Advertisement
ವರ್ಷದಿಂದ ವರ್ಷಕ್ಕೆ ನಗರೀಕರಣ ವಿಸ್ತಾರವಾಗುತ್ತಿದೆ. ಜನಸಂಖ್ಯೆ ಬೆಳೆದಂತೆಲ್ಲ ನಿತ್ಯ ಬಳಕೆ ವಸ್ತುಗಳ ಖರೀದಿ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಲಕ್ಷಾಂತರ ಲೀಟರ್ ತ್ಯಾಜ್ಯ ನೀರು ನಗರದಿಂದ ಹರಿದು ಹಳ್ಳ ಸೇರುತ್ತಿದೆ. ಹಳ್ಳಕ್ಕೆ ಸೇರುವ ನೀರು ಮುಂದೆ ನದಿಪಾತ್ರಗಳಿಗೆ ನೇರವಾಗಿ ಸೇರುತ್ತಿದೆ. ನಗರದ ತ್ಯಾಜ್ಯ, ಚರಂಡಿ ನೀರನ್ನು ನೇರ ನದಿಗಳಿಗೆ, ಹಳ್ಳಗಳಿಗೆ ಹರಿ ಬಿಡುವಂತಿಲ್ಲ ಎಂದು ಕಾನೂನು ಖಡಕ್ಕಾಗಿ ಹೇಳುತ್ತಿದೆ. ಚರಂಡಿ ನೀರನ್ನು ನದಿ ಪಾತ್ರಗಳಿಗೆ ಹರಿ ಬಿಡುವ ಮೊದಲು ಅದನ್ನು ಪರೀಕ್ಷೆ ಮಾಡಿ, ಶುದ್ಧೀಕರಿಸಿ ಹರಿಬಿಡಬೇಕಿದೆ. ಆದರೆ ಕೊಪ್ಪಳದಲ್ಲಿ ಹಾಗಾಗುತ್ತಿಲ್ಲ. ನೇರವಾಗಿಯೇ ನಗರದ ಚರಂಡಿ ನೀರು ಹಳ್ಳ ಮೂಲಕ ಮುಂದೆ ನದಿಗೆ ಹರಿಯುತ್ತಿದೆ. ಇದರಿಂದ ಗಂಭೀರ ಸಮಸ್ಯೆ ಎದುರಾಗಿ ರೋಗ, ರುಜಿನಗಳಿಗೆ ಕಾರಣವಾಗುತ್ತಿದೆ.
Related Articles
Advertisement
ವಿವಿಧೆಡೆ ಬ್ಯಾಕ್ಟಿರಿಯಾ ರಿಲೀಸ್: ನಗರಸಭೆ ಚರಂಡಿಗಳಲ್ಲಿ ಬ್ಯಾಕ್ಟಿರಿಯಾ ಬಿಡುಗಡೆ ಮಾಡಿ ಕಲ್ಮಶ ನೀರಿನ ದುರ್ವಾಸನೆ ತಡೆಗೆ ವಿಜ್ಞಾನಿಗಳ ವರದಿ ಆಧರಿಸಿ ಪ್ರಯೋಗಕ್ಕೆ ಮುಂದಾಗಿದೆ. ಇಂತಹ ಪ್ರಯೋಗವನ್ನು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು, ಕಲಬುರಗಿ ನಗರ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದರು. ಅಲ್ಲಿ ನೀರಿನಲ್ಲಿನ ದುರ್ನಾತ ತಡೆಯುವ ಪ್ರಯತ್ನ ಮಾಡಿದ್ದರು. ಅದನ್ನೇ ಕೊಪ್ಪಳದಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ನಗರಸಭೆಯ ಹೊಸತನದ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಚರಂಡಿ ತ್ಯಾಜ್ಯದ ನೀರು ನೇರವಾಗಿ ಹಳ್ಳಕ್ಕೆ ಸೇರುತ್ತಿದೆ. ಇದರಲ್ಲಿನ ಕಲ್ಮಶ ನಿಯಂತ್ರಣಕ್ಕೆ ತರಲು, ಜೈವಿಕವಾಗಿ ಬ್ಯಾಕ್ಟೀರಿಯಾಗಳನ್ನು ಚರಂಡಿಯಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದೇವೆ. ಬ್ಯಾಕ್ಟೀರಿಯಾಗಳು ಕಲ್ಮಶ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಿ ದುರ್ನಾತ ತಡೆಯಲು ಸಹಕಾರಿಯಾಗಲಿವೆ. –ಮಂಜುನಾಥ, ನಗರಸಭೆ ಪೌರಾಯುಕ್ತ
ದತ್ತು ಕಮ್ಮಾರ