ಶಿವಮೊಗ್ಗ: ಇಲ್ಲಿಗೆ ಸಮೀಪದ ಮುದ್ದಿನಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಬುಧವಾರ ರಾತ್ರಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಗೆ ಕಾರೊಂದು ಹಿಂದಿನಿಂದ ಬಂದು ಗುದ್ದಿದ ಪರಿಣಾಮ ಕಾರಿನಲಿದ್ದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ -ಸಾಗರ ರಸ್ತೆಯಲ್ಲಿ ನಗರದಿಂದ 12 ಕಿ. ಮೀ.ದೂರದ ತಾವರೆಕೊಪ್ಪ ಸಿಂಹಧಾಮದಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿ ಈ ಅಪಘಾತ ಸಂಭವಿಸಿದೆ. ನೀಲಗಿರಿ ಮರದ ತುಂಡುಗಳನ್ನು (ನಾಟಾ) ಸಾಗಿಸುತ್ತಿದ್ದ ಲಾರಿಗೆ ಅತೀ ವೇಗವಾಗಿ ಬಂದ ಇನ್ನೋವಾ ಕಾರು ಹಿಂದಿನಿಂದ ಢಿಕ್ಕಿ ಹೊಡೆಯಿತು.
ಬೆಂಗಳೂರಿನ ಜಾಲಹಳ್ಳಿ ನಿವಾಸಿ ಮಧು (25), ಆತನ ಸಹೋದರ ಪ್ರವೀಣ್‌ಕುಮಾರ್ (30), ಜಾಲಹಳ್ಳಿ ನಿವಾಸಿ, ಕಾರು ಚಾಲಕ ಶ್ರೀಧರ್ (25), ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹೆಸ್ರಿ ಗ್ರಾಮದ ರಾಜಶೇಖರ್ (28), ಸೊರಬ ತಾಲೂಕು ಇಂಡುವಳ್ಳಿ ಗ್ರಾಮದ ರಾಘವೇಂದ್ರ (26), ಮಂಡ್ಯ ಜಿಲ್ಲೆಯ ಮಲ್ಲೇಶ್ (40), ಶಿವಮೊಗ್ಗ ತಾಲೂಕು ಸನ್ನಿವಾಸ ಗ್ರಾಮದ ಮಂಜುನಾಥ್ (27) ಅಪಘಾತದಲ್ಲಿ ಮೃತಪಟ್ಟವರು.
ಸ್ನೇಹಿತನ ಮದುವೆಗೆ ಹೊರಟಿದ್ದರು: ಸಾಗರದಲ್ಲಿ ನಡೆಯಲಿದ್ದ ಸ್ನೇಹಿತನ ಮದುವೆಯಲ್ಲಿ ಭಾಗವಹಿಸುವ ಸಲುವಾಗಿ ಬುಧವಾರ ಬೆಂಗಳೂರಿನಿಂದ ಇವರೆಲ್ಲ ಪ್ರಯಾಣ ಬೆಳೆಸಿದ್ದರು. ಮುದ್ದಿನಕೊಪ್ಪ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ನೇರವಾಗಿ ಹಿಂಬದಿಯಿಂದ ಲಾರಿಗೆ ಅಪ್ಪಳಿಸಿತು. ಢಿಕ್ಕಿಯ ರಭಸಕ್ಕೆ ಲಾರಿಯಲ್ಲಿದ್ದ ನೀಲಗಿರಿ ಮರದ ದಿಮ್ಮಿಗಳು ಕಾರಿನೊಳಗೆ ನುಗ್ಗಿದವು. ಪರಿಣಾಮ ಎಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿಯಲ್ಲಿದ್ದ ಮರದ ದಿಮ್ಮಿಗಳು ಕಾರಿಗೆ ಬಡಿದು ಕಾರಿನಲ್ಲಿದ್ದವರ ದೇಹಗಳು ಗುರುತಿಸಲಾಗದಷ್ಟು ಛಿದ್ರವಾಗಿವೆ. ಜೆಸಿಬಿ ಬಳಸಿ ಮೃತದೇಹಗಳನ್ನು ಹೊರತೆಗೆಯಲಾಯಿತು. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಶಿವಮೊಗ್ಗದ ಸರಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು.