ಕನಕಪುರ: “ತಾಲೂಕಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಯಾಕೆ ಕೊಟ್ಟಿರಿ” ಎಂದು ವ್ಯಕ್ತಿಯೊಬ್ಬ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಆರ್. ಅಶೋಕ್ ಅವರನ್ನು ಪ್ರಶ್ನೆ ಮಾಡಿದ ಘಟನೆ ಡಿಕೆಶಿ ಸ್ವಗ್ರಾಮದಲ್ಲಿ ನಡೆಯಿತು.
ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಭಾನುವಾರ ಮೂರನೇ ದಿನ ತಾಲೂಕಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಬೇಕುಪ್ಪೆ ವೃತ್ತದದಿಂದ ಆರಂಭವಾದ ಚುನಾವಣಾ ಪ್ರಚಾರ ತಿಗಳರ ಹೊಸಹಳ್ಳಿ, ಹುಲಿಬಲೆ, ಮರಳೇ ಬೇಕುಪ್ಪೆ ಮಾರ್ಗವಾಗಿ ಸಾಗಿ ಡಿಕೆಶಿ ಸ್ವಗ್ರಾಮ ದೊಡ್ಡ ಆಲಹಳ್ಳಿಗೆ ತೆರಳಿತು. ಗ್ರಾಮದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಆರ್. ಅಶೋಕ್ ದೊಡ್ಡ ಆಲಹಳ್ಳಿ ವೃತ್ತದಲ್ಲಿ ಭಾಷಣ ಮಾಡಿದರು. ನಂತರ ತೆರೆದ ವಾಹನದಿಂದ ನಿರ್ಗಮಿಸುವಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬ “ತಾಲೂಕಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಯಾಕೆ ಸ್ಥಳಾಂತರ ಮಾಡಿದಿರಿ?” ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಅಶೋಕ್ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು.