Advertisement

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಸುರೇಶ್‌ ಭಂಡಾರಿ

06:36 PM Mar 16, 2020 | Suhan S |

ಮುಂಬಯಿ, ಮಾ. 15: ತುಳು ಸಾಹಿತ್ಯ ಅಕಾಡೆಮಿ ಕರ್ನಾಟಕ ಸರಕಾರ ಇದರ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಕನ್ನಡಿಗ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿಯ ಸದಸ್ಯ, ಸಮಾಜ ಸೇವಕ, ಸಂಘಟಕ, ಉದ್ಯಮಿ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ಅವರನ್ನು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ವತಿಯಿಂದ ಅಭಿನಂದಿಸಲಾಯಿತು.

Advertisement

ಮಾ. 15ರಂದು ಪೂರ್ವಾಹ್ನ ಘಾಟ್ಕೊಪರ್‌ ಪಶ್ಚಿಮದ ಮನಿಫೋಲ್ಡ್‌ ಕಚೇರಿಯಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್‌ ಬಂಟ್ವಾಳ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರೇಶ್‌ ಭಂಡಾರಿ ಅವರನ್ನು ಶಾಲು ಹೊದೆಸಿ, ಪುಷ್ಪಗುಚ್ಛ, ಸ್ಮರಣಿಕೆಯನ್ನಿತ್ತು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಡಂದಲೆ ಸುರೇಶ್‌ ಭಂಡಾರಿ ಅವರು, ತುಳುಭಾಷೆ ನನ್ನ ಭಾಷೆ-ನನ್ನ ಮಾತೆ ಅನ್ನುವ ಧ್ಯೇಯೋದ್ದೇಶದೊಂದಿಗೆ ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಅನಾದಿ ಕಾಲದಿಂದಲೂ ಬೆಳೆದು ಬಂದ ತುಳುಭಾಷೆ ಒಂದು ಸಂಸ್ಕೃತಿ, ಸಮಾಜಯೂ ಹೌದು. ಇದರ ಸರ್ವೋನ್ನತಿಯೇ ನನ್ನ ಉದ್ದೇಶವಾಗಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಮತ್ತು ಸರ್ವ ಸದಸ್ಯರ ಒಪ್ಪಿಗೆಯಂತೆ ಕರ್ನಾಟಕ ಸರಕಾರವು ನನ್ನನ್ನು ನಾಮ ನಿರ್ದೇಶಕನಾಗಿ ನೇಮಿಸಿದ್ದು, ಕಾರಣಕರ್ತರಾದ ಸರ್ವ ತುಳುವರಿಗೂ ವಂದಿಸುತ್ತೇನೆ. ನಮ್ಮ ಕಾಲಾವಧಿಯಲ್ಲಿ ಖಂಡಿತವಾಗಿಯೂ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ರಾರಾಜಿಸುವಲ್ಲಿ ಯಶ ಕಾಣುವ ಆಶಯ ನಮ್ಮಲ್ಲಿದೆ.

ಇದಕ್ಕೆ ಮುಂಬಯಿವಾಸಿ ತುಳುವರ ಸಹಯೋಗವೂ ಅತ್ಯವಶ್ಯವಾಗಿದೆ. ಮುಂಬಯಿ ತುಳುವರ ಸಮಸ್ಯೆಗಳಿಗೆ ತುಳು ಅಕಾಡೆಮಿಯ ಮೂಲಕ ನಿಮ್ಮೆಲ್ಲರ ಪ್ರತಿನಿಧಿಯಾಗಿ ಸ್ಪಂದಿಸುವ ಇಚ್ಛೆಯೊಂದಿಗೆ ಮುಂಬಯಿಯಲ್ಲಿ ತುಳುಭಾಷಾ ಅಭಿವೃದ್ಧಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಸ್ತ ತುಳುವರನ್ನು ಒಂದುಗೂಡಿಸುವ ಹೆಬ್ಬಯಕೆ ನನ್ನದಾಗಿದೆ. ಅದಕ್ಕೆ ತುಳುವರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.

ಕನ್ನಡಿಗ ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್‌. ಸುವರ್ಣ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ, ತುಳು, ಹಿಂದಿ, ಮರಾಠಿ ಇತ್ಯಾದಿ ಭಾಷೆಗಳಲ್ಲಿ ನಿಪುಣರೆಣಿಸಿ ಓರ್ವ ವಾಗ್ಮಿಯಾಗಿ ಗುರುತಿಸಿಕೊಂಡ ಕಡಂದಲೆ ಸುರೇಶ್‌ ಭಂಡಾರಿ ಅವರು ಈ ಸ್ಥಾನಕ್ಕೆ ಸಮರ್ಥ ವ್ಯಕ್ತಿಯಾಗಿದ್ದಾರೆ. ಮುಂಬಯಿ ತುಳುವರ ಪ್ರತಿನಿಧಿಯಾಗಿ ತುಳುವರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವೂ ಇವರಲ್ಲಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಇವರ ಸೇವೆ ಅಪಾರವಾಗಿದೆ. ಸಮಗ್ರ ಸಮಾಜವನ್ನು ಆರೋಗ್ಯ ಪೂರ್ಣವಾಗಿಸುವ ಸ್ವತ್ಛ ಮನೋ ಭಾವವುಳ್ಳ ಭಂಡಾರಿ ಅವರು ಓರ್ವ ಹೃದಯಶೀಲ ತುಳುವರೂ ಹೌದು. ಡಾ| ಸುನೀತಾ ಎಂ. ಶೆಟ್ಟಿ, ಶಿಮಂತೂರು ಚಂದ್ರಹಾಸ ಸುವರ್ಣ ಇವರ ಬಳಿಕ ಮತ್ತೆ ತುಳು ಅಕಾಡೆಮಿಗೆ ಸದಸ್ಯತ್ವ ನೀಡಿ ಕರ್ನಾಟಕ ಸರಕಾರ ಮುಂಬಯಿ ನೆಲೆಯ ತುಳುವರನ್ನು ಗೌರವಿಸಿದಂತಾಗಿದೆ ಎಂದರು.

Advertisement

ಅಧ್ಯಕ್ಷ ರೋನ್ಸ್‌ ಬಂಟ್ವಾಳ್‌ ಅವರು ಸುರೇಶ್‌ ಭಂಡಾರಿ ಅವರನ್ನು ಅಭಿನಂದಿಸಿ ಮಾತನಾಡಿ, ಸುರೇಶ್‌ ಭಂಡಾರಿ ಅವರು ಮುಂಬಯಿಯ ದೇವತಾ ಸದ್ಗುಣರು. ತುಳು ಭಾಷೆ-ಸಂಸ್ಕೃತಿಯ ಜೊತೆಗೆ ಎಲ್ಲಾ ಭಾಷಿಕರನ್ನೂ ಪ್ರೋತ್ಸಾಹಿಸುವ ಬಹು ಭಾಷಿಕ ಹೃದಯವಂತರು ಹೌದು. ಸರ್ವರನ್ನೂ ಬಂಧುಗಳಾಗಿ ಕಾಣುವ ಸ್ವಚ್ಛ, ನಿರ್ಮಲ ಮನಸುಳ್ಳ ಇವರು ಮಹಾರಾಷ್ಟ್ರ ಮಾತ್ರವಲ್ಲ ರಾಷ್ಟ್ರದ ಆಸ್ತಿಯಾಗಿದ್ದಾರೆ. ಇಂತಹವರಿಂದ ಮುಂಬಯಿಯಲ್ಲಿ ಮತ್ತಷ್ಟು ತುಳು ಭಾಷೆ-ಸಂಸ್ಕೃತಿಯ ಉನ್ನತಿಯಾಗಲಿ. ತುಳುವರ ಆಶೋತ್ತರಗಳು ಇವರಿಂದ ಈಡೇರುವಂತಾಗಲಿ ಎಂದು ನುಡಿದು ಸುರೇಶ್‌ ಭಂಡಾರಿ ಅವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಂಗ ಎಸ್‌. ಪೂಜಾರಿ, ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಗೌರವ ಕೋಶಾಧಿಕಾರಿ ನಾಗೇಶ್‌ ಪೂಜಾರಿ ಏಳಿಂಜೆ, ಜತೆ ಕಾರ್ಯದರ್ಶಿ ಜಯರಾಮ ಎನ್‌. ಶೆಟ್ಟಿ, ಪತ್ರಕರ್ತರ ಭವನ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಜಯಂತ್‌ ಕೆ. ಸುವರ್ಣ, ವಿಶೇಷ ಆಮಂತ್ರಿತ ಸದಸ್ಯರುಗಳಾದ ರಂಗಕರ್ಮಿ-ಸಾಹಿತಿ ಸಾ. ದಯಾ, ಕರುಣಾಕರ್‌ ವಿ. ಶೆಟ್ಟಿ, ಸದಸ್ಯರಾದ ಆರೀಫ್‌ ಕಲಕಟ್ಟಾ, ಸುರೇಶ್‌ ಕೆ. ಮೂಲ್ಯ ಮತ್ತಿತರರು ಉಪಸ್ಥಿತರಿದ್ದು ಸುರೇಶ್‌ ಭಂಡಾರಿ ಅವರನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next