ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಅನೇಕ ವಿಡೀಯೋ ಆಲ್ಬಂಗಳು ಬಂದಿವೆ. ಈಗ ಆ ಸಾಲಿಗೆ “ಕನ್ನಡ ಕಲಿಸಿ ಕನ್ನಡ ಉಳಿಸಿ ಕನ್ನಡ ಬೆಳೆಸೋಣ’ ವೀಡಿಯೋ ಆಲ್ಬಂ ಹೊಸ ಸೇರ್ಪಡೆ ಎನ್ನಬಹುದು. ಅಭಿಲಾಷ್ ಅವರೇ ಗೀತೆ ಬರೆದು, ಸಂಗೀತ ಸಂಯೋಜಿಸಿ ಆ ಹಾಡನ್ನು ನಿರ್ದೇಶಿಸಿರುವುದಲ್ಲದೆ, ನಿರ್ಮಾಣ ಕೂಡ ಮಾಡಿದ್ದಾರೆ.
ರಾಜ್ಯದಲ್ಲಿ ಕನ್ನಡ ಭಾಷೆಗೆ ಧಕ್ಕೆಯಾಗುತ್ತಿದ್ದು, ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿನ ಕನ್ನಡ ಭಾಷೆಗೆ ಪೆಟ್ಟು ಬೀಳುತ್ತಿದೆ ಎಂಬುದನ್ನು ಅರಿತು ಅಭಿಲಾಷ್, ಹಾಡಿನ ಮೂಲಕ ಕನ್ನಡ ಕಲಿಸಿ, ಉಳಿಸಿ, ಬೆಳೆಸುವ ಬಗ್ಗೆ ಒಂದಷ್ಟು ಸಾರುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ವಿಡೀಯೋ ಆಲ್ಬಂ ಕೂಡ ಬಿಡುಗಡೆಯಾಗಿದೆ.
ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂಪಾ, ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಸೇರಿದಂತೆ ಅನೇಕ ಗಣ್ಯರು ವಿಡೀಯೋ ಆಲ್ಬಂಗೆ ಚಾಲನೆ ನೀಡಿದ್ದಾರೆ. ನಿರ್ದೇಶಕ ಅಭಿಲಾಷ್ ಅವರಿಗೆ ಈ ಆಲ್ಬಂ ಮಾಡಬೇಕು ಅಂತ ಅನಿಸಿದ್ದು, ವೈಟ್‌ಫೀಲ್ಡ್‌ನಲ್ಲಿ ಒಮ್ಮೆ ಅಪರಿಚಿತರೊಬ್ಬರಿಗೆ ವ್ಯಕ್ತಿಯೊಬ್ಬರು ವಿಳಾಸವನ್ನು ಬೇರೆ ಭಾಷೆಯಲ್ಲಿ ಹೇಳುತ್ತಿದ್ದನ್ನು ನೋಡಿದ್ದರಂತೆ.
ಆಗ ಅವರಿಗೆ ಕನ್ನಡ ಭಾಷೆ ಬಾರದವರಿಗೆ ಕನ್ನಡ ಕಲಿಸದೆ, ಅವರ ಭಾಷೆಯಲ್ಲೇ ಅವರ ಜೊತೆ ಮಾತಾಡುವುದನ್ನು ನೋಡಿ, ಹೀಗೆ ಇದ್ದರೆ, ಕನ್ನಡ ಭಾಷೆ ಇನ್ನಷ್ಟು ಕುಂಠಿತಗೊಳ್ಳುತ್ತೆ ಎಂಬುದನ್ನು ಅರಿತು, ಕನ್ನಡ ಹಾಡಿನ ಮೂಲಕ ಆ ವಿಷಯ ಸಾರುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು.
ಹಿರಿಯ ಸಾಹಿತಿ ಚಂಪಾ ಅವರು ಕನ್ನಡ ಸತ್ವ ಸಾರುವ ಗೀತೆಯನ್ನು ವೀಕ್ಷಿಸಿದ್ದಲ್ಲದೆ, “ಕನ್ನಡ ನಾಡಿನ ಸಮಗ್ರ ಚಿತ್ರಣ ಸಾಹಿತ್ಯದಲ್ಲಿದೆ. ನಾಡು-ನುಡಿ ಕುರಿತು ಹಾಡಿನ ಮೂಲಕ ಅರಿವು ಮೂಡಿಸಲು ಹೊರಟಿರುವ ನಿರ್ದೇಶಕರ ಪ್ರಯತ್ನ ಶ್ಲಾಘನೀಯ. ಸಿನಿಮಾ ಮಾಧ್ಯಮ ಮೂಲಕ ಸಾಮಾನ್ಯರಿಗೆ ಬೇಗ ವಿಷಯಗಳು ತಲುಪುತ್ತವೆ.
ಈ ಮೂಲಕ ಕನ್ನಡ ಭಾಷೆ ಉಳಿಸುವ ಪ್ರಯತ್ನ ಮಾಡುತ್ತಿರುವುದು ಸಾರ್ಥಕ. ಈ ರಂಗದಿಂದಲೇ ಹಲವು ಸಾಹಿತಿಗಳು ಹೆಸರು ಮಾಡಿದ್ದಾರೆ. ನಿರ್ದೇಶಕರ ಪ್ರಯತ್ನಕ್ಕೆ ನಮ್ಮ ಸಹಕಾರವಿದೆ’ ಎಂಬುದು ಚಂಪಾ ಮಾತು. ಉಳಿದಂತೆ ಅಂದು ಹಾಜರಿದ್ದ ಗಣ್ಯರೆಲ್ಲರೂ ಕನ್ನಡ ಗೀತೆ ಮೂಡಿಬಂದಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.