ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಮೇಲೆ ನಂಬಿಕೆ ಇಡಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಮುಂಬೈ ಪೊಲೀಸರು ಸಮರ್ಥರಿದ್ದಾರೆ ಎಂದು ಠಾಕ್ರೆ ವಿಶ್ವಾಸವ್ಯಕ್ತಪಡಿಸಿದ್ದಾರೆ. ಸುಶಾಂತ್ ಪ್ರಕರಣದ ತನಿಖೆಯಲ್ಲಿ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದು, ಇದಕ್ಕೆ ಸಿಎಂ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈ ಪೊಲೀಸರು ಕೋವಿಡ್ 19 ವಿರುದ್ಧ ಹೋರಾಡುತ್ತಿದ್ದಾರೆ. ಅವರು ಕೋವಿಡ್ ವಾರಿಯರ್ಸ್. ಇಂತಹ ಸಂದರ್ಭದಲ್ಲಿ ನೀವು ಅವರ ಮೇಲೆ ವಿಶ್ವಾಸ ಇಡದಿದ್ದರೆ ಅವರನ್ನು ಅವಮಾನಿಸಿದಂತಾಗುತ್ತದೆ ಎಂದು ಠಾಕ್ರೆ ತಿಳಿಸಿದ್ದಾರೆ.
ರಜಪೂತ್ ಅವರ ಅಭಿಮಾನಿಗಳಿಗೆ ನಾನು ಹೇಳುವುದೇನೆಂದರೆ ನೀವು ಮುಂಬೈ ಪೊಲೀಸರನ್ನು ನಂಬಿ ಮತ್ತು ನಿಮ್ಮಲ್ಲಿ ಏನೇ ಮಾಹಿತಿ ಇರಲಿ ಅದನ್ನು ಕೊಡಿ. ಒಂದು ವೇಳೆ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದಿದ್ದರೆ ನೀವು ಟೀಕಿಸಬಹುದು ಎಂದು ಸಿಎಂ ಠಾಕ್ರೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.