Advertisement

ಬುರ್ಖಾ ಧರಿಸಿ ಆಲಮಟ್ಟಿ ಜಲಾಶಯಕ್ಕೆ ನುಗ್ಗಲು ಯತ್ನ: ಹಾಸನ ಮೂಲದ ಯುವಕ ಪೊಲೀಸ್ ವಶಕ್ಕೆ

10:41 AM Jul 25, 2022 | Team Udayavani |

ಆಲಮಟ್ಟಿ (ವಿಜಯಪುರ): ಸೋಮವಾರ ಬೆಳ್ಳಂಬೆಳಿಗ್ಗೆ ಮಹಿಳೆಯರ ವೇಷದಲ್ಲಿದ್ದ ಶಂಕಿತ ಯುವಕ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನುಗ್ಗಲು ಯತ್ನಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಜರುಗಿದೆ.

Advertisement

ನಸುಕಿನಲ್ಲಿ ಆಲಮಟ್ಟಿ ಪರಿಸರದಲ್ಲಿ ಕಾಣಿಸಿಕೊಂಡ ಯುವಕ ಬುರ್ಖಾ ಧರಿಸಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯ ಪ್ರವೇಶಕ್ಕೆ ಮುಂದಾಗಿದ್ದಾನೆ. ಈ ವೇಳೆ ಜಲಾಶಯದ ಪ್ರವೇಶ ದ್ವಾರದಲ್ಲಿ ಭದ್ರತೆಗೆ ಇದ್ದ ಪೊಲೀಸರು ಇಷ್ಟು ಬೇಗ ಜಲಾಶಯ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಈ ವೇಳೆ ನಡೆದ ಮಾತುಕತೆಯಲ್ಲಿ ಬುರ್ಖಾ ಧರಿಸಿದ್ದು ಮಹಿಳೆಯಲ್ಲ ಪುರುಷ ಎಂಬುದು ಧ್ವನಿಯಿಂದ ಸ್ಪಷ್ಟವಾಗಿದೆ. ಪರಿಣಾಮ ಪೊಲೀಸರು ಆತನ ಮೇಲೆ ನಿಗಾ ಇರಿಸಿದಾಗ ಕೆಲ ಸಮಯದ ಬಳಿಕ ಬುರ್ಖಾಧಾರಿ ಪಕ್ಕದ ಬೇಲಿಯತ್ತ ತೆರಳಿ ಬುರ್ಖಾ ಬದಲಿಸಿ ಯುವಕನ ವೇಷದಲ್ಲಿ ಮತ್ತೆ ಜಲಾಶಯದ ಪ್ರವೇಶ ದ್ವಾರದಲ್ಲಿ ಪತ್ತೆಯಾಗಿದ್ದಾನೆ.

ಇದರಿಂದ ಕೂಡಲೇ ಎಚ್ಚೆತ್ತ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕೈಚೀಲದಲ್ಲಿ ಯುವತಿಯರು ಧರಿಸುವ ಬಟ್ಟೆಗಳು, ಲಿಪ್ ಸ್ಟಿಕ್, ನೈಲ್ ಪಾಲಿಶ್ ಹೀಗೆ ಇತರೆ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ವಶಕ್ಕೆ ಪಡೆದ ಯುವಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಪೊಲೀಸ್ ವಶದಲ್ಲಿರುವ ಯುವಕ ಹಲವು ಹೆಸರುಗಳನ್ನು ಹೇಳುತ್ತಿದ್ದು, ತಾನು ಹಾಸನ ಜಿಲ್ಲೆಯ ಜಿಲ್ಲೆಯ ಸಕಲೇಶಪುರ ನಿವಾಸಿ ಎಂದು ಹೇಳಿಕೊಂಡಿದ್ದಾನೆ.

Advertisement

ಸಕಲೇಶಪುರ ಪಟ್ಟಣದಲ್ಲಿ ಎರಡು ಬೇಕರಿ ಅಂಗಡಿ ಹೊಂದಿರುವುದಾಗಿ, ದೈಹಿಕವಾಗಿ ತನ್ನಲ್ಲಿ ಮಹಿಳಾತನ ಪರಿವರ್ತನೆ ಆಗುತ್ತಿರುವ ಕಾರಣ ಯುವತಿಯರ ವೇಷ ಧರಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

ಹೆತ್ತವರು ತನಗೆ ಮದುವೆ ಮಾಡಲು ವಧು ಅನ್ವೇಷಣೆ ಮಾಡುತ್ತಿದ್ದಾರೆ. ನನ್ನಲ್ಲಿ ಗಂಡಿನಿಂದ ಹೆಣ್ಣಿನ ಬದಲಾವಣೆಯಾಗುತ್ತಿದೆ. ಹೀಗಾಗಿ ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿರುವ ನನಗೆ ಮದುವೆ ಬೇಡ ಎಂದರೂ ಒತ್ತಡ ಹೇರುತ್ತಿರುವ ಕಾರಣ ಮನೆ ತೊರೆದು ಬಂದಿರುವುದಾಗಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ:ಅರುಣಾಚಲದ ಚೀನಾ ಗಡಿ ಬಳಿ 20 ದಿನದ ಹಿಂದೆ ನಾಪತ್ತೆಯಾಗಿದ್ದ ಮತ್ತಿಬ್ಬರು ಕಾರ್ಮಿಕರು ಪತ್ತೆ

ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ಪೊಲೀಸರಿಗೆ ಲಿಂಗ ಪರಿವರ್ತನೆಯ ಭೀತಿಯಲ್ಲಿರುವ ಯುವಕನ ವಿಚಿತ್ರ ವರ್ತನೆ ಮಾತ್ರ ಎಂಬ ಮಾಹಿತಿ ಲಭಿಸಿದೆ.

ಆದರೂ ಯುವಕ ಹಾಸನದಿಂದ ಆಲಮಟ್ಟಿಗೆ ಬಂದದ್ದು ಏಕೆ, ನಸುಕಿನಲ್ಲೇ ಜಲಾಶಯ ಪ್ರವೇಶಕ್ಕೆ ಯತ್ನಿಸಿದ್ದು ಏಕೆ ಎಂದೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next