Advertisement

ಮದ್ದಲೆ ಮಾಂತ್ರಿಕನ ನೆನಪಿಗೊಂದು ಟ್ರಸ್ಟ್‌ 

06:00 AM Mar 30, 2018 | Team Udayavani |

 ಬಡಗುತಿಟ್ಟಿನ ಯಕ್ಷರಂಗದಲ್ಲಿ ಹಿಮ್ಮೇಳ ವಾದನಕ್ಕೊಂದು ಘನತೆ – ಗೌರವದೊಂದಿಗೆ ತಾರಾಮೌಲ್ಯವನ್ನು ತಂದುಕೊಡುವ ಮೂಲಕ ಭಾಗವತಿಕೆಯನ್ನು ಆಕರ್ಷಣೀಯಗೊಳಿಸಿ, ತನ್ಮೂಲಕ ಪ್ರೇಕ್ಷಕರನ್ನು ಸೆಳೆದಿಟ್ಟುಕೊಂಡು ಆಟದ ಸ್ವಾದ ಹೆಚ್ಚಿಸಿ, ರಂಗಕ್ಕೆ ತನ್ನ ಆಗಮನವನ್ನೇ ಯಕ್ಷ ಪ್ರೇಕ್ಷಕರು ಎದುರುನೋಡುವಂತಹ ಕ್ರಾಂತಿಯನ್ನುಂಟುಮಾಡಿದವರು ಮದ್ದಲೆ ಮಾಂತ್ರಿಕ ಕೀರ್ತಿಶೇಷ ದುರ್ಗಪ್ಪ ಗುಡಿಗಾರರು. 60-70ರ ದಶಕದಲ್ಲಿ ಕಡತೋಕ – ಉಪ್ಪೂರರಿಗೆ, 70-80ರ ದಶಕದಲ್ಲಿ ಕಾಳಿಂಗ ನಾವುಡ – ಧಾರೇಶ್ವರ ಹಾಗೂ 80ರ ದಶಕದ ನಂತರ 2007ರವರೆಗೆ ಸುದೀರ್ಘಾವಧಿಗೆ ಸುಬ್ರಹ್ಮಣ್ಯ ಧಾರೇಶ್ವರರೊಂದಿಗೆ ಪೆರ್ಡೂರು ಮೇಳದಲ್ಲಿ ಹಿಮ್ಮೇಳ ಜುಗಲ್‌ಬಂದಿ ನಡೆಸುವ ಮೂಲಕ “ಭಲೇ ಜೋಡಿ’ಯಾಗಿ ಯಕ್ಷ ರಸಿಕರಿಗೆ ಹಿಮ್ಮೇಳದ ರಸದೌತಣವನ್ನು ಉಣಬಡಿಸಿದ ಕೀರ್ತಿ ದುರ್ಗಪ್ಪ ಗುಡಿಗಾರರದ್ದಾಗಿದೆ. ತನ್ನದೇ ಘರಾನ ಪ್ರಾಪ್ತಿಸಿದ ಈ ಮೇರು ಕಲಾವಿದನ ಹೆಸರನ್ನು ಶಾಶ್ವತವಾಗಿಸುವ ಕಾರ್ಯವೊಂದು ಇದೀಗ ನಡೆಯುತ್ತಿದೆ. ಮದ್ದಲೆ ಮಾಂತ್ರಿಕ ದುರ್ಗಪ್ಪ ಗುಡಿಗಾರರ ಹೆಸರಿನಲ್ಲಿ ಟ್ರಸ್ಟ್‌ ಒಂದನ್ನು ಸ್ಥಾಪಿಸುವಲ್ಲಿ ಅವರ ಕುಟುಂಬದವರು, ಅಭಿಮಾನಿ ಬಳಗ ಹಾಗೂ ವೈ. ಕರುಣಾಕರ ಶೆಟ್ಟಿಯವರ ನಿರ್ಧಾರದ ಫ‌ಲವಾಗಿ ಶ್ರೀ ದುರ್ಗಪ್ಪ ಗುಡಿಗಾರ ಮೆಮೋರಿಯಲ್‌ ಯಕ್ಷಗಾನ ಆರ್ಟ್ಸ್ ಅಕಾಡೆಮಿ ಚಾರಿಟೇಬಲ ಟ್ರಸ್ಟ್‌ (ರಿ.) ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ. ಮಾ.31ರಂದು ಸಂಜೆ 5 ಗಂಟೆಗೆ ಭಟ್ಕಳದ ಶ್ರೀ ನಾಗಯಕ್ಷಿ ಸಭಾಭವನದಲ್ಲಿ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.ತನ್ನ ವೃತಿ ¤ಜೀವನದುದ್ದಕ್ಕೂ ಎಲ್ಲಾ ವೈರುಧ್ಯಗಳನ್ನು ಮೆಟ್ಟಿನಿಂತು ಯಕ್ಷರಸಿಕರ ಮನತಣಿಸಿದ ದುರ್ಗಪ್ಪಣ್ಣನ ಕಲಾಸೇವೆಗೆ ಪ್ರತಿಯಾಗಿ ಅವರ ಹೆಸರಿನಲ್ಲಿ ಸ್ಥಾಪನೆಯಾಗುತ್ತಿರುವ ಈ ಟ್ರಸ್ಟ್‌ಗೆ ಯಕ್ಷಪ್ರಿಯರ ಹಾಗೂ ದಿ. ದುರ್ಗಪ್ಪ ಗುಡಿಗಾರರ ಅಭಿಮಾನಿಗಳ ತುಂಬು ಹೃದಯದ ಸಹಕಾರ ಅಗತ್ಯ.

Advertisement

ಮೋಹನ್‌ ಪೆರ್ಡೂರು

Advertisement

Udayavani is now on Telegram. Click here to join our channel and stay updated with the latest news.

Next