Advertisement

ಸಾಯೋವರೆಗೂ ಪ್ರಯತ್ನ ಮಾಡ್ತೀನಿ

10:48 AM Nov 13, 2017 | Team Udayavani |

ಉಪೇಂದ್ರ ಹೊಸ ರಾಜಕೀಯ ಪಕ್ಷ ಹುಟ್ಟಿಹಾಕಿದ್ದು ಗೊತ್ತೇ ಇದೆ. ಮುಂದಿನ ವರ್ಷದ ವಿಧಾನಸಬೆ ಚುನಾವಣೆಗೆ ಉಪೇಂದ್ರ ಮತ್ತು ಅವರ ಪಕ್ಷ ದೊಡ್ಡ ಮಟ್ಟದಲ್ಲಿ ಎಂಟ್ರಿ ಕೊಡುವ ನಿರೀಕ್ಷೆ ಇದೆ. ಇದೆಲ್ಲದರ ಮಧ್ಯೆ ಬಹಳ ಜನರಿಗೆ ಇದೊಂದು ಪ್ರಶ್ನೆ ಇದ್ದೇ ಇದೆ. ಉಪೇಂದ್ರರಿಗೆ ಇವೆಲ್ಲಾ ಬೇಕಿತ್ತಾ ಮತ್ತು ಈ ವ್ಯವಸ್ಥೆಯಲ್ಲಿ ಉಪೇಂದ್ರ ಏನಾದರೂ ಮಾಡುವುದಕ್ಕೆ ಸಾಧ್ಯವಾ ಎಂದು?

Advertisement

 ಈ ಕುರಿತು ಉಪೇಂದ್ರ ಅವರನ್ನು ಕೇಳಿದರೆ, “ಎಷ್ಟೋ ಜನ ನನಗೆ ಇದು ಬೇಕಿತ್ತಾ ಅಂತ ಕೇಳುತ್ತಾರೆ. ನಾನು ಬಹಳ ಕೆಳಮಟ್ಟದಿಂದ ಬಂದವನು. ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಾ, ಕ್ರಮೇಣ ಲಕ್ಸುರಿ ಕಂಡವನು ನಾನು. ಸಿನಿಮಾ ಮಾಡಿದೆ, ಪಾರಿನ್‌ ಸುತ್ತಿದೆ, ನನ್ನದೇ ರೆಸಾರ್ಟ್‌ ಇದೆ… ಆದರೂ ಸುಖ ಸಿಗಲಿಲ್ಲ. ಏನೋ ಬೇರೆ ಕಾಡುತ್ತಿದೆ. ನಾನು ಹುಟ್ಟಿರೋದೇ ಬೇರೆ ಕಾರಣಕ್ಕೆ ಅಂತ ಅನಿಸುತಿತ್ತು.

ಎಲ್ಲರೂ ತಪ್ಪನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಆ ತಪ್ಪನ್ನು ಸರಿ ಮಾಡಬೇಕೆಂದು ಹೊರಟಿದ್ದೇನೆ. ಇದರಲ್ಲಿ ಗೆಲ್ಲುತ್ತೀನಿ ಎನ್ನುವ ನಂಬಿಕೆ ಇದೆ. ಗೆದ್ದರೆ ಸಂತೋಷ. ಇಲ್ಲ ಸಾಯೋವರೆಗೂ ಪ್ರಯತ್ನ ಮಾಡುತ್ತಲೇ ಇರುತ್ತೀನಿ. ಪ್ರತಿ ಚುನಾವಣೆಯ ಆರು ತಿಂಗಳ ಮುಂಚೆ ಬಂದು ಪ್ರಯತ್ನ ಮಾಡುತ್ತಲೇ ಇರುತ್ತೀನಿ’ ಎನ್ನುತ್ತಾರೆ ಉಪೇಂದ್ರ.

 ಇನ್ನು ಏನೋ ಮಾಡಬೇಕು ಎಂಬ ಕಲ್ಪನೆ ಉಪೇಂದ್ರ ಕಾಲೇಜು ಹೋಗುತ್ತಿದ್ದ ದಿನಗಳಿಂದ ಇತ್ತಂತೆ. “ನನ್ನ ಉದ್ದೇಶ ಸಿನಿಮಾ ಅಲ್ಲ, ಬೇರೇನೋ ಇದೆ ಅಂತ ಹೇಳುತ್ತಲೇ ಬಂದಿದ್ದೆ. ನಾನು ಪಿಯುಸಿಯಲ್ಲಿದ್ದಾಗಲೇ ಈ ಆಸೆ ಇತ್ತು. ಆಗ ಈ ದೇಶ ಎಂದರೇನು, ರಾಜ್ಯ ಎಂದರೇನು ಅಂತ ಯಾವುದೂ ಗೊತ್ತಿರಲಿಲ್ಲ. ಏನೋ ಮಾಡಬೇಕು ಅಂತ ಮಾತ್ರ ಆಸೆ ಇತ್ತು.

 ಆಗ ನಾನು ಬೆಂಗಳೂರು ಹೈಸ್ಕೂಲ್‌ನಲ್ಲಿ ಓದುವಾಗ, ಒಬ್ಬರು ಎಜೆಆರ್‌ ಅಂತ ಇತಿಹಾಸದ ಮೇಷ್ಟ್ರಿದ್ದರು. ಅವರು ನಮ್ಮ ದೇಶದ ಇತಿಹಾಸ ಹೇಳ್ಳೋರು. ಈ ದೇಶವನ್ನ ಯಾರ್ಯಾರು ಆಳಿದರು, ಏನೆಲ್ಲಾ ಮಾಡಿದರು ಅಂತ ಪಾಠ ಮಾಡುತ್ತಿದ್ದರು. ಆಗಲೇ ನಾನೂ ಏನೋ ಮಾಡಬೇಕು ಅಂತ ಆಸೆ ಇತ್ತು. ಸಿನಿಮಾ ನಟನಾದರೆ, ಏನೋ ಮಾಡಬಹುದು ಅಂತ ಬಂದೆ.

Advertisement

ಮೊದಲ ಬಾರಿಗೆ ಮನ್ಮಥನ ಪಾತ್ರದಲ್ಲಿ ನನ್ನನ್ನ ನೋಡಿದಾಗ ಶಾಕ್‌ ಆಯ್ತು. ಸರಿ ನಟನೆ ಬೇಡ, ಇನ್ನೊಂದು ಮಾಡೋಣ ಅಂತ ನಿರ್ದೇಶನ ಮಾಡಿದೆ. ಕೊನೆಗೆ ಇನ್ನ್ಯಾರೋ ಹೀರೋ ವಾಡಿದರು. ಎಲ್ಲವೂ ಅದಾಗೇ ಆಗುತ್ತಲೇ ಹೋಯ್ತು. ಈಗ ಕೊನೆಗೂ ಅವಕಾಶ ಸಿಕ್ಕಿದೆ’ ಎನ್ನುತ್ತಾರೆ ಉಪೇಂದ್ರ.

ಎಲ್ಲಾ ಜನರ ಕೈಲಿದೆ!: ಉಪೇಂದ್ರ ಅಭಿನಯದ “ಉಪೇಂದ್ರ ಮತ್ತೆ ಬಾ’ ಚಿತ್ರ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಆ ನಂತರ ಚಿತ್ರಜೀವನದ ಅವರ ಪ್ಲಾನ್‌ ಏನು ಎಂದು ಕೇಳಿದರೆ, “ಎಲ್ಲಾ ಜನರ ಕೈಲಿದೆ’ ಎಂದು ಉತ್ತರಿಸುತ್ತಾರೆ ಅವರು. “ಎಲ್ಲಾ ಅವರ ಕೈಲಿದೆ. ಹಾಲಲ್ಲಿ ಹಾಕಿದರೆ ಹಾಲಲ್ಲಿ ಇರ್ತೀನಿ, ನೀರಲ್ಲಿ ಹಾಕಿದರೆ ನೀರಲ್ಲಿ ಇರ್ತೀನಿ.

ಈ ವಾರ “ಉಪೇಂದ್ರ ಮತ್ತೆ ಬಾ’ ಬಿಡುಗಡೆಯಾಗುತ್ತದೆ. ಆ ನಂತರ ತೆಲುಗು ನಿರ್ಮಾಪಕರ “ಹೋಮ್‌ ಮಿನಿಸ್ಟರ್‌’ ಚಿತ್ರ ಮುಗಿಸಬೇಕಿದೆ. ಇದಾದ ಮೇಲೆ ಚುನಾವಣೆಗಳು. ಚುನಾವಣೆಯ ನಂತರ ಏನಾಗುತ್ತದೋ ಇನ್ನೂ ಗೊತ್ತಿಲ್ಲ’ ಎನ್ನುತ್ತಾರೆ ಅವರು. ಈ ಮಧ್ಯೆ “ಉಪ್ಪಿ-ರುಪ್ಪಿ’ ಚಿತ್ರದ ಕಥೆಯೇನು ಎಂದರೆ, ಅದು ಸದ್ಯಕ್ಕಿಲ್ಲ ಆಮೇಲೆ ಎಂಬ ಉತ್ತರ ಅವರಿಂದ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next