Advertisement

Vivek Ramaswamy ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವಿವೇಕ ರಂಗು

11:49 PM Aug 21, 2023 | Team Udayavani |

ಪ್ರತೀ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆದಾಗಲೂ ಅಲ್ಲೊಂದು ಭಾರತದ ನಂಟು ಇದ್ದೇ ಇರುತ್ತದೆ. ಈ ಬಾರಿಯೂ, ಅಂದರೆ 2024ರ ಚುನಾವಣೆಗೂ ಭಾರತದ ನಂಟು ಜೋರಾಗಿಯೇ ಇದೆ. ರಿಪಬ್ಲಿಕನ್‌ ಪಕ್ಷದ ವಿವೇಕ್‌ ರಾಮಸ್ವಾಮಿ, ಅಧ್ಯಕ್ಷೀಯ ಚುನಾವಣ ರೇಸ್‌ನಲ್ಲಿದ್ದು, ಟ್ರಂಪ್‌ ಅನಂತರದ ಸ್ಥಾನದಲ್ಲಿದ್ದಾರೆ. ಯಾರಿವರು ವಿವೇಕ್‌ ರಾಮಸ್ವಾಮಿ? ದಿಢೀರ್‌ ಆಗಿ ಎರಡನೇ ಸ್ಥಾನಕ್ಕೇರಲು ಕಾರಣವೇನು? ಇಲ್ಲಿದೆ ಮಾಹಿತಿ…

Advertisement

ಯಾರಿವರು ವಿವೇಕ್‌ ರಾಮಸ್ವಾಮಿ?
ಇತ್ತೀಚಿನವರೆಗೂ ವಿವೇಕ್‌ ರಾಮಸ್ವಾಮಿ ಅಂಥ ದೊಡ್ಡ ಸುದ್ದಿಯಲ್ಲಿ ಏನಿರಲಿಲ್ಲ. ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ರೇಸ್‌ನಲ್ಲಿ ಇದ್ದವರ ಪೈಕಿ ಎಲ್ಲರಲ್ಲಿ ಒಬ್ಬರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರ ಭಾಷಣ, ಇವರ ನೀತಿಗಳು ರಿಪಬ್ಲಿಕನ್‌ ಪಕ್ಷದ ಸದಸ್ಯರಿಗೆ ಹಿಡಿಸುತ್ತಿವೆ. ಹೀಗಾಗಿ ದಿಢೀರನೇ ಟ್ರಂಪ್‌ ಆನಂತರದ ಸ್ಥಾನಕ್ಕೆ ರಾಮಸ್ವಾಮಿ ಏರಿದ್ದಾರೆ. ಸದ್ಯ ವಿವೇಕ್‌ ರಾಮಸ್ವಾಮಿ ಮತ್ತು ಡಿಸೆಂಟಿಸ್‌ ಎಂಬವರು ತಲಾ ಶೇ. 10ರಷ್ಟು ಬೆಂಬಲದೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಶೇ. 56ರಷ್ಟು ಬೆಂಬಲದೊಂದಿಗೆ ಮೊದಲ ಸ್ಥಾನದಲ್ಲಿ ಡೊನಾಲ್ಡ್‌ ಟ್ರಂಪ್‌ ಇದ್ದಾರೆ.

ಅಂದ ಹಾಗೆ ವಿವೇಕ್‌ ರಾಮಸ್ವಾಮಿ, 38 ವರ್ಷದ ಯುವ ಉದ್ಯಮಿ. ಭಾರತೀಯ ಮೂಲದ ದಂಪತಿಗೆ ಓಹಿಯೋದಲ್ಲಿ ರಾಮಸ್ವಾಮಿ ಜನನ. ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಬಯೋಲಜಿ ವಿಷಯದಲ್ಲಿ ಪದವಿ ಪಡೆದು, ಬಳಿಕ ಯಾಲೆ ವಿವಿಯಲ್ಲಿ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ.  ಬಯೋಟೆಕ್‌ ಕಂಪೆನಿ ಶುರು ಮಾಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ರಾಮಸ್ವಾಮಿ, ಇದರಲ್ಲಿ ಗೆದ್ದಿದ್ದಾರೆ. ವೋಕ್‌ ಎಂಬ ಪುಸ್ತಕ ಬರೆದಿರುವ ಇವರು, ದಿಢೀರನೇ ಅಮೆರಿಕ ಜನರಲ್ಲಿ ಮನೆಮಾತಾಗಿದ್ದಾರೆ.

ಜಗತ್ತಿನ ಸಿರಿವಂತ ಉದ್ಯಮಿಯ ಬೆಂಬಲ
ವಿಶೇಷವೆಂದರೆ, ವಿವೇಕ್‌ ರಾಮಸ್ವಾಮಿಗೆ ಜಗತ್ತಿನ ಅತ್ಯಂತ ಶ್ರೀಮಂತ ಎಲಾನ್‌ ಮಸ್ಕ್ ಅವರ ಬೆಂಬಲ ಸಿಕ್ಕಿದೆ. ಇತ್ತೀಚೆಗಷ್ಟೇ ಅವರದ್ದೇ ವೇದಿಕೆ ಎಕ್ಸ್‌  ಅಥವಾ ಟ್ವಿಟರ್‌ನಲ್ಲಿ ರಾಮಸ್ವಾಮಿಗೆ ಬೆಂಬಲ ಸೂಚಿಸಿದ್ದರು. ಇವರು ಅತ್ಯಂತ ಉತ್ತಮ ಅಭ್ಯರ್ಥಿಯಾಗಿದ್ದಾರೆ ಎಂದೂ ಹೇಳಿದ್ದರು.

ಟ್ರಂಪ್‌ಗೆ ಸವಾಲಾಗುವರೇ?
ಸದ್ಯಕ್ಕೆ ಈ ವಿಚಾರದಲ್ಲಿ ಏನೂ ಹೇಳಲು ಆಗುವುದಿಲ್ಲ. ಆದರೆ ವಿವೇಕ್‌ ರಾಮಸ್ವಾಮಿ ಅವರ ಬಗ್ಗೆ ರಿಪಬ್ಲಿಕನ್‌ ಪಕ್ಷದಲ್ಲಿ ಒಂದು ರೀತಿಯ ಸಹಾನುಭೂತಿ ಇದೆ ಎಂಬುದು ಇತ್ತೀಚಿನ ದಿನಗಳಲ್ಲಿ ಗೊತ್ತಾಗುತ್ತಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

Advertisement

ಇದೆಲ್ಲದಕ್ಕಿಂತ ಹೆಚ್ಚಿನದಾಗಿ, ಶೇ. 56ರಷ್ಟು ರಿಪಬ್ಲಿಕನ್ನರ ಬೆಂಬಲ ಪಡೆದಿರುವ ಟ್ರಂಪ್‌ಗೆ ವಿವೇಕ್‌ ರಾಮಸ್ವಾಮಿ ಸವಾಲಾಗಬಲ್ಲರೇ ಎಂಬ ಚರ್ಚೆಗಳು ಶುರುವಾಗಿವೆ. ಈ ಬಗ್ಗೆ ಈಗಲೇ ಚರ್ಚೆ ಸರಿಯಲ್ಲ. ಮುಂದೆ ಏನು ಬೇಕಾದರೂ ಆಗಬಹುದು ಎಂದು ಅಲ್ಲಿನ ಚುನಾವಣಾ ತಜ್ಞರು ಹೇಳುತ್ತಾರೆ. ಟ್ರಂಪ್‌ ಅವರು ಸ್ಪರ್ಧಿಸಿದಾಗಲೂ ಹೀಗೆಯೇ ಇತ್ತು. ಉಳಿದವರನ್ನು ಸೋಲಿಸಿ, ಟ್ರಂಪ್‌ ಮುನ್ನುಗ್ಗಿದ್ದರು. ಅದೇ ರೀತಿ ಈ ಬಾರಿಯೂ ಆಗಬಹುದು. ಚುನಾವಣೆ ಹತ್ತಿರಕ್ಕೆ ಬಂದ ಹಾಗೆ ಗೊತ್ತಾಗುತ್ತದೆ ಎಂದು ಹೇಳುತ್ತಾರೆ.

ಅಲ್ಲದೆ, ಸದ್ಯ ಟ್ರಂಪ್‌ ಬಹಳಷ್ಟು ಕಾನೂನಾತ್ಮಕ ತೊಂದರೆಯಲ್ಲಿದ್ದಾರೆ. ಒಂದು ವೇಳೆ, ಇವರು ಕಾನೂನಿನ ಕುಣಿಕೆಯೊಳಗೆ ಸಿಲುಕಿಬಿಟ್ಟರೆ ರಾಮಸ್ವಾಮಿ ಅವರಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರಗಳೂ ಇವೆ. ಹೀಗಾಗಿಯೇ ವಿವೇಕ್‌ ರಾಮಸ್ವಾಮಿ ಅವರ ಬಗ್ಗೆ ಈಗ ಹೆಚ್ಚಿನ ಮಟ್ಟದಲ್ಲೇ ಚರ್ಚೆಯಾಗುತ್ತಿದೆ.

ಅಧ್ಯಕ್ಷೀಯ ರೇಸ್‌ನಲ್ಲಿರುವ ಭಾರತೀಯರು
ವಿವೇಕ್‌ ರಾಮಸ್ವಾಮಿ ಅವರೊಬ್ಬರೇ ಅಲ್ಲ, ಇನ್ನೂ ಹಲವಾರು ಮಂದಿ ಅಧ್ಯಕ್ಷೀಯ ಚುನಾವಣಾ ರೇಸ್‌ನಲ್ಲಿ ಇದ್ದಾರೆ. ಅವರುಗಳೆಂದರೆ,

ನಿಕ್ಕಿ ಹಾಲೆ
ಸೌತ್‌ ಕೆರೋಲಿನಾದ ಮಾಜಿ ಗವರ್ನರ್‌ ಆಗಿರುವ ನಿಕ್ಕಿ ಹಾಲೆ, ರಿಪಬ್ಲಿಕನ್‌ ಪಕ್ಷದಲ್ಲಿರುವ ಏಕೈಕ ಮಹಿಳಾ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆ ಆಕಾಂಕ್ಷಿ. ಇವರು ಟ್ರಂಪ್‌ ಸರ್ಕಾರದಲ್ಲಿ ಪ್ರಮುಖ ಸದಸ್ಯಯಾಗಿದ್ದರು. ಹಾಗೆಯೇ, ವಿಶ್ವಸಂಸ್ಥೆಯಲ್ಲೂ ರಾಯಭಾರಿಯಾಗಿದ್ದರು. ಇತ್ತೀಚಿಗೆ ನಡೆದಿರುವ ಬಹುತೇಕ ಪೋಲ್‌ಗಳಲ್ಲಿ ನಿಕ್ಕಿ ಹಾಲೆಯವರು ಬೇಕಾದ ಮತ ಗಳಿಸಿಕೊಳ್ಳುವಲ್ಲಿ ವಿಫ‌ಲರಾಗುತ್ತಿದ್ದಾರೆ.

ಹರ್ಷವರ್ಧನ್‌ ಸಿಂಗ್‌
ಡೊನಾಲ್ಡ್‌ ಟ್ರಂಪ್‌ ಅವರ ಅಧಿಕಾರವಧಿಯನ್ನು ಹೊಗಳುತ್ತಲೇ ರಿಪಬ್ಲಿಕ್‌ ಪಕ್ಷದಿಂದ ಅಭ್ಯರ್ಥಿಯಾಗಲು ಹೊರಟಿದ್ದಾರೆ ಹರ್ಷವರ್ಧನ ಸಿಂಗ್‌. ತಮ್ಮನ್ನು ಜೀವಿತಾವಧಿ ರಿಪಬ್ಲಿಕನ್‌ ಎಂದು ಕರೆದುಕೊಂಡಿದ್ದು, ಅಮೆರಿಕ ಮೊದಲು ಎಂಬ ಸ್ಲೋಗನ್‌ ಬಳಕೆ ಮಾಡುತ್ತಿದ್ದಾರೆ. ಹರ್ಷವರ್ಧನ್‌ ಮೂಲತಃ ಏರೋನಾಟಿಕಲ್‌ ಎಂಜಿನಿಯರ್‌. ತಮ್ಮ ಕುಟುಂಬದವರೇ ನಡೆಸುತ್ತಿರುವ ಕಂಪನಿಯ ಹೊಣೆ ಹೊತ್ತಿದ್ದಾರೆ.

ರಾಮಸ್ವಾಮಿ ನಿಲುವುಗಳೇನು?
1 ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಅಮೆರಿಕ ಮುಂದಾಗಬೇಕು. ಅಂದರೆ, 2028ರ ವೇಳೆಗೆ ಇಸ್ರೇಲ್‌ಗೆ ಅಮೆರಿಕ ನೀಡುತ್ತಿರುವ ನೆರವನ್ನು ನಿಲ್ಲಿಸಬೇಕು.

2ಉಕ್ರೇನ್‌ ಯುದ್ಧ ಈ ಕೂಡಲೇ ಕೊನೆಗೊಳ್ಳಬೇಕು. ರಷ್ಯಾ ಡಾನ್‌ಬಾಸ್‌ ಪ್ರದೇಶದಿಂದ ಹೊರಹೋಗಬೇಕು. ಉಕ್ರೇನ್‌ ನ್ಯಾಟೋದಲ್ಲಿ ಸೇರ್ಪಡೆಯಾಗುವ ಇಚ್ಚೆಯನ್ನು ಬಿಡಬೇಕು. ಮಿಲಿಟರಿ ಬೆಂಬಲ ನೀಡಲು ಕಾಯುತ್ತಿರುವ ಚೀನದೊಂದಿಗೆ ಪುಟಿನ್‌, ಸಂಬಂಧ ಕಡಿದುಕೊಳ್ಳಬೇಕು.

3ನಾನು ಹಿಂದೂಧರ್ಮವನ್ನು ಪಾಲನೆ ಮಾಡುತ್ತಿದ್ದೇನೆ. ಹಾಗೆಯೇ, ಕ್ರೈಸ್ತ ಧರ್ಮದಲ್ಲೂ ಇದೇ ರೀತಿಯ ಮೌಲ್ಯಗಳಿವೆ ಎಂಬುದನ್ನು ನಂಬಿದ್ದೇನೆ. ಅಮೆರಿಕದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ. ನಾನೊಬ್ಬ ಹಿಂದೂ, ನಾನು ಕ್ರೈಸ್ತನಲ್ಲ. ಈ ದೇಶ ಅರೆ ಕ್ರೈಸ್ತ ನಂಬಿಕೆಯ ಮೇಲೆ ಹುಟ್ಟಿದೆ ಎಂಬುದನ್ನು ನಂಬಿದ್ದೇನೆ.

4ಫಾಕ್ಸ್‌ ನ್ಯೂಸ್‌ನಲ್ಲಿ ರಾಮಸ್ವಾಮಿ ಆಗಾಗ್ಗೆ ಕಾಣಿಸಿಕೊಂಡು ತಮ್ಮ ಸಿದ್ಧಾಂತದ ಬಗ್ಗೆ ಪ್ರತಿಪಾದನೆ ಮಾಡುತ್ತಾರೆ. ಮುಕ್ತ ಗಡಿ ಬಗ್ಗೆ  ನಂಬಿಕೆ ಇಲ್ಲ ಎಂದೇ ಹೇಳಿದ್ದಾರೆ.

5 ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿವೇಕ್‌ ರಾಮಸ್ವಾಮಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇವರೊಬ್ಬ ಅಭೂತಪೂರ್ವ ನಾಯಕ ಎಂದಿರುವ ವಿವೇಕ್‌, ಅಮೆರಿಕದಲ್ಲೂ ರಾಷ್ಟ್ರೀಯವಾದ ಬೆಂಬಲಿಸುವ ಇಂಥದ್ದೇ ನಾಯಕ ಇರಬೇಕು ಎಂದಿದ್ದಾರೆ.

6 ಎಫ್ಬಿಐ, ಶಿಕ್ಷಣ ಇಲಾಖೆ, ಎಟಿಎಫ್, ನ್ಯೂಕ್ಲಿಯರ್‌ ರೆಗ್ಯುಲೆಟರಿ ಕಮಿಷನ್‌, ಐಆರ್‌ಎಸ್‌, ವಾಣಿಜ್ಯ ವಿಭಾಗಗಳು ಬೇಕಾಗಿಲ್ಲವಂತೆ. ಇದಕ್ಕೆ ಬದಲಾಗಿ, ಪ್ರಾದೇಶಿಕ ನೀತಿಯನ್ನು ಜಾರಿಗೆ ತಂದು ಅಲ್ಲಿಗೆ ಇವುಗಳನ್ನು ತೆಗೆದುಕೊಂಡು ಹೋಗಬಹುದು. ಈ ಮೂಲಕ ಆರ್ಥಿಕತೆಯನ್ನು ಮೇಲೆತ್ತಬಹುದು ಎಂದು ಹೇಳುತ್ತಾರೆ ರಾಮಸ್ವಾಮಿ. ಇದಕ್ಕೆ ಬದಲಾಗಿ ಯುಎಸ್‌ ಮಾರ್ಷಲ್ಸ್‌ ಸರ್ವೀಸ್‌ ಅನ್ನು ಎಲ್ಲೆಡೆ ವಿಸ್ತರಿಸುವ ಬಗ್ಗೆ ಚಿಂತನೆ.

Advertisement

Udayavani is now on Telegram. Click here to join our channel and stay updated with the latest news.

Next