Advertisement

ಭರವಸೆ ತುಂಬುವಂತೆ ಮಾತು ಮುತ್ತು

12:42 AM May 19, 2021 | Team Udayavani |

ಮಾತು ಬಹಳ ಶಕ್ತಿಶಾಲಿಯಾದ ಸಾಧನ. ಮಾತಿನಿಂದ ಕೊಲ್ಲಬಹುದು, ಬದುಕಿಸಲೂ ಬಹುದು. ಹತಾಶೆ, ನೈರಾಶ್ಯ ಭಾವಗಳಿಂದ ಇನ್ನೇನು ಪ್ರಪಂಚವೇ ಮುಳುಗಿ ಹೋಯಿತು ಎಂಬ ಸ್ಥಿತಿಯಲ್ಲಿ ಇರುವವನನ್ನು ಆಶಾವಾದದ, ಧೈರ್ಯ ತುಂಬುವ ಮಾತುಗಳಿಂದ ಚೇತರಿಸಿಕೊಳ್ಳುವಂತೆ ಮಾಡಬಹುದು. ಈಗಿನ ವಿಷಮ ಪರಿಸ್ಥಿತಿಯಲ್ಲಂತೂ ಸಕಾರಾತ್ಮಕವಾದ, ಭರವಸೆ ತುಂಬುವ ಒಂದೊಂದು ಮಾತು ಕೂಡ ಮುತ್ತಿನಂತೆ.

Advertisement

ಇಲ್ಲೊಂದು ಕಥೆ ಯಿದೆ. ನಾವು ಮಾತು ಗಳನ್ನು ಯಾವುದೇ ಸಂದರ್ಭದಲ್ಲಿಯೂ ಹೇಗೆ ಅಳೆದು, ತೂಗಿ ಆಡಬೇಕು ಎಂಬುದನ್ನು ಇದು ಸೂಚ್ಯವಾಗಿ ಹೇಳುತ್ತದೆ. ಇಂತಹ ಸಂದರ್ಭಗಳು ನಾವು ಪ್ರತೀ ನಿತ್ಯ ಎದುರಿಸುವಂಥವು. ಮಾತು ಆಡುವ ಮುನ್ನ ನೂರು ಬಾರಿ ಯೋಚಿಸಬೇಕು ಎನ್ನುವುದಾಗಿ ನಮ್ಮ ಹಿರಿಯರು ಹೇಳುತ್ತಿದ್ದರು. ಅದಕ್ಕೂ ಕಾರಣ ಮಾತು ಎಂಬುದು ಪ್ರಬಲ ಸಾಧನ ಎನ್ನುವುದು.

ಒಂದು ಹಳ್ಳಿಯಲ್ಲೊಬ್ಬ ಪುಟ್ಟ ಹುಡುಗ ಇದ್ದ. ಎಂಟು ವರ್ಷ ವಯಸ್ಸು ಅವನಿಗೆ. ಮಹಾ ತಂಟೆಕೋರನಾತ. ದಿನ ಬೆಳಗಾದರೆ ಎಲ್ಲೆಲ್ಲೋ ಹೋಗಿ ಆಟವಾಡುವುದು, ಸದಾ ಸುತ್ತಾಡುತ್ತ ಇರುವುದು ಅವನ ದಿನಚರಿ. ಸಾಹಸದ ಆಟಗಳನ್ನು ಆಡುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಎತ್ತರೆತ್ತರದ ಮರಗಳನ್ನು ಏರಿ ಜೋಕಾಲಿ ಆಡುತ್ತಿದ್ದ. ಕೊಂಬೆಗಳಲ್ಲಿ ತಲೆಕೆಳಗಾಗಿ ತೂಗಾಡುತ್ತಿದ್ದ. ಅಮ್ಮ ಅಪ್ಪ ಎಷ್ಟು ಬಾರಿ ತಿಳಿಹೇಳಿದರೂ ಕೇಳದ ಪೋರ.

ಅವನಿಗೊಬ್ಬ ಅಕ್ಕ ಇದ್ದಳು. ಅವಳಿಗೆ ಹನ್ನೆರಡು ವರ್ಷ ಪ್ರಾಯ. ತಮ್ಮನೊಂದಿಗೆ ಅವಳೂ ಆಡಿಕೊಳ್ಳುವುದಿತ್ತು. ಆದರೆ ಅಣ್ಣನಂತೆ ಪೋಕರಿ ಅವಳಲ್ಲ.

ಒಂದು ಬಾರಿ ತಮ್ಮ ಒಂದು ಎತ್ತರದ ಮರವನ್ನೇರಿ ತಲೆಕೆಳಗಾಗಿ ತೂಗಾಡುತ್ತಿದ್ದ. ತಗ್ಗಿದ ಒಂದು ಕೊಂಬೆಯಲ್ಲಿ ಅಕ್ಕನೂ ಜೀಕುತ್ತಿದ್ದಳು. ಅಷ್ಟರಲ್ಲಿ ಅಪ್ಪ ಮತ್ತು ಅಮ್ಮ ಅತ್ತಲಾಗಿ ಬಂದರು. ಅವರು ಬರುವುದೂ ಬಲವಾದ ಒಂದು ಗಾಳಿ ಬೀಸುವುದೂ ಏಕಕಾಲದಲ್ಲಾಯಿತು.

Advertisement

“ಬಿಗಿಯಾಗಿ ಹಿಡಿದುಕೊಳ್ಳೋ ಪೋಕ್ರೀ’ ಎಂದು ಅಪ್ಪ ಕೂಗಿದರು. “ಅಯ್ಯೋ ಬೀಳುತ್ತೀ ಹುಡುಗೀ’ ಎಂದು ಅಮ್ಮ ಕಿರುಚಿದರು.
ಗಾಳಿ ಬೀಸಿ ಹೋಯಿತು. ತಮ್ಮ ಎತ್ತರದ ಕೊಂಬೆಯನ್ನು ಬಲವಾಗಿ ಹಿಡಿದು ಕೊಂಡು ಬಚಾವಾದ. ಅಕ್ಕ ಮಾತ್ರ ಕೆಳಗೆ ಬಿದ್ದಳು. ಅವಳು ಹೆಚ್ಚು ಎತ್ತರಕ್ಕೆ ಏರಿರಲಿಲ್ಲವಾದ ಕಾರಣ ಅಪಾಯ ಉಂಟಾಗಲಿಲ್ಲ.

ಇದು ಮಾತಿನ ಶಕ್ತಿ. ಅಪ್ಪ ಕೂಗಿ ಹೇಳಿದ್ದು ರಕ್ಷಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂದಾಗಿತ್ತು. ಗಾಳಿ ಬೀಸುವ, ಎಲೆಗಳು ಅಲ್ಲಾಡುವ ಸದ್ದನ್ನು ಅದಾಗಲೇ ಕೇಳಿದ್ದ ತಮ್ಮನಿಗೆ ಮುಂದೆ ಏನು ಮಾಡಬೇಕು ಎಂಬುದನ್ನು ಅಪ್ಪನ ಕೂಗು ಕ್ಷಣಮಾತ್ರದಲ್ಲಿ ಸ್ಪಷ್ಟವಾಗಿ ತಿಳಿಸಿಕೊಟ್ಟಿತ್ತು. ಆತ ಕೊಂಬೆಯನ್ನು ಬಿಗಿ ಯಾಗಿ ಹಿಡಿದುಕೊಂಡ, ಬಚಾವಾದ.

ಆದರೆ ಅಮ್ಮ ಕೂಗಿದ್ದು ಬಿಗಿಯಾಗಿ ಹಿಡಿದುಕೊಳ್ಳದಿದ್ದರೆ ಏನಾಗುತ್ತದೆ ಎಂಬ ಅಪಾಯದ ಚಿತ್ರಣವನ್ನು ಅಕ್ಕನ ಮನಸ್ಸಿಗೆ ತಿಳಿಸುವಂಥದ್ದು; ಏನು ಮಾಡಬೇಕು ಎಂಬುದನ್ನಲ್ಲ. ಅದು ಆಕೆಯ ಮನಸ್ಸನ್ನು ಇನ್ನಷ್ಟು ಗೊಂದಲಕ್ಕೆ ಕೆಡವಿ ಆಗಬಾರದ್ದು ಆಗುವಂತೆ ಮಾಡಿತು.

ಇದು ಒಂದು ಉದಾಹರಣೆ ಮಾತ್ರ. ಜೀವನದ ಪ್ರತೀ ಸಂದರ್ಭದಲ್ಲಿಯೂ ನಮ್ಮ ಪ್ರತೀ ಮಾತು ಕೂಡ ಎದುರಿನವನಲ್ಲಿ ಭರವಸೆ, ಉತ್ಸಾಹ, ಜೀವನೋಲ್ಲಾಸ ತುಂಬುವಂತಿರಬೇಕು. ಹೆದರಿದವನ ಮೇಲೆ ಕಪ್ಪೆ ಎಸೆಯುವಂತಹ ಮಾತು ಎಂದಿಗೂ ಸಲ್ಲದು. ಮುಂದೆ ಏನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ, ಧನಾತ್ಮಕವಾಗಿ ತಿಳಿಸಿಕೊಡುವ ಮಾತುಗಳು ಕೇಳುಗನಿಗೂ ಹಿತ, ಆಡುವ ನಮಗೂ ಶ್ರೇಷ್ಠ.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next