ಬ್ರಹ್ಮಾವರ: ಮಲೆನಾಡು ಮತ್ತು ಕರಾವಳಿ ಭಾಗದ ರೈತರಿಗೆ, ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀವ್ರ ತೊಡಕಾಗಿದ್ದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಸರಕಾರವು ಬಗೆಹರಿಸಿದ್ದು, 6.60 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಹೊರತುಪಡಿಸಿ ಸರಕಾರಿ ಆದೇಶ ಹೊರಡಿಸಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.
ಶನಿವಾರ ನೀಲಾವರದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮತಿವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಂದರ್ಭ ಅವರು ಡೀಮ್ಡ್ ಫಾರೆಸ್ಟ್ ಕುರಿತ ಆದೇಶದ ಪ್ರತಿಯನ್ನು ಬಿಡುಗಡೆಗೊಳಿಸಿದರು.
ರಾಜ್ಯದಲ್ಲಿ ಈ ಹಿಂದೆ ಗುರುತಿಸ ಲಾಗಿದ್ದು, 9,94,881.11 ಹೆಕ್ಟೇರ್ ಡೀಮ್ಡ್ ಅರಣ್ಯ ಭೂಮಿಯಲ್ಲಿ 3.30 ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆ ವತಿಯಿಂದ ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ಡೀಮ್ಡ್ ಫಾರೆಸ್ಟ್ ಎಂದು ಸಚಿವ ಸಂಪುಟದ ಅನುಮೋ ದನೆಯೊಂದಿಗೆ ಸರ್ವೋಚ್ಚ ನ್ಯಾಯಾ ಲಯಕ್ಕೆ ಅಫಿದವಿತ್ ಸಲ್ಲಿಸಿದ್ದು, ಬಾಕಿ ಉಳಿದ 6.60 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ನೀಡಲಾಗುವುದು ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ತಜ್ಞರ ಸಮಿತಿಯ ಮೂಲಕ 9,94,881.11 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿತ್ತು. ತಜ್ಞರ ವರದಿಯಲ್ಲಿ ಶಾಸನ ಬದ್ಧ ಅರಣ್ಯಗಳನ್ನು ಡೀಮ್ಡ್ ಅರಣ್ಯಗಳೆಂದು ತಪ್ಪಾಗಿ ವರ್ಗೀಕರಿಸಿರುವುದರಿಂದ ಮತ್ತು ಯಾವುದೇ ಪೂರ್ವ ನಿರ್ಧರಿತ ಮಾನದಂಡಗಳನ್ನು ಅಳವಡಿಸದೇ ಗುರುತಿಸುವುದರಿಂದ ಈ ಪ್ರದೇಶಗಳನ್ನು ಮರು ಪರಿಶೀಲಿಸಲು ನಿರ್ಧರಿಸಿ, ಕಂದಾಯ ಮತ್ತು ಅರಣ್ಯಾಧಿ ಕಾರಿಗಳನ್ನು ಒಳಗೊಂಡ ಜಿಲ್ಲಾ ವಿಭಾಗೀಯ ಮತ್ತು ರಾಜ್ಯಮಟ್ಟದ ಸಮಿತಿಗಳನ್ನು ರಚಿಸಲಾಗಿತ್ತು ಎಂದರು.
ಡೀಮ್ಡ್ ಅರಣ್ಯ ವ್ಯಾಪ್ತಿಯಿಂದ ಹೊರತುಪಡಿಸಿರುವ ಪ್ರದೇಶವನ್ನು ಕಂದಾಯ ಇಲಾಖೆಗೆ ನೀಡಲಾಗುತ್ತಿದ್ದು, ಈ ಪ್ರದೇಶವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲಾಗುವುದು ಎಂದು ತಿಳಿಸಿದರು.