Advertisement

ಇನ್ನು ಜನರ ವಿಶ್ವಾಸ ಗೆಲ್ಲಿ

03:17 AM Jul 30, 2019 | Team Udayavani |

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಮೂಲಕ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೊದಲ ಅಡಚಣೆಯನ್ನು ಯಶಸ್ವಿಯಾಗಿ ದಾಟಿದೆ. ಸ್ಪೀಕರ್‌ ರಮೇಶ್‌ ಕುಮಾರ್‌ 14 ಅತೃಪ್ತ ಶಾಸಕ ರನ್ನು ಅನರ್ಹಗೊಳಿಸಿ ಕೈಗೊಂಡ ಐತಿಹಾಸಿಕ ನಿರ್ಧಾರದಿಂದಾಗಿ ಬಿಜೆಪಿಗೆ ವಿಶ್ವಾಸಮತ ಯಾಚನೆಯಲ್ಲಿ ಯಾವ ಸಮಸ್ಯೆಯೂ ಎದುರಾಗಲಿಲ್ಲ. ಈ ಮೂಲಕ ಯಡಿಯೂರಪ್ಪನವರು ನಾಲ್ಕನೇ ಸಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದಕ್ಕೆ ಶಾಸಕಾಂಗದ ಒಪ್ಪಿಗೆಯ ಮುದ್ರೆ ಬಿದ್ದಂತಾಗಿದೆ.ಅನರ್ಹಗೊಂಡಿರುವ ಶಾಸಕರ ಭವಿಷ್ಯವನ್ನು ಇನ್ನು ನ್ಯಾಯಾಂಗ ನಿರ್ಧರಿಸಲಿದೆ. ನ್ಯಾಯಾಲಯ ಸ್ಪೀಕರ್‌ ತೀರ್ಪನ್ನು ಎತ್ತಿ ಹಿಡಿದರೂ ಅಥವಾ ರಾಜೀನಾಮೆ ಅಂಗೀಕಾರವಾದರೂ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದು ಅನಿವಾರ್ಯ. ಆದರೆ ಈ ಪ್ರಕ್ರಿಯೆ ನಡೆಸಲು ಆರು ತಿಂಗಳ ಕಾಲಾವಕಾಶ ಇರುವುದರಿಂದ ಅಷ್ಟರತನಕ ಯಡಿಯೂಪ್ಪನವರ ಸರ್ಕಾರಕ್ಕೆ ಯಾವುದೇ ಕಂಟಕ ಎದುರಾಗಲಿಕ್ಕಿಲ್ಲ.

Advertisement

ಹಾಗೆಂದು ಇದು ಬಿಜೆಪಿಯ ಪರಿಶುದ್ಧ ಗೆಲುವು ಎನ್ನಲು ಸಾಧ್ಯವಿಲ್ಲ. 224 ಸಂಖ್ಯಾಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 113 ಸ್ಥಾನಗಳು ಬೇಕು. 105 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಕನಿಷ್ಠ 8 ಸ್ಥಾನಗಳನ್ನು ಸಂಪಾದಿಸಲೇ ಬೇಕಾದ ಅನಿವಾರ್ಯತೆ ಇದೆ. ಈಗಿರುವುದು ಕೃತಕವಾಗಿ ಲಭ್ಯವಾದ ಬಹುಮತ. ಹೇಗೆ ತಿಪ್ಪರಲಾಗ ಹಾಕಿದರೂ 113 ಸಂಖ್ಯೆಯನ್ನು ತಲುಪುವುದು ಸಾಧ್ಯವಿಲ್ಲ ಎಂದು ಸ್ಪಷ್ಟವಾದ ಬಳಿಕ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲವನ್ನೇ ಕುಗ್ಗಿಸಿ ಪಡೆದ ಬಹುಮತದ ಆಧಾರದಲ್ಲಿ ಸರಕಾರ ರಚಿಸಲಾಗಿದೆ. ‘ಮ್ಯಾಜಿಕ್‌ ನಂಬರ್‌’ ಹೊಂದಲು ಬಿಜೆಪಿ ನಾಯಕರು ಯಾವ ರಣತಂತ್ರ ರೂಪಿಸಲಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಸದ್ಯಕ್ಕೆ ವಿಶ್ವಾಸಮತ ಗೆದ್ದಿರುವುದರಿಂದ ಆರು ತಿಂಗಳ ಮಟ್ಟಿಗೆ ಸುಸೂತ್ರವಾಗಿ ಆಡಳಿತ ನಡೆಸಬಹುದು.

ಸದ್ಯಕ್ಕೆ ವಿಶ್ವಾಸಮತವೇನೋ ಸಿಕ್ಕಿದಂತಾಯಿತು. ಇನ್ನು ಮಾಡಬೇಕಾಗಿ ರುವುದು ಜನರ ವಿಶ್ವಾಸ ಗೆಲ್ಲುವ ಕೆಲಸ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ನಡೆಯುತ್ತಿದ್ದ ರಾಜಕೀಯ ಸರ್ಕಸ್‌ನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜೊತೆಗೆ ಬಿಜೆಪಿಯ ವರ್ಚಸ್ಸಿಗೂ ಸಾಕಷ್ಟು ಹಾನಿ ಯಾಗಿದೆ. ಒಟ್ಟಾರೆಯಾಗಿ ಜನರಿಗೆ ರಾಜಕೀಯ ಎಂದರೆ ವಾಕರಿಕೆ ಬರುವಂ ತಾಗಿದೆ. ರಾಜಕಾರಣಿಗಳು ಅಧಿಕಾರಕ್ಕಾಗಿ ಎಷ್ಟು ಕೀಳುಮಟ್ಟಕ್ಕಿಳಿಯಬಹುದು ಎಂಬುದನ್ನು ಈ ರಾಜಕೀಯ ಪ್ರಹಸನ ತೋರಿಸಿಕೊಟ್ಟಿದೆ.

ಒಂದೆಡೆ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧಗೊಂಡಿದ್ದರೆ ಇನ್ನೊಂದೆಡೆ ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರ ಉಳಿಸಿಕೊಳ್ಳುವ ಮತ್ತು ಅಧಿಕಾರದಿಂದ ಉರುಳಿಸುವ ಕುತಂತ್ರಗಳು ಎಗ್ಗಿಲ್ಲದೆ ಸಾಗುತ್ತಿದ್ದವು. ಇದನ್ನೆಲ್ಲ ನೋಡಿದ ಬಳಿಕವೂ ರಾಜಕೀಯ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಉಳಿಸಿಕೊಂ ಡಿದ್ದಾರೆ ಎಂದರೆ ಅದು ರಾಜಕಾರಣಿಗಳ ಮೇಲಿನ ನಂಬಿಕೆಯಲ್ಲ ಬದಲಾಗಿ ಪ್ರಜಾತಂತ್ರದ ಮೇಲಿರುವ ನಂಬಿಕೆ. ಈ ನಂಬಿಕೆಗೆ ಚ್ಯುತಿಯಾಗದಂಥ ಆಡಳಿತವನ್ನು ನೀಡುವ ಹೊಣೆಗಾರಿಕೆ ಈಗ ಬಿಜೆಪಿ ಮೇಲಿದೆ.

ಹೀಗೆ ಸುಸೂತ್ರ ಆಡಳಿತ ನೀಡುವ ಹಾದಿಯಲ್ಲಿ ಯಡಿಯೂರಪ್ಪನವರು ಹಲವು ಅಡ್ಡಿ ಆತಂಕಗಳನ್ನು ಎದುರಿಸಬೇಕಾಗಬಹುದು. ಸಚಿವ ಸಂಪುಟ ರಚನೆಯೇ ತಲೆನೋವಾಗುವ ಸಾಧ್ಯತೆ ಇಲ್ಲದಿಲ್ಲ. ಸುಮಾರು ಆರೂವರೆ ವರ್ಷದಿಂದ ಆಡಳಿತವಂಚಿತವಾಗಿರುವ ಬಿಜೆಪಿಯಲ್ಲಿ ಅನೇಕ ಪದವಿ ಆಕಾಂಕ್ಷಿಗಳಿದ್ದಾರೆ. ಅಂತೆಯೇ ಸರ್ಕಾರ ರಚನೆಗೆ ನೆರವಾಗಿರುವ ಅತೃಪ್ತರನ್ನು ಕೂಡಾ ತೃಪ್ತಿಪಡಿಸಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುವುದು ಯಡಿಯೂರಪ್ಪನಂಥ ಅನುಭವಿ ರಾಜಕಾರಣಿಗೆ ಕಷ್ಟವಾಗದು ಎನ್ನುವುದು ನಿರೀಕ್ಷೆ.

Advertisement

ಬರವೂ ಸೇರಿದಂತೆ ರಾಜ್ಯವನ್ನು ಕಾಡುತ್ತಿರುವ ಹಲವು ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದರೆ ಸರಕಾರದ ಮೇಲೆ ಜನರಿಗೆ ಒಂದಿಷ್ಟಾದರೂ ವಿಶ್ವಾಸ ಕುದುರೀತು. ಸುಮಾರು ಎರಡು ದಶಕಗಳ ಬಳಿಕ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಅಧಿಕಾರದಲ್ಲಿರುವ ಸುಯೋಗವೊಂದು ಸೃಷ್ಟಿಯಾಗಿದೆ. ಈ ಅವಕಾಶವನ್ನು ಮಹದಾಯಿ, ಕಾವೇರಿ ಸೇರಿದಂತೆ ದಶಕಗಳಿಂದ ಕಾಡುತ್ತಿರುವ ಹಲವು ರಾಷ್ಟ್ರೀಯ ನೆಲೆಯ ಸಮಸ್ಯೆಗಳನ್ನು ಬಗೆಹರಿಸಲು ಬಳಸಿಕೊಳ್ಳಬಹುದು. ಅದೇ ರೀತಿ ಕೇಂದ್ರದ ಅನುದಾನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಂದು ರಾಜ್ಯವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದರೆ ಇಷ್ಟೆಲ್ಲ ಕಸರತ್ತು ನಡೆಸಿ ಸರಕಾರ ರಚಿಸಿದ್ದು ಸಾರ್ಥಕವಾಗಬಹುದು.

ಇದು ಸಾಧ್ಯವಾಗಬೇಕಾದರೆ ಮುಖ್ಯಮಂತ್ರಿ ತನ್ನ ಸುತ್ತ ದಕ್ಷವಾದ ಪಡೆಯೊಂದನ್ನು ಕಟ್ಟಿಕೊಳ್ಳಬೇಕು. ದಾರಿ ತಪ್ಪಿಸುವ, ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಬಹುಪರಾಕ್‌ ಹೇಳುವವರನ್ನು ಆದಷ್ಟು ದೂರ ಇಟ್ಟು, ಸಮರ್ಥರೂ, ಪ್ರಾಮಾಣಿಕರೂ ಆಗಿರುವವರನ್ನು ಅವರ ಸಾಮರ್ಥ್ಯ ಗುರುತಿಸಿ ಸರಿಯಾದ ಅಧಿಕಾರಗಳನ್ನು ಕೊಡಬೇಕು. ಅಧಿಕಾರದಲ್ಲಿರುವಾಗ ತುಸುವೇ ಎಡವಿದರೂ ಅದರ ಪರಿಣಾಮ ಎಷ್ಟು ಘೋರವಾಗಿರುತ್ತದೆ ಎನ್ನುವುದನ್ನು ಯಡಿಯೂರಪ್ಪ ನವರು ಈಗಾಗಲೇ ಅನುಭವಿಸಿ ತಿಳಿದುಕೊಂಡಿದ್ದಾರೆ. ಹೀಗಾಗಿ ಮುಂದಿನ ಅವರ ನಡೆ ಎಚ್ಚರಿಕೆಯಿಂದಲೂ, ವಿವೇಚನೆಯಿಂದಲೂ ಕೂಡಿರುತ್ತದೆ ಎನ್ನುವ ನಿರೀಕ್ಷೆ ನಾಡಿನ ಜನರದ್ದು.

Advertisement

Udayavani is now on Telegram. Click here to join our channel and stay updated with the latest news.

Next