Advertisement

ಎಸೆಸೆಲ್ಸಿಯಲ್ಲಿ ಶೂನ್ಯ ಅನುತ್ತೀರ್ಣ ಗುರಿ!

09:42 PM Jan 05, 2020 | mahesh |

ಕುಂದಾಪುರ: ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಕುಂದಾಪುರ ವಲಯ ರಾಜ್ಯದಲ್ಲೇ ಗಮನ ಸೆಳೆಯುತ್ತಿದ್ದು ಈ ಬಾರಿ ಶೂನ್ಯ ಅನುತ್ತೀರ್ಣದೆಡೆ ನಮ್ಮ ನಡೆ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಶೇ.100 ಫ‌ಲಿತಾಂಶಕ್ಕೆ ಗುರಿ ನಿಗದಿಪಡಿಸಲಾಗಿದೆ. ಮಕ್ಕಳೇ ಮಕ್ಕಳಿಗೆ ಹೇಳಿಕೊಡುವ ವಿನೂತನ ವ್ಯವಸ್ಥೆ. ಈ ಮೂಲಕ ಕಲಿತ ಮಕ್ಕಳಿಗೆ ಪುನರ್ಮನನ, ಕಲಿಯದವರಿಗೆ ಸಹಪಾಠಿಯಿಂದಲೇ ಬೋಧನೆ ಮೂಲಕ ಉತ್ಸಾಹ ಹೆಚ್ಚಿಸಲಾಗುವುದು. ಈ ಹೊಸ ಕಾರ್ಯಕ್ರಮದ ಮೂಲಕ ಫ‌ಲಿತಾಂಶ ಹೆಚ್ಚಿಸಲು ಶ್ರಮವಹಿಸಲಾಗಿದೆ.

Advertisement

ಶಿಕ್ಷಣಾಧಿಕಾರಿ ನೇತೃತ್ವ 
ತಾಲೂಕಿನ 40 ಪ್ರೌಢಶಾಲೆಗಳ ಪೋಷಕರ ಸಭೆಯಲ್ಲೂ ಭಾಗವಹಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಯೇ ಇದರ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

ಫ‌ಲಿತಾಂಶ
2019ರಲ್ಲಿ ನಡೆದ ಪರೀಕ್ಷೆಯಲ್ಲಿ ಶೇ.100 ಫ‌ಲಿತಾಂಶ ಪಡೆಯಬೇಕೆಂಬ ಗುರಿ ಹೊಂದಲಾಗಿದ್ದು ಶೇ. 95.68 ಫ‌ಲಿತಾಂಶ ಪಡೆದಿದೆ. 2,296 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 2,197 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಶೇ.12 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ಶೇ.30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಶೇ.30 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಶೇ.15 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು.

2018ರಲ್ಲಿ ಕುಂದಾಪುರ ವಲಯ ಶೇ.90.18 ಫ‌ಲಿತಾಂಶ ಗಳಿಸಿ ಅಗ್ರಸ್ಥಾನ ಉಳಿಸಿಕೊಂಡಿದೆ. ರಾಜ್ಯದಲ್ಲಿ 13ನೇ ಹಾಗೂ ಕರಾವಳಿಯಲ್ಲಿ 10 ನೇ ಸ್ಥಾನವನ್ನು ಕುಂದಾಪುರ ವಲಯ ಪಡೆದುಕೊಂಡಿದೆ. ಜಿಲ್ಲೆಯ 5 ವಲಯಗಳ ಪೈಕಿ ಕುಂದಾಪುರ ಪ್ರಥಮ, ಕಾರ್ಕಳ ಎರಡನೇ ಸ್ಥಾನ, ಉಡುಪಿ 3ನೇ, ಬ್ರಹ್ಮಾವರ 4ನೇ ಹಾಗೂ ಬೈಂದೂರು ವಲಯ 5ನೇ ಸ್ಥಾನ ಗಳಿಸಿದೆ. ಕುಂದಾಪುರ ವಲಯದಲ್ಲಿ 21 ಸರಕಾರಿ, 7 ಅನುದಾನಿತ ಹಾಗೂ 14 ಅನುದಾನ ರಹಿತ ಸೇರಿ ಒಟ್ಟು 41ಪ್ರೌಢಶಾಲೆಗಳ ಪೈಕಿ 5 ಶಾಲೆಗಳು ಶೇ.100 ಫ‌ಲಿತಾಂಶ ಪಡೆದಿದ್ದವು. 2017ರಲ್ಲಿ ಉಡುಪಿ ಜಿಲ್ಲೆಯ 5 ವಲಯಗಳ ಪೈಕಿ ಕುಂದಾಪುರ ಪ್ರಥಮ ಸ್ಥಾನ ಪಡೆದಿತ್ತು. 2016ರಲ್ಲಿ ಕುಂದಾಪುರ ವಲಯ ಶೇ.90.28 ಫ‌ಲಿತಾಂಶ ದಾಖಲಿಸಿತ್ತು.

ಶಿಕ್ಷಕರಿಗೆ ವಿಶೇಷ ತರಬೇತಿ
ಕೆಲವು ಶಾಲೆಗಳಲ್ಲಿ ಸಂಜೆ ಹಾಗೂ ರವಿವಾರ ವಿಶೇಷ ತರಗತಿಗಳನ್ನು ನಡೆಸಿ ಹೆಚ್ಚಿನ ಅಂಕ ಗಳಿಸಲು ಪ್ರೇರಣೆ ನೀಡುವುದು. ವಿಷಯವಾರು ಶಿಕ್ಷಕರಿಗೆ ವಿಶೇಷ ತರಬೇತಿ ಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಸುಲಭವಾಗಿಸುವ ಯೋಜನೆ ಇದಾಗಿದೆ.

Advertisement

ಫ‌ಲಿತಾಂಶ ಉತ್ತಮವಾಗಲು ಕಾರಣಗಳು
ಕಲಿಕೆಯಲ್ಲಿ ಉತ್ತಮವಾಗಿರುವ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್‌ ಪಡೆಯಲು ಸಹಕಾರಿಯಾಗುವಂತೆ 1 ದಿನದ ಕಾರ್ಯಾಗಾರ ಆಯೋಜಿಸುವುದು. ಅಧಿಕ ಅಂಕ ತೆಗೆಯುವ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿಗೆ ಹೇಳಿಕೊಡುವ ಮೂಲಕ ಕನಿಷ್ಠ 10 ಅಂಕಗಳನ್ನಾದರೂ ಹೆಚ್ಚಿಸಲು ಪ್ರೇರಣೆ ನೀಡುವುದು. ವರ್ಷದಲ್ಲಿ ಎರಡು ಬಾರಿ ಎಸೆಸೆಲ್ಸಿ ವಿದ್ಯಾರ್ಥಿಗಳ ಹೆತ್ತವರನ್ನು ಶಾಲೆಗೆ ಕರೆಸಿ ಮನೆಯಲ್ಲಿ ಯಾವ ರೀತಿ ಪರೀಕ್ಷೆಗೆ ತಯಾರಿ ಮಾಡುವ ವಿಧಾನದ ಬಗ್ಗೆ ಮಾರ್ಗದರ್ಶನ.

ಫ‌ಲಿತಾಂಶದಲ್ಲಿ ಏರಿಕೆ
ಶೂನ್ಯ ಅನುತ್ತೀರ್ಣದೆಡೆ ನಮ್ಮ ನಡೆ ಎಂಬ ಗುರಿ ಹಾಕಿಕೊಳ್ಳಲಾಗಿದೆ. ಈ ಬಾರಿ ಅತಿ ಹೆಚ್ಚು ಅಂಕ ತೆಗೆಯುವ ಒಬ್ಬೊಬ್ಬ ವಿದ್ಯಾರ್ಥಿಯೂ ಇನ್ನೊಬ್ಬ ವಿದ್ಯಾರ್ಥಿಗೆ 10 ಅಂಕಗಳಷ್ಟು ಕಲಿಸಿದರೂ ಪರೀಕ್ಷೆ ಫ‌ಲಿತಾಂಶದಲ್ಲಿ ಏರಿಕೆಯಾಗಲಿದೆ. ಶೇ.100 ಫ‌ಲಿತಾಂಶ ನಮ್ಮ ಗುರಿಯಾಗಿ ಇರಲಿದೆ. -ಅಶೋಕ್‌ ಕಾಮತ್‌, ಕ್ಷೇತ್ರ ಶಿಕ್ಷಣಾಧಿಕಾರಿ

ಪುನರಾವರ್ತನೆ ಆಗುತ್ತಿದೆ
ಶಾಲಾವಾರು ಪೋಷಕರ ಸಭೆ ಕರೆದು ಮಕ್ಕಳಿಗಾಗಿ ಸಮಯ ಮೀಸಲಿಡಲು ತಿಳಿ ಹೇಳಿದ್ದೇವೆ. ಈಗಾಗಲೇ ಪಠ್ಯ ಬೋಧನೆ ಮುಗಿದಿದ್ದು ಪುನರಾವರ್ತನೆ ಆಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದ್ದು ಶೇ.80 ಅಂಕ ಪಡೆಯುವವರಿಗೆ ಇನ್ನಷ್ಟು ಅಂಕ ಗಳಿಕೆಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗಿದೆ.
-ಸದಾನಂದ ಬೈಂದೂರು, ಶಿಕ್ಷಣ ಕ್ಷೇತ್ರ ಸಮನ್ವಯಾಧಿಕಾರಿ, ಕುಂದಾಪುರ

ಮೊಬೈಲ್‌ನಿಂದ ದೂರ
ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸುವ ಪ್ರಯತ್ನ ನಡೆದಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬೆಳಗ್ಗೆ ಹಾಗೂ ಸಂಜೆ ತಲಾ 1 ಗಂಟೆ ಪ್ರತ್ಯೇಕ ತರಗತಿ ನಡೆಸಲಾಗುತ್ತದೆ. ಮಕ್ಕಳೇ ಸ್ವಯಂ ಅಧ್ಯಯನ ಮಾಡುವಂತೆ ಪ್ರೇರಣೆ ನೀಡಲಾಗುತ್ತಿದೆ. ಮಕ್ಕಳ ಪೋಷಕರ ಜತೆಗೂ ಸಂಪರ್ಕ ಇರಿಸಿಕೊಂಡು ಮಕ್ಕಳ ಕೌನ್ಸೆಲಿಂಗ್‌ ಮಾಡಲಾಗುತ್ತಿದೆ.
-ಕೃಷ್ಣ ಅಡಿಗ, ಮುಖ್ಯೋಪಾಧ್ಯಾಯರು, ಶ್ರೀ ವೆಂಕಟ ರಮಣ ಆಂಗ್ಲಮಾಧ್ಯಮ ಪ್ರೌಢಶಾಲೆ ಕುಂದಾಪುರ

2016 2016ರಲ್ಲಿ 90.28 ಶೇ. ಫ‌ಲಿತಾಂಶ ಪಡೆದಿತ್ತು.
2017 2017ರಲ್ಲಿ 86 ಶೇ. ಪಡೆದು ಮತ್ತೆ ಹಿನ್ನಡೆಯಾಗಿತ್ತು.
2018 ಶೇ. 90.18

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next