ಪಡುಬಿದ್ರಿ: ಪಲಿಮಾರು ಅಣೆಕಟ್ಟು ಪ್ರದೇಶದ ಬಳಿ ನಿರ್ಮಿಸಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಟವರ್ ಕಾಮ ಗಾರಿಯಿಂದ ತೊಂದರೆಗೊಳಗಾಗುವ ಸ್ಥಳೀಯರೊಂದಿಗೆ ಕೆಪಿಟಿಸಿಎಲ್ ಅಧಿಕಾರಿಗಳು ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಲಿದ್ದಾರೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಪಲಿಮಾರು ಗ್ರಾ.ಪಂ. ವ್ಯಾಪ್ತಿಯ ಪ್ರಸ್ತಾವಿತ ಕಾಮಗಾರಿಗಳ ಸ್ಥಳ ಪರಿಶೀಲನೆ ಹಾಗೂ ಕೆಪಿಟಿಸಿಎಲ್ ಟವರ್ ಕಾಮಗಾರಿಯಿಂದ ತೊಂದರೆಗೊಳಗಾಗುವ ಸ್ಥಳೀಯರ ಅಹವಾಲು ಸ್ವೀಕರಿಸಿ ಜು. 7ರಂದು ಮಾತನಾಡಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ನಂದಿಕೂರು ಸಬ್‌ಸ್ಟೇಷನ್‌ನಿಂದ ಮೂಲ್ಕಿ ಸಬ್‌ಸ್ಟೇಷನ್‌ಗೆ 110 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಹಾದುಹೋಗಲು ಪಲಿಮಾರು ಅಣೆಕಟ್ಟು ಪ್ರದೇಶದ ಬಳಿ ಟವರ್ ನಿರ್ಮಾಣಕ್ಕೆ ಜಮೀನು ಗೊತ್ತು ಪಡಿಸಿತ್ತು. ಈ ಪ್ರದೇಶದಲ್ಲಿ ಟವರ್‌ಗಳ ನಿರ್ಮಾಣದಿಂದ ಮನೆ, ತೋಟ ಹಾಗೂ ಕೃಷಿಭೂಮಿಗಳಿಗೆ ತೊಂದರೆಗಳಾಗಲಿದೆ. ಅದಕ್ಕಾಗಿ ನಮಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಬೇಡಿಕೆಯನ್ನು ಶಾಸಕರ ಮುಂದಿಟ್ಟಿದ್ದಾರೆ.
ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಉಪ್ಪು ನೀರು ತಡೆ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಪರಿಹರಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದರು.
ಅಡ್ವೆ ರಾಧಾ ಸರ್ವಿಸಸ್‌ನಲ್ಲಿ ಹಿರಿಯ ನಾಗರಿಕರು ಹಾಗೂ ಮಕ್ಕಳಿಗಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ನ ನೋಂದಣಿಗೆ ಚಾಲನೆ ನೀಡಿದರು. ಸಂಪತ್ ಶೆಟ್ಟಿ ಕರ್ನಿರೆ ಅಧ್ಯಕ್ಷತೆಯಲ್ಲಿ ಪಲಿಮಾರು ಗಣೇಶ ಮಂದಿರದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರಾಜೀವ ನಗರ, ಹೊಯಿಗೆ, ಅಡ್ವೆ, ನಂದಿಕೂರು, ಅವರಾಲು ಮಟ್ಟು ಪ್ರದೇಶಗಳ ಪ್ರಸ್ತಾವಿತ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಸಲುವಾಗಿ ಸ್ಥಳ ಪರಿಶೀಲನೆಯನ್ನು ಶಾಸಕರು ನಡೆಸಿದರು.
ಜಿ. ಪಂ.ನ 2.5 ಲಕ್ಷ ರೂ. ಅನು ದಾನದಿಂದ ಕಾಂಕ್ರೀಟೀಕೃತಗೊಂಡ ಪಲಿಮಾರು ಕುಂಪಲ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ ಪಡುಬಿದ್ರಿ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಲಿಮಾರು ಗ್ರಾ.ಪಂ. ಉಪಾಧ್ಯಕ್ಷೆ ಸುಮಂಗಲಾ ಎಲ್. ದೇವಾಡಿಗ, ಸದಸ್ಯರಾದ ಮಧುಕರ ಸುವರ್ಣ, ಗಾಯತ್ರಿ ಡಿ. ಪ್ರಭು, ವಾಸುದೇವ ಪಲಿಮಾರು, ಕೃಷ್ಣಕುಮಾರ್, ಬಿಜೆಪಿ ಪಲಿಮಾರು ಗ್ರಾಮ ಸಮಿತಿ ಅಧ್ಯಕ್ಷ ಪ್ರಸಾದ್ ಪಲಿಮಾರು, ರಾಯೇಶ್ ಪೈ, ಅನಂತರಾಜ ಪ್ರಭು, ಪ್ರವೀಣ್ ಅಡ್ವೆ, ಕೃಷ್ಣ ಕಂಚಿನಡ್ಕ, ಸುಧೀರ್ ಆಚಾರ್ಯ, ದಾಮೋದರ ಕೋಟ್ಯಾನ್, ತಾರಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.