ಹುಬ್ಬಳ್ಳಿ: ಉದ್ಯಮಕ್ಕೆ ಹೂಡಿಕೆ ಮಾಡಲು ಬೇರೆ ಬೇರೆ ರಾಜ್ಯಗಳಿಂದ ಕಂಪೆನಿಗಳು ಬರುತ್ತಿವೆ. ರಾಜ್ಯಕ್ಕೆ ಬರುವ ಐಟಿ ಕಂಪೆನಿಗಳನ್ನು ಉತ್ತರ ಕರ್ನಾಟಕಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಅಶ್ವತ್ಥನಾರಾಯಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಕಲಿಕೆಗೆ ಒತ್ತು ನೀಡಲಾಗಿದೆ. ಆಡ್ಯಮ್ ಪ್ರೋಗ್ರಾಮ್, ಮೈಕ್ರೊಸೈಟ್, ಮೊಡ್ರಿಂಗ್ ಸಹಿತ 1200ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಅಧ್ಯಯನದಲ್ಲಿ ಸೇರಿಸಲಾಗಿದೆ. ಈ ಮೊದಲು 10 ಸಾವಿರ ವಿದ್ಯಾರ್ಥಿಗಳು ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಕಲಿಯುತ್ತಿದ್ದರೂ ಈಗ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇದರಿಂದ ಪ್ರತಿಭೆ ಅನಾವರಣ ಹಾಗೂ ಉದ್ಯೋಗ ಸೃಷ್ಟಿಯಾಗಿದೆ ಎಂದರು.
ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ ಎಂಟು ಕಂಪೆನಿಗಳು ಉದ್ಯಮ ಸ್ಥಾಪಿಸಿದ್ದಾರೆ. 1,200 ಉದ್ಯೋಗ ಸೃಷ್ಟಿಯಾಗಿವೆ. ಸ್ಟಾರ್ಟ್‌ಅಪ್ ಗ್ರೀಡ್ ಆರಂಭಿಸಲಾಗಿದ್ದು, ಇದರಲ್ಲಿ 400 ಕಂಪೆನಿಗಳು ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ಐದು ಸ್ಟಾರ್ಟ್‌ಅಪ್ ಸುಧಾರಣೆ ಮಾಡಲಾಗುತ್ತಿದೆ. ಪ್ರಗತಿ ಹಂತದಲ್ಲಿರುವ 50ರಲ್ಲಿ 10 ಸ್ಟಾರ್ಟ್‌ಅಪ್‌ಗ್ಳನ್ನು ಆಯ್ಕೆ ಮಾಡಿ ಪ್ರತಿಷ್ಠಿತ ಕಂಪೆನಿಗಳ ಮೂಲಕ ಹೂಡಿಕೆ ಮಾಡಿಸಿ ವೇದಿಕೆ ಕಲ್ಪಿಸುವ ಇಲಾಖೆಯಿಂದ ಆಗುತ್ತಿದೆ ಎಂದರು.
ಸೆಂಟರ್ ಆಫ್ ಎಕ್ಸ್‌ಲೆನ್ಸ್‌ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಅಪಾರವಾದ ಬದಲಾವಣೆಯಾಗುತ್ತದೆ. 4 ಸಾವಿರ ಉದ್ಯೋಗ ಸೃಷ್ಟಿಯಾಗಿವೆ. ಗ್ಲೋಬಲ್ ಎಮರ್ಜಿಂಗ್ ಡಿಸೈನ್ ಸೆಂಟರ್ ಅಭಿವೃದ್ಧಿ ಪಡಿಸಲಾಗಿದೆ. 85 ಸ್ಟಾರ್ಟ್‌ಅಪ್‌ಗೆ ಅನುದಾನ ನೀಡಲಾಗಿದೆ. ಈಗಾಗಲೇ 5 ಸ್ಟಾರ್ಟ್ ಅಪ್‌ಗಳು ಆರಂಭವಾಗಿವೆ. ಐಟಿಐ ಹಾಗೂ ಪಾಲಿಟೆಕ್ನಿಕ್‌ಗಳ ಸುಧಾರಣೆಗೆ ರಾಜ್ಯ ಸರಕಾರ ಅನುಸರಿಸಿದ ಯೋಜನೆ ಮಾದರಿಯಾಗಿದೆ. ಇದನ್ನು ದೇಶದ ವಿವಿಧ ರಾಜ್ಯಗಳು ಅನುಸರಿಸುತ್ತಿವೆ. ವಿಜ್ಞಾನ ವಿಷಯ ಆಯ್ಕೆ ಮಾಡದ ವಿದ್ಯಾರ್ಥಿಗಳು ಕೂಡ ನೂತನ ಶಿಕ್ಷಣ ನೀತಿ ಮೂಲಕ ಇನ್ಮುಂದೆ ಕನಿಷ್ಠ ವಿಜ್ಞಾನ ಕಲಿಯಲಿದ್ದಾರೆ. ಇದು ಪರೀಕ್ಷೆಗೆ ಕೂಡ ಅನ್ವಯಿಸಲಿದೆ. ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ 180 ಕೋಟಿ ರೂ. ಅನುದಾನ ನೀಡಲಾಗಿದೆ. ಇಲ್ಲಿನ ಇನ್ಫೋಸಿಸ್ ಕಂಪೆನಿ ತನ್ನ ಕಾರ್ಯ ವಿಸ್ತರಿಸಲಿದೆ ಎಂದರು.
ಹುಬ್ಬಳ್ಳಿ ಐಟಿ ಪಾರ್ಕ್‌ಗೆ
4 ಕೋಟಿ ರೂ.
ಸ್ಟಾರ್ಟ್‌ಅಪ್‌ಗಾಗಿ ಎಸ್ಸಿ, ಎಸ್ಟಿ, ಮಹಿಳಾ ಉದ್ಯಮಿಗಳಿಗೆ ಹಾಗೂ ಕಲ್ಯಾಣ ಕರ್ನಾಟಕ ಜನರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಹುಬ್ಬಳ್ಳಿಯ ಐಟಿ ಪಾರ್ಕ್ ವಿಸ್ತರಣೆಗೆ 4 ಕೋಟಿ ರೂ. ಅನುದಾನ ನೀಡಲಾಗಿದೆ. ಐಟಿಯೇತರ ಕಂಪೆನಿಗಳನ್ನು ತೆರವುಗೊಳಿಸಿ ಅಗತ್ಯಕ್ಕೆ ತಕ್ಕಂತೆ ಬೇಡಿಕೆ ಈಡೇರಿಸಲಾಗುತ್ತದೆ. ಆರ್ಯಭಟ್ ಟೆಕ್ ಪಾರ್ಕ್ ವಿಸ್ತರಿಸಲಾಗುತ್ತದೆ. ಬೆಳಗಾವಿಯ ವಿಟಿಯು ಕಾಲೇಜಿನಲ್ಲಿ ಸಹ ಐಟಿ ಪಾರ್ಕ್ ಇದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.