Advertisement

ಬಿಎಸ್‌ವೈ ನಿವಾಸಕ್ಕೆ ಮುತ್ತಿಗೆ ಯತ್ನ

01:41 PM Jul 11, 2017 | |

ಶಿವಮೊಗ್ಗ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ವಿನೋಬನಗರದಲ್ಲಿನ ಸಂಸದ ಬಿ.ಎಸ್‌. ಯಡಿಯೂರಪ್ಪನವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾದ ಘಟನೆ ನಡೆಯಿತು.

Advertisement

ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು. ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ತೀವ್ರ ಬರಗಾಲ ಉಂಟಾಗಿದ್ದು, ಕಳೆದ ವರ್ಷದಿಂದೀಚೆಗೆ ಬರದ ತೀವ್ರತೆ
ಹೆಚ್ಚಾಗಿದೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆಗಾಗಿ ಮಾಡಿದ ಸಾಲದ ಸುಳಿಯಿಂದ ಹೊರಬರಲಾಗದ
ಅನ್ನದಾತರು ಬೇರೆ ದಾರಿ ಕಾಣದೇ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ರೈತರ ಸಹಕಾರಿ ಬ್ಯಾಂಕ್‌ ಗಳಲ್ಲಿನ 8165 ಕೋಟಿ ಸಾಲ ರೂ. ಮನ್ನಾ ಮಾಡಿದೆ. ಇದರಿಂದ 22,27,506 ರೈತರಿಗೆ ಅನುಕೂಲವಾಗಿದೆ. ಆದರೂ ರೈತರ ಸಂಕಷ್ಟಕ್ಕೆ ಪರಿಹಾರ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಬೇಕಿದೆ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರ ಧೋರಣೆ ನಿಜಕ್ಕೂ ಖಂಡನೀಯ. ಯಾರೊಬ್ಬರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ.
ಅವರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಈಗ ರೈತರ ಸಾಲ ಮನ್ನಾ ವಿಚಾರವನ್ನೇ ಪ್ರಸ್ತಾಪ ಮಾಡುತ್ತಿಲ್ಲ. ಮೊದಲು ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಲಿ, ಕೇಂದ್ರ ಸರ್ಕಾರವೂ
ಸಾಲ ಮನ್ನಾ ಮಾಡುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಯಡಿಯೂರಪ್ಪನವರಾಗಲಿ, ಇತರೆ ನಾಯಕರಾಗಲೀ ಈಗ ಮೌನ
ವಹಿಸಿರುವುದೇಕೆ? ಎಂದು ಪ್ರಶ್ನಿಸಿದರು. 

ಬಿಜೆಪಿಯ 19 ಮಂದಿ ಸಂಸದರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೂ ಸದನದಲ್ಲಾಗಲಿ, ಪ್ರಧಾನಿಯವರ ಮುಂದಾಗಲೀ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆಯಾಗಲೀ ಗಮನ ಸೆಳೆಯುತ್ತಿಲ್ಲ. ಇವರ ರೈತರ ಮೇಲಿನ ಪ್ರೀತಿ ಏನಿದ್ದರೂ ಅಧಿಕಾರಕ್ಕಾಗಿ, ಜನರ ಗಮನ ಸೆಳೆಯುವುದಕ್ಕಾಗಿ ಮಾತ್ರ ಸೀಮಿತವಾಗಿದೆ ಎನ್ನುವುದು ಇದರಿಂದ ಜಗಜ್ಜಾಹೀರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಗೂಬೆ  ಕೂರಿಸುವ ಪ್ರಯತ್ನ ಮಾಡುತ್ತಿದ್ದ ಬಿಜೆಪಿ ನಾಯಕರು ಕರ್ನಾಟಕದ ರೈತರ ಪರ ಏಕೆ 
ಧ್ವನಿ ಎತ್ತುತ್ತಿಲ್ಲ. ರೈತರ ನೆರವಿಗೆ ಧಾವಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನೇಕೆ ಆಗ್ರಹಿಸುತ್ತಿಲ್ಲ. ಕೂಡಲೇ ಬಿಜೆಪಿ ನಾಯಕರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಎಲ್ಲಾ ಸಾಲವನ್ನೂ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರೈತರ ಸಾಲ ಮನ್ನಾ ಮಾಡಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು. ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಜಿ. ಮಧುಸೂದನ್‌, ಶರತ್‌, ಗಿರೀಶ್‌, ಎಸ್‌.ಭರತ್‌, ಮಹಮ್ಮದ್‌ ಆರೀಫ್‌ವುಲ್ಲಾ, ಮಹಮ್ಮದ್‌ ನಿಹಾಲ್‌, ವಿನಯ್‌ ತಾಂದೆ, ಸುರೇಶ್‌ ಕುಮಾರ್‌ ಇತರರು ಇದ್ದರು. 

Advertisement

ಕಾಂಗ್ರೆಸ್‌ನ ಮತ್ತೂಂದು ಬಣದಿಂದ ಮುತ್ತಿಗೆ  

ಶಿವಮೊಗ್ಗ: ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಸಂಸದ ಬಿ.ಎಸ್‌. ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. 
ವಿನೋಬನಗರದಲ್ಲಿರುವ ಸಂಸದ ಬಿ.ಎಸ್‌.ಯಡಿಯೂರಪ್ಪ ಮನೆಗೆ ಬೆಳಿಗ್ಗೆ ಯುವ ಕಾಂಗ್ರೆಸ್‌ನ ಒಂದು ಬಣ ಮುತ್ತಿಗೆ ಹಾಕಿದ್ದು, ಇದಾದ ನಂತರ ಯುವ ಕಾಂಗ್ರೆಸ್‌ ಮುಖಂಡ ಕೆ.ರಂಗನಾಥ್‌ ನೇತೃತ್ವದಲ್ಲಿ ಮತ್ತೂಂದು ಬಣ ಮುತ್ತಿಗೆ ಹಾಕಲು ಯತ್ನಿಸಿತು. ಆದರೆ ಸ್ಥಳದಲ್ಲಿದ್ದ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ದೇಶದಲ್ಲಿ ಕಳೆದ 3ವರ್ಷಗಳಿಂದ ಸತತ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದೆ ಕಂಗೆಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಂಕಷ್ಟಕ್ಕೆ ಒಳಗಾದ ರೈತರ ಹಿತಕಾಪಾಡಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಪ್ರವೀಣ್‌ಕುಮಾರ್‌, ಹೆಚ್‌.ಪಿ.ಗಿರೀಶ್‌, ತಂಗರಾಜ್‌, ಆರ್‌.ಕಿರಣ್‌, ಟಿ.ವಿ.ರಂಜಿತ್‌, ಇ.ಟಿ.ನಿತಿನ್‌,
ವಿನೋದ್‌, ಲೋಕೇಶ್‌, ರಾಹುಲ್‌, ಪ್ರವೀಣ್‌, ಚಂದ್ರು ಮತ್ತಿತರರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next