರ್ನಾಟಕ ಮಲ್ಲ ಕನ್ನಡ ದಿನಪತ್ರಿಕೆಯನ್ನು ಹೊರನಾಡಿನಿಂದ ಪ್ರಕಟಿಸುತ್ತಿದ್ದಾರೆ.

2023ನೇ ಸಾಲಿಗೆ ಶಿವಲಿಂಗಪ್ಪ ದೊಡ್ಡಮನಿ
ಕಲಬುರಗಿ ಜಿಲ್ಲೆಯ ಅಫಜಲಪುರದ ಶಿವಲಿಂಗಪ್ಪ ದೊಡ್ಡಮನಿ ಅವರು ಕರ್ನಾಟಕ ಸಂಧ್ಯಾಕಾಲ ಸಂಜೆ ದಿನ ಪತ್ರಿಕೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅದಕ್ಕೂ ಮುನ್ನ ಸರಕಾರಿ ಸೇವೆಯಲ್ಲಿದ್ದ ಇವರು ನಾಡಿನ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next