ಹತ್ರಾಸ್ (ಉತ್ತರ ಪ್ರದೇಶ): ವೇಗವಾಗಿ ಬಂದ ಟ್ರಕ್ಕೊಂದು ಕನ್ವರ್ ಯಾತ್ರಿಗಳ ಗುಂಪಿಗೆ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಕನ್ವರ್ ಭಕ್ತರು ಸಾವನ್ನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಬಧರ್ ಗ್ರಾಮದ ಬಳಿ ಶನಿವಾರ ನಡೆದಿದೆ.
ಕನ್ವರ್ ಯಾತ್ರಿಗಳು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಸೇರಿದವರು. ಈ ಯಾತ್ರಿಗಳ ಗುಂಪು ಹರಿದ್ವಾರದಿಂದ ಗ್ವಾಲಿಯರ್ ಗೆ ಹಿಂತಿರುಗುತ್ತಿತ್ತು.
ಶನಿವಾರ ಮುಂಜಾನೆ 2.15 ರ ಸುಮಾರಿಗೆ ರಾ.ಹೆದ್ದಾರಿ -93 ರ ಹತ್ರಾಸ್ ನ ಸದಾಬಾದ್ ಪಿಎಸ್‌ನಲ್ಲಿ ಈ ಘಟನೆ ನಡೆದಿದೆ. ಕನ್ವರ್ ಭಕ್ತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಾಳುವನ್ನು ಆಗ್ರಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಗಬ್ಬರ್ ಅಬ್ಬರ- ಸಿರಾಜ್ ಕೊನೆಯ ಓವರ್ ಥ್ರಿಲ್ಲರ್: ಗೆಲುವಿನ ಗಡಿಯಲ್ಲಿ ಸೋತ ವೆಸ್ಟ್ ಇಂಡೀಸ್
ಆಗ್ರಾ ವಲಯದ ಎಡಿಜಿ ರಾಜೀವ್ ಕೃಷ್ಣ ಮಾತನಾಡಿ, “ಇಂದು ಮುಂಜಾನೆ 2.15 ರ ಸುಮಾರಿಗೆ ಹತ್ರಾಸ್ ನ ಸದಾಬಾದ್ ಪಿಎಸ್ ನಲ್ಲಿ ಏಳು ಕನ್ವರ್ ಭಕ್ತರನ್ನು ಟ್ರಕ್‌ನಿಂದ ಹೊಡೆದು ಆರು ಮಂದಿ ಸಾವನ್ನಪ್ಪಿದ್ದಾರೆ, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ” ಎಂದು ಮಾಹಿತಿ ನೀಡಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ”ಘಟನೆಯ ತನಿಖೆ ನಡೆಯುತ್ತಿದೆ. ಚಾಲಕನ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು” ಎಂದು ರಾಜೀವ್ ಕೃಷ್ಣ ಹೇಳಿದ್ದಾರೆ.