ವಾಷಿಂಗ್ಟನ್: “ಅಮೆರಿಕಕ್ಕೆ ಮುಂದೆ ಉಗ್ರರಿಂದ ಏನಾದರೂ ಅಪಾಯವಾದರೆ, ಜಡ್ಜ್ಗಳನ್ನು ದೂಷಿಸಿ’ ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರಿಬಿಟ್ಟ ಟ್ವೀಟ್ ಕಿಡಿ. ವಲಸೆ ನೀತಿಗೆ ತಡೆಯಾಜ್ಞೆ ತೆರವು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ಯಾನ್‌ಫ್ರಾನ್ಸಿಸ್ಕೋ ಕೋರ್ಟಿನ ಜಡ್ಜ್ ಜೇಮ್ಸ್ ರಾಬರ್ಟ್ ಅವರು ತಿರಸ್ಕರಿಸಿದ್ದ ಬೆನ್ನಲ್ಲೇ ಟ್ರಂಪ್ ಆಕ್ರೋಶ ನ್ಯಾಯಾಂಗದ ಮೇಲೆ ತಿರುಗಿದೆ.
“ಅಮೆರಿಕವನ್ನು ಒಬ್ಬ ಜಡ್ಜ್ ಅಪಾಯಕ್ಕೆ ತಳ್ಳುತ್ತಾನೆಂದು ನಾನು ಖಂಡಿತಾ ಊಹಿಸಿರಲಿಲ್ಲ. ದೇಶದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ನ್ಯಾಯಾಂಗವನ್ನೇ ದೂಷಿಸಬೇಕು’ ಎಂದು ಟ್ರಂಪ್ ಟ್ವೀಟಿಸಿದ್ದಾರೆ. “ದೇಶಕ್ಕೆ ಆಗಮಿಸುವವರನ್ನು ಬಹಳ ಎಚ್ಚರಿಕೆಯಿಂದ ಪರೀಕ್ಷಿಸುವಂತೆ ಭದ್ರತಾ ಸಿಬಂದಿಗೆ ಸೂಚಿಸಿದ್ದೆ. ಆದರೆ, ಕೋರ್ಟ್ ಈಗ ನಮ್ಮ ಕೆಲಸವನ್ನು ಬಹಳ ಕಠಿಣವಾಗಿಸಿದೆ’ ಎಂದಿದ್ದಾರೆ.
ಸರಕಾರದ ನೀತಿಗಳಿಗೆ ತಡೆಯಾಜ್ಞೆ ನೀಡಬಾರದು ಎಂದು ಮನವಿ ಮಾಡಿದ್ದನ್ನು ತಿರಸ್ಕರಿಸಿದ ನ್ಯಾಯಾಧೀಶರ ವಿರುದ್ಧ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಬೇಸರ ಸೂಚಿಸಿದ್ದು, “ಜಡ್ಜ್ ತಪ್ಪು ತೀರ್ಪನ್ನು ನೀಡಿದ್ದಾರೆ. ಅಮೆರಿಕ ರಕ್ಷಿಸಲು, ಸರಕಾರ ನೀತಿಗೆ ತಡೆಯಾಗದಂತೆ ನೋಡಿಕೊಳ್ಳಲು ನಾವು ಎಲ್ಲ ರೀತಿಯಿಂದಲೂ ಯತ್ನಿಸುತ್ತೇವೆ’ ಎಂದಿದ್ದಾರೆ. ಆದರೆ, ವೈಟ್‌ಹೌಸ್‌ನ ಅಧಿಕಾರಿ ಒಬ್ಬರು, “ನ್ಯಾಯಾಧೀಶರ ವಿರುದ್ಧ ಟ್ರಂಪ್ ಹರಿಹಾಯ್ದಿದ್ದು ಸರಿಯಲ್ಲ’ ಎಂದು ಹೇಳಿದ್ದಾರೆ.
ಕೊಲೆಗಡುಕ ಪುಟಿನ್!: ಈ ಮಧ್ಯೆ ಟ್ರಂಪ್ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ಮುಂದುವರಿಸಿದ್ದು, “ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಬ್ಬ ಕೊಲೆಗಾರ’ ಎಂದು ಅರ್ಥೈಸಿದ್ದಾರೆ. “ಅಮೆರಿಕವನ್ನು ಅಷ್ಟು ಸುಲಭಕ್ಕೆ ಮುಗ್ಧ ರಾಷ್ಟ್ರ ಎಂದುಕೊಳ್ಳಬೇಡಿ. ನಾವು ಸಾಕಷ್ಟು ಕೊಲೆಗಾರರನ್ನು ಹೊಂದಿದ್ದೇವೆ. ನಂಬಿ, ನಮ್ಮ ಸುತ್ತ ಕೊಲೆಗಡುಕರಿದ್ದಾರೆ. ಪುಟಿನ್ ಅಂಥವರಲ್ಲೊಬ್ಬರು. ಇದರ ಹೊರತಾಗಿ ಅವರು ನಮ್ಮ ಸ್ನೇಹಿತರು. ಒಂದು ವೇಳೆ ರಷ್ಯಾ ಕೈಜೋಡಿಸಿದರೆ ಐಸಿಸ್ ಉಗ್ರರನ್ನು ಮಟ್ಟಹಾಕಬಹುದು. ವಿಶ್ವದಲ್ಲಿರುವ ಇಸ್ಲಾಮಿಕ್ ಉಗ್ರವಾದದ ಬೇರುಗಳನ್ನು ಕೀಳಬಹುದು’ ಎಂದಿದ್ದಾರೆ.
ಎಚ್1 ಬಿ ವೀಸಾದ ಬಗ್ಗೆ ಉಂಟಾಗಿರುವ ಗೊಂದಲಗಳ ಬಗ್ಗೆ ನಾಸ್ಕಾಂ ಸೇರಿದಂತೆ ಪ್ರಮುಖ ಕೈಗಾರಿಕಾ ಸಂಸ್ಥೆಗಳ ಜತೆಗೆ ಸಭೆ ನಡೆಸಲಿದ್ದೇವೆ. ಕೇಂದ್ರ ಸರಕಾರ ಅಮೆರಿಕ ಸರಕಾರದ ಪ್ರಸ್ತಾವಿತ ಮಸೂದೆಯ ಬಳಿಕದ ಪರಿಸ್ಥಿತಿ ಗಮನಿಸುತ್ತಿದೆ..
ನಿರ್ಮಲಾ ಸೀತಾರಾಮನ್, ಕೇಂದ್ರ ವಾಣಿಜ್ಯ ಸಚಿವೆ,