ಬೆಳ್ತಂಗಡಿ/ಸುಬ್ರಹ್ಮಣ್ಯ/ ಉಡುಪಿ: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಬದಲಾಗಿ ಟ್ರಂಪ್ ನೇತೃತ್ವದಲ್ಲಿ ತನಿಖೆ ನಡೆಸಿದರೂ ಎದುರಿಸುವುದಕ್ಕೆ ಸಿದ್ಧನಿದ್ದೇನೆ. ಯಾರಿಂದಲೂ ನನ್ನ ಇಮೇಜ್ ಹಾಳು ಮಾಡಲು ಸಾಧ್ಯವಿಲ್ಲ. ನನ್ನ ಅವಧಿಯ ಜತೆಗೆ ಬಿಎಸ್‌ವೈ, ಸಿದ್ದರಾಮಯ್ಯ ಅವರ ಅಧಿಕಾರಾವಧಿಯ ಕದ್ದಾಲಿಕೆಯ ಕುರಿತೂ ತನಿಖೆ ನಡೆಯಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸವಾಲೆಸೆದರು.
ಸೂಟ್ಕೇಸ್ ವ್ಯಾಪಾರವೂ ತನಿಖೆಯಾಗಲಿ
ದೇವೇಗೌಡ ಕುಟುಂಬವನ್ನು ಯಾವ ತನಿಖೆಯಿಂದಲೂ ಕುಗ್ಗಿಸಲು ಸಾಧ್ಯವಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮೇರೆಗೆ ಪ್ರಕರಣವನ್ನು ಸಿಎಂ ಯಡಿಯೂರಪ್ಪ ಸಿಬಿಐಗೆ ಒಪ್ಪಿಸಿದ್ದಾರೆ. ನಮ್ಮ ಸರಕಾರ ಉರುಳಿಸುವಾಗ ಸೂಟ್ಕೇಸ್ ವ್ಯಾಪಾರ ನಡೆದಿರುವುದನ್ನೂ ಸಿಬಿಐಗೆ ಒಪ್ಪಿಸಲು ಸಿದ್ದರಾಮಯ್ಯ ಸಲಹೆ ನೀಡಿದ್ದಾರಂತೆ. ಇದನ್ನೂ ಸಿಬಿಐಗೆ ಕೊಡಲಿ ಎಂದು ಸವಾಲೆಸೆದರು.
ಸಮಗ್ರ ಪ್ರವಾಸ
Advertisement
ಅವರು ರವಿವಾರ ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಸಚಿವ ಸಾ.ರಾ. ರಮೇಶ್, ಶಾಸಕ ಎಚ್.ಎಲ್. ಭೋಜೇಗೌಡ ಉಪಸ್ಥಿತರಿದ್ದರು.
Related Articles
Advertisement
ಮುಖ್ಯಮಂತ್ರಿಗಳು ರಾಜ್ಯದ ಪ್ರತಿ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿ ಪಡೆಯದೆ ಅನುದಾನ ಬಿಡುಗಡೆ ಘೋಷಿಸಿದ್ದಾರೆ. ಹೀಗಾಗಿ ತಾನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸೂಕ್ತ ಪರಿಹಾರಕ್ಕೆ ಸರಕಾರವನ್ನು ಒತ್ತಾಯಿಸಲಿದ್ದೇನೆ ಎಂದರು.
ಮಂತ್ರಿಮಂಡಲ ರಚನೆಯ ವಿಚಾರದಲ್ಲಿ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ಉದ್ಭವಿಸು ತ್ತದೋ ಇಲ್ಲವೋ ಎನ್ನುವ ಬಗ್ಗೆ ಚರ್ಚೆಗೆ ಒತ್ತು ನೀಡುವುದಿಲ್ಲ. ಬದಲಾಗಿ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನರಿಗಾಗಿ ಉತ್ತಮವಾಗಿ ಕೆಲಸ ಮಾಡಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದರು.
ಜನ ಕಂಗಾಲು
ರಾಜ್ಯದಲ್ಲಿ ನೆರೆ ಮತ್ತು ಪ್ರವಾಹವಿದೆ. ಜನತೆ ಸಂಕಷ್ಟಕ್ಕೀಡಾಗಿದ್ದಾರೆ.ಈ ಕ್ಲಿಷ್ಟ ಪರಿಸ್ಥಿತಿ ಇದ್ದರೂ ಜನರ ಕಷ್ಟ ಕೇಳಲು ಸರಕಾರದಲ್ಲಿ ವ್ಯವಸ್ಥೆ ಇಲ್ಲದಿರುವುದು ಶೋಚನೀಯ. ಸಂತ್ರಸ್ತರು ಹೊಸ ಜೀವನ ನಡೆಸಲು ಬೇಕಾದ ನೆರವು ನೀಡಲು ಸರಕಾರ ಮುಂದೆ ಬರಬೇಕು. ಇಂತಹ ಸಂಕಷ್ಟ ಪರಿಸ್ಥಿತಿ ಬಳಸಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲರೂ ಸೇರಿ ಸ್ಪಂದಿಸಬೇಕಿದೆ ಎಂದರು.
ಉಪಚುನಾವಣೆ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಯಾಗಿ ಸ್ಪರ್ಧಿಸುವ ಬಗ್ಗೆ ಹಿರಿಯರು ತೀರ್ಮಾನಿಸುತ್ತಾರೆ. ಸರಕಾರ ವಿಸರ್ಜನೆಯಾಗಿ 224 ಕ್ಷೇತ್ರಕ್ಕೂ ಚುನಾವಣೆ ನಡೆದರೂ ಅಚ್ಚರಿಯಿಲ್ಲ ಎಂದರು.
ಹಿಂದೆ ಧರ್ಮಸ್ಥಳದಲ್ಲಿ ನೀರಿನ ಅಭಾವ ಎದುರಾದಾಗ ಡಾ| ಹೆಗ್ಗಡೆ ಅವರ ಮನವಿಯ ಮೇರೆಗೆ ಡ್ಯಾಂ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿದ್ದೇನೆ ಎಂದರು.
ವಿವಿಧ ದೇಗುಲಗಳಿ ಭೇಟಿ
ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶ ಭೇಟಿಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ; ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟನೆಗಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಸುಬ್ರಹ್ಮಣ್ಯದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಪ್ರಮುಖರಾದ ಜಾಕೆ ಮಾಧವ ಗೌಡ, ಕೇನ್ಯ ರವಿಂದ್ರನಾಥ ಶೆಟ್ಟಿ, ಸೋಮಸುಂದರ ಕೂಜುಗೋಡು, ಸುಬ್ರಹ್ಮಣ್ಯ ದೇಗುಲದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲು, ಉಡುಪಿಯಲ್ಲಿ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ, ಜಯಕುಮಾರ ಪರ್ಕಳ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರದ ಅನುದಾನ ಏನು?
ಹಿಂದೆ ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಯುಪಿಎ ಸರಕಾರವು ತತ್‌ಕ್ಷಣ ಒಂದು ಸಾವಿರ ಕೋ.ರೂ.ಗಳ ನೆರವು ನೀಡಿತ್ತು. ಆದರೆ ಪ್ರಸ್ತುತ ಕೇಂದ್ರದಲ್ಲೂ ಬಿಜೆಪಿ ಸರಕಾರವಿದ್ದರೂ ಯಾವುದೇ ಪರಿಹಾರದ ಮೊತ್ತ ಬಿಡುಗಡೆಯಾಗಿಲ್ಲ ಎಂದರು.
ಸಿಎಂ ಪುತ್ರನಿಂದ ವರ್ಗಾವಣೆ ದಂಧೆ
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 25 ದಿವಸಗಳಾದರೂ ಮಂತ್ರಿಮಂಡಲ ರಚನೆಯಾಗದೆ ಜನತೆಗೆ ತೊಂದರೆಯಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಸರಕಾರದಿಂದ ದೊರಕಬೇಕಾದ ಯಾವುದೇ ಸವಲತ್ತು ದೊರಕುತ್ತಿಲ್ಲ. ಅನುದಾನಗಳ ಬಿಡುಗಡೆಯಾಗದೆ ಜನರು ಕಂಗಟ್ಟಿದ್ದಾರೆ. ಏತನ್ಮಧ್ಯೆ ಯಡಿಯೂರಪ್ಪನವರ ಮಗ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.