ವಾಷಿಂಗ್ಟನ್ ಡಿಸಿ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಸಾಮಾಜಿಕ ಜಾಲತಾಣ ಆರಂಭಿಸುತ್ತಿದ್ದಾರೆ. ಇದಕ್ಕೆ ಟ್ರುತ್ ಸೋಶಿಯಲ್ ಎಂದು ಹೆಸರಿಟ್ಟಿದ್ದಾರೆ. ಪ್ರಬಲ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ತನ್ನನ್ನು ಬ್ಯಾನ್ ಮಾಡಿದ ಬಳಿಕ ಡೊನಾಲ್ಡ್ ಟ್ರಂಪ್ ಮಹತ್ವದ ಹೆಜ್ಜೆಯಿರಿಸಿದ್ದಾರೆ.
ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಪ್ (ಟಿಎಂಟಿಜಿ) ಸಂಸ್ಥೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆರಂಭವಾಗಲಿದೆ. ಇದರೊಂದಿಗೆ ಮನರಂಜನೆ ಕಾರ್ಯಕ್ರಮಗಳನ್ನು ಒಳಗೊಂಡ ವಿಡಿಯೊ ವಿತರಣೆ ಸೇವೆ (ವಿಡಿಯೊ ಆನ್ ಡಿಮಾಂಡ್), ಸುದ್ದಿ ಹಾಗೂ ಪಾಡ್‌ಕಾಸ್ಟ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಟ್ರಂಪ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
‘ಬೃಹತ್ ಟೆಕ್ ಕಂಪನಿಗಳ ದಬ್ಬಾಳಿಕೆಗೆ ಎದುರಾಗಿ ನಾನು ಟ್ರುತ್ ಸೋಶಿಯಲ್ ಮತ್ತು ಟಿಎಂಟಿಜಿ ರೂಪಿಸಿದ್ದೇನೆ. ಟ್ವಿಟರ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ತಾಲಿಬಾನ್ ಇರುವಿಕೆ ಇದ್ದರೂ, ನಿಮ್ಮ ನೆಚ್ಚಿನ ಅಮೆರಿಕದ ಅಧ್ಯಕ್ಷರನ್ನು ಮೌನಗೊಳಿಸಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ:ಆಚಾರವಿರಲಿ ನಾಲಗೆಗೆ; ಎಲ್ಲೆ ಮೀರಿದ ಮಾತು, ಟ್ವೀಟ್
ಕ್ಯಾಪಿಟಲ್ ಹಿಲ್‌ನಲ್ಲಿ ಜನವರಿ 6ರಂದು ನಡೆದ ಹಿಂಸಾಚಾರದ ಬಳಿಕ ಫೇಸ್‌ಬುಕ್ ಮತ್ತು ಟ್ವಿಟರ್‌ನಿಂದ ಟ್ರಂಪ್ ಅವರ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಸಂಸತ್ ಭವನಕ್ಕೆ (ಕ್ಯಾಪಿಟಲ್) ನುಗ್ಗಿ ದಾಂದಲೆ ನಡೆಸಿದ್ದರು. ಸ್ಪೀಕರ್ ಕಚೇರಿಗೆ ನುಗ್ಗಿ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಪ್ರಮುಖ ಸಾಮಾಜಿಕ ಮಾಧ್ಯಮಗಳು ಟ್ರಂಪ್ ಅವರನ್ನು ನಿರ್ಬಂಧಿಸುತ್ತಿದ್ದಂತೆ, ತಮ್ಮದೇ ಸ್ವಂತ ಸಾಮಾಜಿಕ ಮಾಧ್ಯಮ ರೂಪಿಸುವುದಾಗಿ ಘೋಷಿಸಿದ್ದರು.