Advertisement

ಒಳ್ಳೆಯವರಾಗಲು ಯತ್ನಿಸಿ; ಒಳ್ಳೆಯವರಂತೆ ನಟಿಸದಿರಿ

11:57 PM Feb 17, 2024 | Team Udayavani |

ಖ್ಯಾತ ದಾರ್ಶನಿಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಅರವಿಂದ ಘೋಷ್‌ ಅವರು ತಮ್ಮ ಒಂದು ವೇದಾಂತ ಗ್ರಂಥದಲ್ಲಿ ಸಾರ್ವಕಾಲಿಕ ಸತ್ಯವಾದ ಒಂದು ವಾಕ್ಯವನ್ನು ಉದ್ಗರಿಸಿದ್ದಾರೆ. “ಈ ಪ್ರಪಂಚದಲ್ಲಿ ಒಳ್ಳೆಯವರಿಗಿಂತಲೂ ಒಳ್ಳೆಯವರಂತೆ ನಟಿಸುವವರ ಸಂಖ್ಯೆಯೇ ಅಧಿಕ. ಅಂತಹವರಿಗಿಂತ ಕೆಟ್ಟವರೆಂದು ಪರಿಗಣಿಸಲ್ಪಟ್ಟವರೇ ಕಡಿಮೆ ಅಪಾಯಕಾರಿಗಳು’ ಎಂತಹ ಅದ್ಭುತ ಚಿಂತನೆ. ಇಂದು ಸಮಾಜದಲ್ಲಿ ನಾವು ಕಾಣುತ್ತಿರುವವರಲ್ಲಿ ಪ್ರತಿಶತ 90ರಷ್ಟು ಮಂದಿಗೆ ಮೇಲಿನ ವಾಕ್ಯ ನೇರವಾಗಿ ಅನ್ವಯಿಸುತ್ತದೇನೊ? ಸಮಾಜದ ಸರ್ವಸ್ತರದಲ್ಲೂ ಮುಖವಾಡವಾದಿಗಳೇ ಪ್ರಮುಖವಾಗಿ ಗೋಚರಿಸುತ್ತಾರೆ.

Advertisement

ಅಂಥವರ ಕಳಕಳಿಗಳ ಅಂತರಂಗವು ಅಪವಿತ್ರ ಮತ್ತು ಅಪ ರಿಶುದ್ಧವಾಗಿರುವುದು ಹಾಗೂ ನಾಟಕೀಯತೆಯನ್ನು ಹೊಂದಿ ರುವುದು ಸರ್ವ ದುರಂತಗಳಿಗೆ ಮೂಲ ಎಂದರೆ ತಪ್ಪಾಗದು.ಘೋಷರ ದಿಟವಾದ ನುಡಿಯು ನೇರವಾಗಿ ಅನ್ವಯಿಸುವುದು ಪ್ರಸ್ತುತದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೆ ಎಂದು ಹೇಳಲು ಸಾಧ್ಯವಿದೆ. ಹಿರಿಯ ರಾಜಕೀಯ ಮತ್ತು ಸಾಮಾಜಿಕ ಮುತ್ಸದ್ಧಿ ರಾಮ್‌ಮನೋಹರ ಲೋಹಿಯಾರ ಸಮಾಜವಾದ ತಣ್ತೀದ ಕಟ್ಟಾಳು ಕಾಗೋಡು ತಿಮ್ಮಪ್ಪ ಅವರು ತಮ್ಮ ಆಪ್ತರಲ್ಲಿ ಯಾವಾಗಲೂ ಒಂದು ಹಿತನುಡಿ ನುಡಿಯುತ್ತಾರೆ. “ನಮ್ಮ ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಅತ್ಯಂತ ಗುರುತರವಾದ ವ್ಯವಸ್ಥೆ ಇದೆ. ಆದರೆ ಇವೆಲ್ಲಕ್ಕಿಂತಲೂ ಅತೀ ಮಹತ್ವವಾದುದು ಜನಾಂಗ. ಪ್ರಪಂಚದ ಶ್ರೇಷ್ಠ ಸಂವಿಧಾನವಿರುವ ಈ ದೇಶದಲ್ಲಿ ಜನಾಂಗವೇ ಪ್ರಧಾನ. ಪ್ರಧಾನವಾದ ಈ ಮೂರು ಅಂಗಗಳು ಜನಾಂಗದ ಹೃದಯ, ಬುದ್ಧಿ, ಶರೀರದಂತಿರಬೇಕು’ ಎಂತಹ ಅಪೂರ್ವ ಚಿಂತನೆ!.

ಸ್ವತಂತ್ರ ಭಾರತದ ಆರಂಭ ಹಂತದಲ್ಲಿ ಅಂದರೆ ಸಂವಿಧಾನವು ರೂಪುಗೊಂಡ ಸಂದರ್ಭದಲ್ಲಿ ತಿಮ್ಮಪ್ಪನವರ ತಣ್ತೀವು ಕೊಂಚ ಪ್ರಕಾಶಮಾನವಾಗಿತ್ತೇನೋ? ಆದರೆ ಇಂದು? ಜನಾಂಗವನ್ನು ಸಂಪೂರ್ಣ ಮೂಲೆಗುಂಪಾಗಿಸುವ ನಿಟ್ಟಿನಲ್ಲೇ ಎಲ್ಲವೂ ನಡೆಯುತ್ತದೆ ಎಂದೆನಿಸುತ್ತದೆ.

ಇಂದು ಪೌರರಾದ ನಮಗೆ ಮತದಾನದ ಹಕ್ಕು ಮಾತ್ರವಿದೆ. ಚುನಾವಣೆಯ ಅನಂತರ ಮತದಾರನಿಗೆ ಕವಡೆ ಕಿಮ್ಮತ್ತೂ ಇರು ವುದಿಲ್ಲ. ಗೆದ್ದೆತ್ತು ಎತ್ತ ಬೇಕಾದರೂ ಓಡಾಡಬಹುದು. ಎಲ್ಲಿ ಬೇಕಾದರೂ ಮೇಯಬಹುದು. “ಕುದುರೆ ಇದೆ ಮೈದಾನವೂ ಇದೆ. ಮಜಾ ಮಾಡು’ ಅಲ್ಲವೇ? ಇದು ದುರ್ಗತಿ. “ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೇ’ ಎಂಬಂತೆ ಜನಾಂಗದ ಭವ್ಯ ಭವಿತವ್ಯದ ದೋಣಿ ದೂರ ತೀರವನ್ನು ಸೇರುವ ನಿರೀಕ್ಷೆಯನ್ನು ಇರಿಸಿಕೊಂಡು ಗಾಳಿ ಬಂದತ್ತ ಸಾಗುತ್ತದೆ. ಒಳ್ಳೆಯವನಂತೆ ನಟಿಸುವ ನಾವಿಕ ತನ್ನ ಖುಷಿಯಂತೆ ಹುಟ್ಟು ಹಾಕುತ್ತಾ ನಾವೆಯನ್ನು ಚಲಾಯಿಸುತ್ತಾನೆ!.

ಗಾಂಧೀಜಿಯವರು ಸ್ವಾತಂತ್ರ್ಯ ಚಳವಳಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವ ವೇಳೆ ನುಡಿದ ಕೆಲವು ವಾಕ್ಯಗಳು ಗಮನ ಸೆಳೆಯುತ್ತವೆ. “ಅತ್ಯಂತ ದರಿದ್ರರಾದ ಜನಾಂಗವೂ ಕೂಡ ಈ ದೇಶ ತನ್ನದು ಎಂದು ಎದೆ ತಟ್ಟುವ ಭಾರತಕ್ಕಾಗಿ ನಾನು ದುಡಿ ಯಲು ಬಯಸುತ್ತೇನೆ. ಅಂತಹ ಭಾರತದಲ್ಲಿ ಮೇಲು-ಕೀಳು ವರ್ಗ ಭೇದಗಳಿರುವುದಿಲ್ಲ. ಅಲ್ಲಿ ಎಲ್ಲ ಜನಾಂಗಗಳ ಜನರೂ ಸಾಮರಸ್ಯದಿಂದ ಬದುಕುತ್ತಾರೆ. ಸ್ತ್ರೀಯರು, ಪುರುಷರಷ್ಟೇ ಸಮಾನತೆ ಹೊಂದಿರುತ್ತಾರೆ. ಇದು ನನ್ನ ಕನಸಿನ ಭಾರತ’. ಗಾಂಧೀಜಿಯವರು ಈ ಸ್ವಪ್ನ ಸಾಕಾರ ಗೊಂಡಿದೆಯೇ? ದೇಶದ ಜನಾಂಗದ ನೆಮ್ಮದಿಯ ಬದುಕಿನ ಕನಸು ನನಸಾಗಿದೆಯೇ?

Advertisement

ಮೋಹನದಾಸ, ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next