ಹುಬ್ಬಳ್ಳಿ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಾಮನೂರ ಶಿವಶಂಕರಪ್ಪ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಅಖೀಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಖಂಡಿಸಿದೆ.
ವೀರಶೈವ ಹಾಗೂ ಲಿಂಗಾಯತ ಸಮಾಜವನ್ನು ಒಡೆಯಲು ಬಸವಜಯ ಮೃತ್ಯುಂಜಯ ಸ್ವಾಮಿಗಳಿಗೆ ಸಚಿವರೊಬ್ಬರು 56 ಲಕ್ಷ ರೂ. ಹಾಗೂ ಕಾರು ನೀಡಿದ್ದಾರೆ ಎಂದು ಶಾಮನೂರ ಶಿವಶಂಕರಪ್ಪ ಹೇಳುವ ಮೂಲಕ ಪಂಚಮಸಾಲಿ ಪೀಠದ ಸ್ವಾಮಿಗಳಿಗೆ ಅವಮಾನ ಮಾಡಿದ್ದಾರೆ.
ಸ್ವಾಮೀಜಿಗಳು ಪೀಠಾಧಿಪತಿಯಾದ ದಿನದಿಂದ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳು ಮಹದಾಯಿ ಸೇರಿದಂತೆ ಹಲವಾರು ಜನಪರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಅಂಥವರ ಬಗ್ಗೆ ಮಾಜಿ ಸಚಿವರು ಸುಳ್ಳು ಆಪಾದನೆ ಮಾಡುತ್ತಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಸ್ವತಂತ್ರ ಲಿಂಗಾಯತ ಧರ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಅವರು ಮಾಡಿದ ಆರೋಪವನ್ನು ತಕ್ಷಣವೇ ಸಾಬೀತು ಮಾಡಬೇಕು. ಆರೋಪ ಸಾಬೀತಾದರೆ ನಾವು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಿಂದ ಹಿಂದೆ ಸರಿಯುವಂತೆ ಶ್ರೀಗಳಿಗೆ ಆಗ್ರಹಿಸುತ್ತೇವೆ.
ಇಲ್ಲದಿದ್ದರೆ ಶಿವಶಂಕರಪ್ಪ ಶ್ರೀಗಳ ಕ್ಷಮೆ ಯಾಚಿಸಿ ಹೇಳಿಕೆ ಹಿಂದಕ್ಕೆ ಪಡೆಯಬೇಕೆಂದು ಟ್ರಸ್ಟ್‌ನ ಸಹ ಕಾರ್ಯದರ್ಶಿ ನಂದಕುಮಾರ ಪಾಟೀಲ, ಮುಖಂಡರಾದ ಕುಮಾರ ಕುಂದನಹಳ್ಳಿ, ನಾಗರಾಜ ಗೌರಿ, ವಿಕಾಸ ಸೊಪ್ಪಿನ, ಗಿರೀಶ ಸುಂಕದ, ಬಸವರಾಜ ಕಿತ್ತೂರ, ಮೈಲಾರಿ ಧಾರವಾಡ ಒತ್ತಾಯಿಸಿದ್ದಾರೆ.