ಮೈಸೂರು: ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗ ನಂಬಿ ಕುಳಿತರೆ ಪ್ರಯೋಜವಿಲ್ಲ. ಸಮುದಾಯದ ಎಲ್ಲಾ ಮುಖಂಡರು ಒಟ್ಟಿಗೆ ಸೇರಿ ಸಮಾಜದ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನಾ ಹೇಳಿದರು.
ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ , ಜಿಲ್ಲಾ ಗಾಣಿಗರ ಗೆಳೆಯರ ಬಳಗದಿಂದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾನುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ, ಹಿರಿಯರಿಗೆ ಸನ್ಮಾನ ಹಾಗೂ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಿತರಾಗಿ: ಸ್ವಾತಂತ್ರ್ಯ ನಂತರ ಭಾರತದಲ್ಲಿ ಶೇ.17 ಅಕ್ಷರಸ್ಥರು ಇದ್ದರು. ಈಗ ಶೇ.83 ವಿದ್ಯಾವಂತರಿದ್ದಾರೆ. ಉಳಿಕೆ ಶೇ.17ರಷ್ಟು ಮಂದಿ ಹಿಂದುಳಿದ ವರ್ಗದವರೇ ಆಗಿದ್ದಾರೆ. ಎಲ್ಲರೂ ಶಿಕ್ಷಿತರಾಗಬೇಕಿದೆ. ನಮ್ಮ ರಾಜ್ಯದಲ್ಲಿ ಆರು ಕೋಟಿ ಜನಸಂಖ್ಯೆ ಇದೆ. ರಾಜ್ಯದಲ್ಲಿ ಆರು ಲಕ್ಷ ಸರ್ಕಾರಿ ಉದ್ಯೋಗವಿದೆ. ಶಿಕ್ಷಣ ಪಡೆದವರಿಗೆಲ್ಲಾ ಸರ್ಕಾರ ಉದ್ಯೋಗ ನೀಡಲು ಸಾಧ್ಯವಿಲ್ಲ. ಸರ್ಕಾರ ಉದ್ಯೋಗ ಸಿಗಲೆಂದು ಓದುವುದಲ್ಲ. ಮತ್ತೂಬ್ಬರು ನಮಗೆ ಮೋಸ ಮಾಡದಿರಲಿ, ಸವಾರಿ ಮಾಡ ದಿರಲಿ, ನಾವು ತುಳತಕ್ಕೊಳಗಾಗದಿರಲು ನಾವು ವಿದ್ಯಾವಂತರಾಗಬೇಕು ಎಂದು ತಿಳಿಸಿದರು.
ಪರ್ಯಾಯ ಮಾರ್ಗ ಕಂಡುಕೊಳ್ಳಿ: ಯುವ ಸಮುದಾಯದ ವೃತ್ತಿ ಜೀವನ ಹಾಗೂ ಸಮುದಾಯ ಅಭಿವೃದ್ಧಿಗೆ ಆಯಾ ಸಮಾಜವೇ ಬೆನ್ನೆಲುಬು. ಬದಲಾದ ಜೀವನ ಶೈಲಿ ಹಾಗೂ ತಂತ್ರಜ್ಞಾನದಿಂದ ಕುಲ ಕಸುಬುಗಳು ಕಣ್ಮರೆಯಾಗುತ್ತಿವೆ. ಇದೇ ಹಾದಿಯಲ್ಲಿ ಗಾಣಿಗ ಸಮುದಾಯ ತಾಂತ್ರಿಕತೆಯಿಂದ ಎಣ್ಣೆ ಉತ್ಪಾದಿಸುವುದು ತೆರೆಮರೆಗೆ ಸರಿಯುತ್ತಿದೆ. ಇದಕ್ಕೆ ಪಯಾರ್ಯ ಮಾರ್ಗ ಸೃಷ್ಟಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಹಾಗೆಯೇ ಅಭಿವೃದ್ಧಿ ಹೊಂದಿರುವವರು, ಸಾಧಕ ಗಾಣಿಗರ ನಾಯಕರು ತಮ್ಮ ಸಮುದಾಯ ಅಭಿವೃದ್ಧಿಗೆ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಶಿಕ್ಷಣಕ್ಕೆ ಒತ್ತು: ಅಧಿಕಾರಿಗಳು ತಮ್ಮ ನಿವೃತ್ತಿ ನಂತರ ನೆಮ್ಮದಿ ಬಾಳಿಗಾಗಿ ಸಮಾಜದಿಂದ ದೂರು ಉಳಿಯುತ್ತಾರೆ. ಆದರೆ ನಿಮ್ಮ ಸಮುದಾಯದ ನಿವೃತ್ತ ಕೆಎಎಸ್ ಅಧಿಕಾರಿ ನಾಗರಾಜ ಶೆಟ್ಟಿ ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಶ್ಲಾಘಿಸಿದರು.
ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಡಾ. ಕೆ.ವಿಜಯಕುಮಾರ್, ಮಾಜಿ ಎಂಎಲ್ಸಿ ಪುಟ್ಟಸಿದ್ದಶೆಟ್ಟಿ, ಬಿಎಂಎಸ್ ಅಕಾಡೆಮಿ ನಿರ್ದೇಶಕ ಡಾ. ಮಧುಸೂದನ್, ಮಾಜಿ ಮೇಯರ್ ಅನಂತು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಆರ್‌ಜೆ ಸುನೀಲ್, ಗಾಣಿಗ ಸಮುದಾಯದ ಮುಖಂಡರಾದ ಡಾ. ಪ್ರಸನ್ನ, ಆದರ್ಶ, ಗಂಗಾಧರ್, ಆನಂದ ಅಶೋಕ್, ಅರವಿಂದ ಮತ್ತಿತರರು ಉಪಸ್ಥಿತರಿದ್ದರು.