ಉಪ್ಪಿನಂಗಡಿ: ಅಪಘಾತಕ್ಕೀಡಾಗಿ ಸುದೀರ್ಘ ಕಾಲದ ಚಿಕಿತ್ಸೆಗೆ ತುತ್ತಾಗಿರುವ ಮಗನಿಗೆ ಸಹಾಯ ಹಸ್ತ ನೀಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ ಕುಟುಂಬವನ್ನು ದೋಚಲು ಯತ್ನಿಸಿದ ಘಟನೆ ನಡೆದಿದೆ.
ಇಲ್ಲಿನ ಪೆರಿಯಡ್ಕ ನಿವಾಸಿ ಶೇಖರ್ ಪೂಜಾರಿ ಅವರ ಪುತ್ರ ಕಾಲೇಜು ವಿದ್ಯಾರ್ಥಿ ವಂದಿತ್ ಎಸ್. ಕಳೆದ ಜನವರಿಯಲ್ಲಿ ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದಾರೆ. ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯವಿದ್ದ ಕಾರಣ ದಾನಿಗಳ ಸಹಕಾರ ಬಯಸಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿಯನ್ನು ಹರಿಯಬಿಡಲಾಗಿತ್ತು.
ಇದನ್ನು ಗಮನಿಸಿದ ವ್ಯಕ್ತಿಯೋರ್ವ ತಾನು ಗುಲ್ಬರ್ಗದ ಪ್ರಖ್ಯಾತ ದರ್ಗಾವೊಂದರ ಪದಾಧಿಕಾರಿ ಎಂದು ಪರಿಚಯಿಸಿ, ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಸಮಾಜದ ಮುಂದೆ ಪ್ರಸ್ತಾವಿಸಲಾಗಿತ್ತು. 1.98 ಲಕ್ಷ ರೂ. ಸಂಗ್ರಹಣೆಗೊಂಡಿದೆ. ಈ ಮೊತ್ತವನ್ನು ಪಡೆಯಲು ತಾವು ಖುದ್ದಾಗಿ ಬರುತ್ತೀರಾ ಅಥವಾ ನಾವು ಬಂದು ಕೊಡಬೇಕಾ ಎಂದು ಕೇಳಿದ್ದರು. 1.98 ಲಕ್ಷ ರೂ. ಮೊತ್ತ ಸಿಗುವುದಾದರೆ ಗುಲ್ಬರ್ಗಕ್ಕೆ ಹೋಗುವುದಕ್ಕೆ ಮನಸ್ಸು ಮಾಡಿ ವಿಚಾರವನ್ನು ಉಪ್ಪಿನಂಗಡಿಯ ಪಂ. ಸದಸ್ಯ ಯು. ಟಿ. ತೌಶಿಫ್ ಗಮನಕ್ಕೆ ತರಲಾಯಿತು. ಗುಲ್ಬರ್ಗದ ಸಂಘ ಸಂಸ್ಥೆಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿರದ ಅವರು ನಲಪ್ಪಾಡ್ ಹಾಗೂ ಯು. ಟಿ. ಖಾದರ್ ಮೂಲಕ ಗುಲ್ಬರ್ಗದ ಕಾಂಗ್ರೆಸ್ ಮುಂದಾಳುಗಳ ಸಂಪರ್ಕ ಸಾಧಿಸಿ ಸಂಸ್ಥೆಯ ಬಗ್ಗೆ ಮಾಹಿತಿ ಪಡೆದಾಗ ಫೋನಾಯಿಸಿದ ವ್ಯಕ್ತಿಗೂ ದರ್ಗಾದ ಸಮಿತಿಗೂ ಯಾವುದೇ ಸಂಬಂಧವಿಲ್ಲವೆಂದು ತಿಳಿಯಲ್ಪಟ್ಟಿದೆ. ಇದು ಮೋಸವಾಗಿರಬಹುದೆಂದು ತಿಳಿದು ಹಣವನ್ನು ಬ್ಯಾಂಕ್ ಖಾತೆಗೆ ಹಾಕಲು ತಿಳಿಸಿದಾಗ ತಾವೇ ತರುವುದಾಗಿ ಹೇಳಿ ವಾಹನ ಬಾಡಿಗೆ 4,000 ರೂ. ಫೋನ್ ಪೇ ಮಾಡುವಂತೆ ತಿಳಿಸಿದ. ಒಟ್ಟುಮೊತ್ತದಿಂದ ಅದನ್ನು ಕಡಿತಗೊಳಿಸುವಂತೆ ತಿಳಿಸಿದ ಬಳಿಕ ಆತ ಯಾವುದೇ ಕರೆ ಮಾಡಿಲ್ಲ. ಆದುದರಿಂದ ಇದೊಂದು ವಂಚನಾ ಜಾಲ ಆಗಿರಬಹುದೆಂದು ಶಂಕಿಸಲಾಗಿದೆ.