ರಾಜ್ಯ ಬಜೆಟ್‌ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೂರ್ವಭಾವಿ ಸಭೆ ಆರಂಭಿಸಿದ್ದು ಬಜೆಟ್ ರಚನೆಯ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಮುಂಬರುವ ಸಾಲಿನ ಬಜೆಟ್‌ನಲ್ಲಿ ಹಿಂದಿನ ಸರಕಾರದ ಕೆಲವು ಜನಪ್ರಿಯ ಯೋಜನೆಗಳನ್ನು ಕೈ ಬಿಡುವ ಕುರಿತೂ ಚರ್ಚೆ ಪ್ರಗತಿಯಲ್ಲಿದೆ.
ಸರಕಾರ ಪ್ರತೀ ವರ್ಷವೂ ಜನಪ್ರಿಯ ಮತ್ತು ಬಡವರ ಪರವಾದ ಯೋಜನೆಗಳನ್ನು ಘೋಷಿಸುತ್ತದೆ. ಆದರೆ ಅನುಷ್ಠಾನ ಹಂತದ ವೈಫಲ್ಯದಿಂದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುವುದಿಲ್ಲ. ಇದನ್ನೇ ಮಾನದಂಡವಾಗಿಸಿ ಏಕಾಏಕಿ ಈ ಯೋಜನೆಗಳೇ ನಿರರ್ಥಕ ಎಂಬ ತೀರ್ಮಾನಕ್ಕೆ ಬರುವುದು ಸರ್ವಥಾ ಸರಿಯಲ್ಲ. ಘೋಷಣೆಯ ಸಂದರ್ಭದಲ್ಲಿ ಜನಪ್ರಿಯ ಮತ್ತು ಬಡವರ ಪರ ಎಂದು ವ್ಯಾಖ್ಯಾನಿಸಲ್ಪಟ್ಟ ಯೋಜನೆಗಳು ಅನುಷ್ಠಾನಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಮೂಲೆಗುಂಪಾಗುತ್ತವೆ ಎಂದರೆ ಎಲ್ಲೋ ದೋಷವಿರುವುದು ಸ್ಪಷ್ಟ. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ರಾಜಕೀಯ, ಅಧಿಕಾರಿಗಳ ಅಸಡ್ಡೆಯೂ ಕಾರಣವಾಗಿರಬಹುದು ಅಥವಾ ಯೋಜನೆಗಳ ರೂಪಣೆಯಲ್ಲಿಯೇ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳಿರಬಹುದು. ಇನ್ನು ಹಲವು ಬಾರಿ ಯೋಜನೆಯ ಕಾರ್ಯ ಸಾಧ್ಯತೆ ಹಾಗೂ ಪ್ರಸ್ತುತತೆಯನ್ನು ಸರಿಯಾಗಿ ಅಭ್ಯಸಿಸದಿರಲೂ ಬಹುದು. ಕೆಲವು ಬಾರಿ ಯೋಜನೆಗಳ ವೈಫಲ್ಯಕ್ಕೆ ಜನರೂ ಬಾಧ್ಯಸ್ತರಾಗಿರುತ್ತಾರೆ.
ಎಲ್ಲ ಸರಕಾರಗಳ ಗುರಿ, ಉದ್ದೇಶ ಜನಕಲ್ಯಾಣ, ಅಭಿವೃದ್ಧಿಯೇ. ಇದುವೇ ಪ್ರಜಾಪ್ರಭುತ್ವದ ಮೂಲ ಉದ್ದೇಶ. ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ರಿಯೆ. ಹಿಂದೆ ಅಧಿಕಾರದಲ್ಲಿದ್ದ ಪಕ್ಷ ಜಾರಿಗೆ ತಂದ ಜನಪ್ರಿಯ ಯೋಜನೆಯನ್ನು ಸಕಾರಣವಿಲ್ಲದೆ ರದ್ದುಗೊಳಿಸುವುದು ಇಂಥ ಅಭಿವೃದ್ಧಿಯ ಓಟಕ್ಕೆ ತಡೆ ಒಡ್ಡಿದಂತೆಯೇ. ಹಾಗೆಂದು ಹೆಸರಿಗೆಂದು ಆರಂಭಿಸಿದ, ಕೇವಲ ಜನಪ್ರಿಯತೆಗೆ, ಮತ ರಾಜಕಾರಣಕ್ಕೆಂದೇ ಘೋಷಿಸಿದ ಕಾರ್ಯ ಸಾಧ್ಯವಲ್ಲದ ಯೋಜನೆಗಳನ್ನು ಕಡಿತಗೊಳಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆಳುವವರು ನೆನಪಿನಲ್ಲಿಡಬೇಕಾದ ಮತ್ತೂಂದು ಸಂಗತಿಯೆಂದರೆ, ಹಳೆಯ ಯೋಜನೆ ಸರಿಯಿಲ್ಲವೆಂದು ರದ್ದುಪಡಿಸಿ ಅದನ್ನೇ ಹೊಸ ಹೆಸರಿನಡಿ ಘೋಷಿಸುವುದೂ ಸರಿಯಲ್ಲ.
ಇದರ ಬದಲು ಬಡವರು ಮತ್ತು ಜನಹಿತದ ಉದ್ದೇಶದಿಂದ ಜಾರಿಗೆ ತರಲಾದ ಒಳ್ಳೆಯ ಯೋಜನೆಗಳ ವೈಫಲ್ಯಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ಸಮರ್ಪಕ ಅನುಷ್ಠಾನಕ್ಕೆ ಮುಂದಾಗುವ ಹೊಣೆಗಾರಿಕೆ ಪ್ರತೀ ಸರಕಾರದ್ದು. ಅದರ ತೊಡಕುಗಳನ್ನು ನಿವಾರಿಸಿ ನೈಜ ಫಲಾನುಭವಿಗಳಿಗೆ ತಲುಪಿಸಲು ಶತಾಯ ಗತಾಯ ಪ್ರಯತ್ನಿಸಬೇಕು. ಅಗತ್ಯಬಿದ್ದಲ್ಲಿ ಇಂಥ ಜನಪರ ಯೋಜನೆಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲೂಬಹುದು. ಇದಕ್ಕಾಗಿಯೇ ಶಾಸನ ಸಭೆಗಳಿವೆ. ಈ ಸಾಧ್ಯತೆಗಳತ್ತ ಸರಕಾರ ಗಮನ ಹರಿಸಬೇಕು. ಇದನ್ನು ಬಿಟ್ಟು ಜನರಿಗೆ ತಲುಪಿಲ್ಲ, ಅನುಷ್ಠಾನ ಕಷ್ಟಸಾಧ್ಯ.. ಎಂಬೆಲ್ಲ ಆಡಳಿತ ನೀಡುವ ಕಾರಣಗಳನ್ನು ನಂಬಿಕೊಂಡು ಜನಪ್ರಿಯ ಯೋಜನೆಗಳನ್ನು ರದ್ದುಗೊಳಿಸುವ ಕ್ರಮ ನೆಗಡಿಯಾದರೆ ಮೂಗನ್ನೇ ಕತ್ತರಿಸಿಕೊಂಡಂತೆ. ಅದು ಸರ್ವಥಾ ಸಲ್ಲದು. ಅಭಿವೃದ್ಧಿಯ ನಾಗಾಲೋಟಕ್ಕೆ ತಮ್ಮ ನಿರ್ಧಾ ರಗಳು ಯಾವುದೇ ಕಾರಣಕ್ಕೂ ತಡೆಯೊಡ್ಡಬಾರದೆಂಬ ಎಚ್ಚರ ಆಳುವ ವರಲ್ಲಿರಬೇಕು. ಸಾರ್ವಜನಿಕರ ನಿರೀಕ್ಷೆಯೂ ಅದೇ.