ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಭಿನ್ನ ಆಡಳಿತ ವೈಖರಿ ಮೂಲಕ ಶತಕ ದಿನ ಪೂರೈಸಿದ್ದಾರೆ. ಆದರೆ, ಈ ಹಿನ್ನೆಲೆಯಲ್ಲಿ ವಾರ್ಷಿಕವಾಗಿ ವೈಟ್‌ಹೌಸ್‌ನಲ್ಲಿ ಆಯೋಜಿಸಲಾಗುವ ಔತಣಕೂಟದಲ್ಲಿ ಟ್ರಂಪ್ ಪಾಲ್ಗೊಂಡಿಲ್ಲ. 30 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಪಾರ್ಟಿ ಅಧ್ಯಕ್ಷರಿಲ್ಲದೇ ನಡೆದಿದೆ. ಪತ್ರಕರ್ತರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
100 ದಿನ ಪೂರೈಸಿದ ಸಂಬಂಧ ಮಾತನಾಡಿರುವ ಟ್ರಂಪ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. “ತಮ್ಮ ವಿರುದ್ಧ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಈ ಮೂಲಕ ಜನರಲ್ಲಿ ನನ್ನ ಬಗ್ಗೆ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ’ ಎಂದು ದೂರಿದ್ದಾರೆ.
100 ದಿನದ ಆಡಳಿತ ಒಂದು ಸಾಧನೆ ಎಂದು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ಹಲವು ಉತ್ತಮ ವ್ಯಕ್ತಿತ್ವÌ ಇರುವವರೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ ಎಂದಿದ್ದಾರೆ.
ಔತಣಕೂಟದ ಬಗ್ಗೆ ವ್ಯಂಗ್ಯ: ಎಂದಿನಂತೆ ವೈಟ್‌ಹೌಸ್‌ನಲ್ಲಿ ಪತ್ರಕರ್ತರೂ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಔತಣಕೂಟ ಏರ್ಪಡಿಸಲಾಗಿದೆ. ಅಂತೆಯೇ ಪತ್ರಕರ್ತರು ಪಾಲ್ಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್ “ಅಧ್ಯಕ್ಷರೇ ಇಲ್ಲದೇ ವೈಟ್‌ಹೌಸ್‌ನಲ್ಲಿ ಔತಣಕೂಟ ನಡೆಸಲಾಗುತ್ತಿದೆ’ ಎಂದು ಲೇವಡಿ ಮಾಡಿದ್ದಾರೆ.
ಹಸನ್ ಮಿನ್ಹಾಜ್ ಕಾಮಿಡಿ
ವೈಟ್‌ಹೌಸ್‌ನಲ್ಲಿ ಆಯೋಜಿಸಲಾದ ಔತಣಕೂಟದ ವೇಳೆ ಭಾರತೀಯ ಮೂಲದ ಅಮೆರಿಕ ನಿವಾಸಿ ಹಸನ್ ಮಿನ್ಹಾಜ್ ಅವರು ತಮ್ಮ ಮಾತಿನ ಮೋಡಿಯಿಂದ ಕೆಲ ಸಮಯ ಜನರನ್ನು ರಂಜಿಸಿದರು. ವಾರ್ಷಿಕ ಔತಣಕೂಟದ ವೇಳೆ ಭಾರತೀಯನೊಬ್ಬ ಕಾರ್ಯಕ್ರಮ ನೀಡಿದ್ದು ಇದೇ ಮೊದಲು ಎನ್ನುವ ಬಿರುದಿಗೂ ಹಸನ್ ಭಾಜನರಾದರು.