ಹೈದರಾಬಾದ್ : ತೆಲಂಗಾಣದ ಉಸ್ತುವಾರಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆಸ್ತಿಪಾಸ್ತಿ ಸರಿ ಸುಮಾರು 5.5 ಕೋಟಿ ರೂ. ಹೆಚ್ಚಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇವರು 16 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದಾರೆ. ಹಾಗಿದ್ದರೂ ಕೆಸಿಆರ್ ಬಳಿ ಓಡಾಟಕ್ಕೆ ಒಂದೇ ಒಂದು ಮೋಟಾರು ವಾಹನವೂ ಇಲ್ಲ !
ಹೀಗೆಂದು ಚಂದ್ರಶೇಖರ್ ರಾವ್ ಅವರು ಗಜವೇಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ತಮ್ಮ ಆಸ್ತಿಪಾಸ್ತಿ ವಿವರಕ್ಕೆ ಸಂಬಂಧಿಸಿದ ಅಫಿದಾವಿತ್‌ನಲ್ಲಿ ಘೋಷಿಸಿಕೊಂಡಿದ್ದಾರೆ.
2014ರಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಮಾಡಿದ್ದ ಅಫಿದಾವಿತ್ ಘೋಷಣೆ ಪ್ರಕಾರ ಚಂದ್ರಶೇಖರ ರಾವ್ ಅವರ ಒಟ್ಟು ಆಸ್ತಿಪಾಸ್ತಿ 15.95 ಕೋಟಿ ರೂ ಇತ್ತು. ಈಗ 2018ರಲ್ಲಿ ಅವರ ಒಟ್ಟು ಚರ ಮತ್ತು ಸ್ಥಿರಾಸ್ತಿಗಳ ಮೌಲ್ಯ 22.61 ಕೋಟಿ ರೂ. ಆಗಿದೆ.
ಆಸ್ತಿಪಾಸ್ತಿ ಹೆಚ್ಚಿದ ಹಾಗೆ ಚಂದ್ರಶೇಖರ್ ರಾವ್ ಅವರ ಸಾಲ ಬಾಧ್ಯತೆಗಳ ಪ್ರಮಾಣವೂ ಹೆಚ್ಚಾಗಿದೆ. 2014ರಲ್ಲಿ ಇವರಿಗೆ 7.87 ಕೋಟಿ ಬಾಧ್ಯತೆ ಇತ್ತು; ಈ ಬಾರಿ ಅದು 8.89 ಕೋಟಿ ರೂ. ಆಗಿದೆ. ಎಂದರೆ 1 ಕೋಟಿ ಮೀರಿ ಬಾಧ್ಯತೆ ಪ್ರಮಾಣ ಹೆಚ್ಚಾಗಿದೆ.
2014ರ ಮಹಾ ಚುನಾವಣೆ ಸಂದರ್ಭದಲ್ಲಿ ಚಂದ್ರ ಶೇಖರ್ ರಾವ್ ತಾವು 37.70 ಎಕರೆ ಕೃಷಿ ಭೂಮಿ ಹೊಂದಿದ್ದುದಾಗಿ ಘೋಷಿಸಿಕೊಂಡಿದ್ದರು. ಈ ಬಾರಿ ಅದು 54.24 ಎಕರೆಗೆ ಏರಿದೆ.
ರಾವ್ ಹೇಳುವ ಪ್ರಕಾರ ಅವರ ವಿರುದ್ಧ 64 ಕ್ರಿಮಿನಲ್ ಕೇಸುಗಳಿವೆ. ಆದರೆ ಇವೆಲ್ಲವೂ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಆಂದೋಲನಕ್ಕೆ ಸಂಬಂಧಿಸಿದ್ದಾಗಿವೆ. ಇವೆಲ್ಲವೂ ಈಗ ವಿಚಾರಣೆಯ ಬೇರೆ ಬೇರೆ ಹಂತದಲ್ಲಿವೆ.