Advertisement

ತಾರಕಕ್ಕೇರಿದ ಅಮೆರಿಕ-ಚೀನ ಟ್ರೇಡ್‌ ವಾರ್‌

09:20 AM Jun 20, 2018 | Team Udayavani |

ವಾಷಿಂಗ್ಟನ್‌/ಬೀಜಿಂಗ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ‘ಸ್ವರಕ್ಷಣಾತ್ಮಕ ವ್ಯಾಪಾರ ನೀತಿ’ಯ ಕಾರಣದಿಂದಾಗಿ ಇದೀಗ ಜಾಗತಿಕ ಮಟ್ಟದಲ್ಲಿ ಟ್ರೇಡ್‌ ವಾರ್‌ ತಾರಕಕ್ಕೇರಿದೆ. ಇತ್ತೀಚೆಗಷ್ಟೇ ಚೀನದ 3.41 ಲಕ್ಷ ಕೋಟಿ ರೂ. ನಷ್ಟು ಮೌಲ್ಯದ ವಸ್ತುಗಳ ಮೇಲೆ ತೆರಿಗೆ ಹಾಕಿದ್ದ ಟ್ರಂಪ್‌, ಮತ್ತೆ 13 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳಿಗೆ ತೆರಿಗೆ ಹೇರಿಕೆ ಮಾಡಲು ಮುಂದಾಗಿದ್ದಾರೆ. ಇದು ಚೀನದ ಕಣ್ಣು ಉರಿಗೆ ಕಾರಣವಾಗಿದ್ದು, ಅಮೆರಿಕ ಬ್ಲ್ಯಾಕ್‌ ಮೇಲ್‌ ಕುತಂತ್ರ ಅನುಸರಿಸುತ್ತಿದೆ ಎಂದು ಆರೋಪಿಸಿದೆ.

Advertisement

ಚೀನದ ಕೆಲವು ವ್ಯಾಪಾರ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಟ್ರಂಪ್‌, ಅಮೆರಿಕ ವ್ಯಾಪಾರ ಪ್ರತಿನಿಧಿ ರಾಬರ್ಟ್‌ ಲೈಟ್ಸರ್‌ಗೆ ಹೊಸ ತೆರಿಗೆ ಹೇರಿಕೆ ಮಾಡುವ ಸಂಬಂಧ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ. ಶೇ.10 ರಷ್ಟು ತೆರಿಗೆ ಏರಿಕೆ ಮಾಡುವಂತೆಯೂ ಹೇಳಿದ್ದಾರೆ. ಚೀನದ ಈ ನೀತಿಯಿಂದಾಗಿ ಅಮೆರಿಕಕ್ಕೆ ನಷ್ಟ ವಾಗುತ್ತಿದ್ದು, ಮತ್ತೆ 13 ಲಕ್ಷ ಕೋಟಿ ರೂ. ಮೊತ್ತದ ವಸ್ತುಗಳಿಗೆ ತೆರಿಗೆ ಹಾಕಿದರೆ ಮಾತ್ರ ಹೊಂದಾಣಿಕೆ ಬರಲಿದೆ ಎಂದಿದ್ದಾರೆ. ಈ ತೆರಿಗೆಯಿಂದ ತಪ್ಪಿಸಿಕೊಳ್ಳಬೇಕಾದರೆ, ಚೀನ ತನ್ನ ನಿಯಮಗಳನ್ನು ಮಾರ್ಪಾಡು ಮಾಡಿಕೊಳ್ಳಲೇಬೇಕು ಎಂದಿದ್ದಾರೆ.

ಚೀನ ತಿರುಗೇಟು
ಟ್ರಂಪ್‌ ಅವರ ಈ ಹೊಸ ಬೆದರಿಕೆ ಬಗ್ಗೆ ಆಕ್ರೋಶಗೊಂಡಿರುವ ಚೀನ, ಇದೊಂದು ಬ್ಲ್ಯಾಕ್‌ ಮೇಲ್‌ ಕುತಂತ್ರ ಎಂದು ಆರೋಪಿಸಿದೆ. ಒಂದು ವೇಳೆ ಈ ತೆರಿಗೆ ಹಾಕಿದ್ದೇ ಆದರೆ, ನಾವೂ ಅದೇ ರೀತಿ ತೆರಿಗೆ ಹೆರಿಕೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ. ಈಗಾಗಲೇ ಅಮೆರಿಕದ 3.41 ಲಕ್ಷ ಕೋಟಿ ರೂ. ಮೊತ್ತದ ತೆರಿಗೆ ಹೇರಿಕೆಗೆ ಪ್ರತಿಯಾಗಿ ಚೀನ, ಅಮೆರಿಕದ 659 ವಸ್ತುಗಳ ಮೇಲೆ ಅಷ್ಟೇ ಮೊತ್ತದ ತೆರಿಗೆ ಹಾಕುವ ಮೂಲಕ ತಿರುಗೇಟು ನೀಡಿತ್ತು.

ಚೀನ ಮೇಲೆ ಟ್ರಂಪ್‌ ಗೇಕೆ ಆಕ್ರೋಶ?
ಅಮೆರಿಕಕ್ಕೆ ಚೀನದಿಂದ ಅತಿ ಹೆಚ್ಚಿನ ವಸ್ತುಗಳು ಆಮದಾಗುತ್ತಿವೆ. ಫೆಬ್ರವರಿಯಲ್ಲಿ ವರದಿಯಾದಂತೆ ಅಮೆರಿಕ ಚೀನಕ್ಕಿಂತ ಹೆಚ್ಚು ವಿತ್ತೀಯ ಕೊರತೆ ಅನುಭವಿಸುತ್ತಿದೆ. ಅಮೆರಿಕದಿಂದ ಚೀನಾಗೆ ರಫ್ತಾಗುವ ವಸ್ತುಗಳಿಗಿಂತ, ಅಲ್ಲಿಂದ ಆಮದಾಗುವ ವಸ್ತುಗಳ ಸಂಖ್ಯೆಯೇ ಹೆಚ್ಚು.

ಏನಿದು ಟ್ಯಾರಿಫ್, ಟ್ರೇಡ್‌ ವಾರ್‌?
ಸರಳವಾಗಿ ಹೇಳುವುದಾದರೆ ಆಮದಾಗುವ ವಸ್ತುಗಳ ಮೇಲೆ ಹಾಕಲಾಗುವ ತೆರಿಗೆಯೇ ಟ್ಯಾರಿಫ್. ವಿದೇಶದಿಂದ ಬರುವ ವಸ್ತುಗಳ ಮೇಲೆ ಹೆಚ್ಚು ತೆರಿಗೆ ಹಾಕಿದಲ್ಲಿ ಅವುಗಳ ಬೆಲೆ ತನ್ನಿಂತಾನೇ ಹೆಚ್ಚಾಗುತ್ತದೆ. ಆಗ ಗ್ರಾಹಕರು ಈ ವಸ್ತು ಬಿಟ್ಟು ದೇಶೀ ವಸ್ತುಗಳ ಮೊರೆ ಹೋಗುತ್ತಾರೆ.

Advertisement

– ಕಳೆದ ವಾರ ತೆರಿಗೆ ಹೇರಲ್ಪಟ್ಟ ಚೀನದ ಸರಕುಗಳ ಮೌಲ್ಯ: ರೂ. 3.41 ಲಕ್ಷ ಕೋಟಿ 
– ಈಗ ತೆರಿಗೆ ಹಾಕಲು ಉದ್ದೇಶಿಸಲಾಗಿರುವ ಸರಕುಗಳ ಮೌಲ್ಯ : ರೂ. 13 ಲಕ್ಷ ಕೋಟಿ

ಪರಿಣಾಮಗಳೇನು?
– ಎರಡೂ ದೇಶಗಳ ಆರ್ಥಿಕತೆ ಮೇಲೆ ಅಡ್ಡ ಪರಿಣಾಮವುಂಟಾಗುತ್ತದೆ. ನಷ್ಟಕ್ಕೂ ಕಾರಣವಾಗಬಹುದು. 
– ವಿದೇಶದಿಂದ ರಫ್ತಾಗುವ ವಸ್ತುಗಳ ದರ ಏರಿಕೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next