ಅಲ್ಲಿ ಕಣ್ಣಾಡಿಸಿದ ಕಡೆಯೆಲ್ಲಾ ಜೋಶ್ ತುಂಬಿತ್ತು. ಸೇರಿದ್ದವರ ಮಾತಲ್ಲಿ ಜೋಶ್ ಇತ್ತು, ನಗುವಲ್ಲೂ ಜೋಶ್ ಇತ್ತು. ಅತ್ತಿತ್ತ ನಡೆದಾಡುವುದರಲ್ಲೂ ಜೋಶ್ ಮನೆಮಾಡಿತ್ತು. ಅಂಥದ್ದೊಂದು “ಜೋಶ್’ಗೆ ಕಾರಣವಾಗಿದ್ದು, ಜೋಶಿ. ಹೌದು, ನಟ ಕಮ್ ಮಾತಿನ ಮಲ್ಲ ವಿನಾಯಕ ಜೋಶಿ ಅಂಥದ್ದೊಂದು “ಜೋಶ್’ ವಾತಾವರಣಕ್ಕೆ ಕಾರಣವಾಗಿದ್ದರು. ಅದಕ್ಕೆ ಕಾರಣ, ಅವರ “ಜೋಶೀಲೇ’.
ಕನ್ನಡದಲ್ಲೀಗ ವೆಬ್‌ಸೀರೀಸ್ ಪರ್ವ. ಅದಕ್ಕೆ ವಿನಾಯಕ ಜೋಶಿ ಕೂಡ ಹೊರತಲ್ಲ. ಅವರ “ಜೋಶೀಲೇ’, ವೆಬ್‌ಸೀರೀಸ್‌ಗೆ ಹೊಸ ಸೇರ್ಪಡೆ. ಏಳು ಕಂತುಗಳಲ್ಲಿ ಪ್ರಸಾರವಾಗಲಿರುವ ಕನ್ನಡ ವೆಬ್‌ಸೀರೀಸ್‌ಗೆ ವಿನಾಯಕ ಜೋಶಿ ಅವರದೇ ನಿರ್ದೇಶನ ಮತ್ತು ನಿರ್ಮಾಣ. ಅವರ ಪರಿಕಲ್ಪನೆಯಲ್ಲೇ “ಜೋಶೀಲೇ’ ಶುರುವಾಗಿದೆ. ಅವರ ಜೋಶಿ ಚಿತ್ರ ಬ್ಯಾನರ್‌ನಲ್ಲೇ “ಜೋಶೀಲೇ’ ಶುರುವಾಗಲಿದೆ. ತಮ್ಮ ಹೊಸ ಪ್ರಯತ್ನವನ್ನು ಮಾಧ್ಯಮ ಮುಂದೆ ಹೇಳಿಕೊಳ್ಳಲೆಂದೇ ವಿನಾಯಕ ಜೋಶಿ, ಒಂದು ಎಪಿಸೋಡ್ ತೋರಿಸಿದರು.
“ಇದು ಕಳೆದ ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡ ಪರಿಕಲ್ಪನೆ. ಎಲ್ಲೇ ಹೋದರೂ, ನನಗೊಂದು ಪ್ರಶ್ನೆ ಕಾಡುತ್ತಲೇ ಇತ್ತು. ತನ್ನನ್ನು ತಾನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಂದಷ್ಟು ರೂಪಗೊಳ್ಳಬೇಕೆಂಬ ಉದ್ದೇಶ ನನ್ನ ಪ್ರಶ್ನೆ ಹಿಂದಿತ್ತು. ಸಾಧನೆಗೈದಿರುವ ಅನೇಕರ ಹಿಂದೆ ಹಲವು ನೋವುಗಳಿವೆ. ಅದನ್ನು ಎಲ್ಲಾ ವರ್ಗಕ್ಕೂ ಪರಿಚಯಿಸಬೇಕು ಎಂಬ ಹಠವಿತ್ತು. ನಮ್ಮ ನಡುವಿನ ಸಾಮಾನ್ಯ ಜನರೇ ಹೀರೋಗಳಿದ್ದಾರೆ. ಅಂತಹವರ ಬದುಕಿನ ಸಾಹಸಗಾಥೆ ಹೇಳಬೇಕೆಂಬ ಆಸೆ ಹೆಚ್ಚಾಯ್ತು. ಅಂತಹ ಸಾಧಕರನ್ನು ಹುಡುಕಿ ಅವರ ಹಿಂದಿನ ಪರಿಶ್ರಮ, ನೋವು-ಗೆಲುವು ಎಲ್ಲವನ್ನೂ ತೋರಿಸುವ ಮೂಲಕ “ಜೋಶ್’ ಬರುವಂತೆ ಮಾಡಬೇಕು ಅಂತ ಮನಸ್ಸು ಮಾಡಿದ್ದರಿಂದಲೇ “ಜೋಶೀಲೇ’ ಹುಟ್ಟುಕೊಂಡಿತು’ ಎಂದು ವಿವರ ಕೊಟ್ಟರು ವಿನಾಯಕ ಜೋಶಿ.
“ಇಲ್ಲಿ ಪ್ರತಿ ಎಪಿಸೋಡ್ ಕೇವಲ ಹದಿನೈದು ನಿಮಿಷಗಳಲ್ಲಿ ಮೂಡಿಬರುತ್ತೆ. ಯುಟ್ಯೂಬ್‌ನಲ್ಲಿ ಎಲ್ಲೆಂದರಲ್ಲಿ, ಯಾವಾಗ ಬೇಕೆಂದರೆ ಆವಾಗ, ಕುಳಿತಲ್ಲೇ, ನಿಂತಲ್ಲೇ, ಮಲಗಿದ್ದಲ್ಲೇ ಜನರು ವೆಬ್‌ಸೀರೀಸ್ ಮೂಲಕ “ಜೋಶೀಲೇ’ ವೀಕ್ಷಿಸಬಹುದು. ಒಂದು ಲೆಕ್ಕದಲ್ಲಿ ಇದು ಯುಟ್ಯೂಬ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ. ಆರಂಭದಲ್ಲಿ ಒಬ್ಬನೇ ಹೊರಟೆ. ನನ್ನ ಜರ್ನಿಯಲ್ಲಿ ಒಬ್ಬೊಬ್ಬರೇ ಕೈ ಜೋಡಿಸಿದರು. ಅದೀಗ 120 ಜನರ ಸಹಕಾರ, ಪ್ರೋತ್ಸಾಹ ಮತ್ತು ಶ್ರಮದಿಂದ “ಜೋಶೀಲೇ’ ಶುರುವಾಗಿದೆ. ಪ್ರತಿ ಸಂಚಿಕೆಯಲ್ಲೂ ಸಾಧಕರು ಮತ್ತು ಅವರ ಸಾಧನೆ ತೋರಿಸುವ ಮೂಲಕ ನೋಡುಗರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ತುಂಬಿ ಪ್ರೋತ್ಸಾಹಿಸುವ ಪ್ರಯತ್ನ “ಜೋಶೀಲೆ’ ಮಾಡಲಿದೆ. ನೋಡುಗರಲ್ಲಿ ಇದರಿಂದ ಸಣ್ಣ ಬದಲಾವಣೆಯಾದರೆ, ಅದೇ “ಜೋಶೀಲೇ’ ಮಾಡಿದ್ದಕ್ಕೂ ಸಾರ್ಥಕ. ಇಲ್ಲಿ ಹಿರಿಯ ಕಲಾವಿದರಾದ ಶ್ರೀನಾಥ್, ಮಾಸ್ಟರ್ ಹಿರಣ್ಣಯ್ಯ, ಉಪೇಂದ್ರ, ಪ್ರಸಿದ್ಧ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಸೇರಿದಂತೆ ಹಲವರು “ಜೋಶೀಲೇ’ ಭಾಗವಾಗಿ ತಮ್ಮ ಅನುಭವ ಹಂಚಿಕೊಂಡು ಸ್ಪೂರ್ತಿಯಾಗಿದ್ದಾರೆ’ ಎನ್ನುವ ವಿನಾಯಕ ಜೋಶಿ, “ಇಲ್ಲಿ ಏಳು ಹಾಡುಗಳಿವೆ. ಸುಜಿತ್ ವೆಂಕಟರಾಮಯ್ಯ, ಚಂದನ್ ಶೆಟ್ಟಿ ಜೊತೆ ನಾನೂ ಗೀತೆ ರಚಿಸಿದ್ದೇನೆ. ಧೀರೇಂದ್ರ ದಾಸ್ ಅವರ ಸಂಗೀತವಿದೆ. ಸೆಪ್ಟೆಂಬರ್ 17 ರಂದು ಸಖತ್ ಸ್ಟುಡಿಯೋ ವೆಬ್‌ಸೈಟ್ ಮತ್ತು ಯುಟ್ಯೂಬ್‌ನಲ್ಲಿ “ಜೋಶೀಲೇ’ ಪ್ರಸಾರವಾಗಲಿದೆ’ ಎಂಬುದು ವಿನಾಯಕ ಜೋಶಿ ಮಾತು.
ಅಂದು ತಮ್ಮ “ಜೋಶೀಲೇ’ ಹಿಂದೆ ನಿಂತ ಅವರ ತಾಯಿ, ಗೆಳೆಯರು, ಹಿತೈಷಿಗಳನ್ನೆಲ್ಲಾ ವೇದಿಕೆಗೆ ಕರೆದು ವಿನಾಯಕ ಜೋಶಿ ಗೌರವಿಸಿದರು.