ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ ಪತ್ತೆಯಾದ ಮೂರು ಪ್ರಕರಣಗಳಲ್ಲಿ ಒಂದು ಭಾರಿ ಆತಂಕ ಸೃಷ್ಟಿಸಿದ್ದು ಈತನ ಸಂಪರ್ಕ ಪತ್ತೆ ಹಚ್ಚುವುದೇ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪತ್ತೆಯಾದ ಪಿ-1691 ಸೋಂಕಿತ ಎಲ್ಲೆಲ್ಲಿ, ಯಾರಿಗೆಲ್ಲ ಸಂಪರ್ಕಕ್ಕೆ ಬಂದು ಸೋಂಕು ಹಬ್ಬಿಸಿರಬಹುದು ಎಂಬ ಭಯ ಶುರುವಾಗಿದೆ. ಈ ಭಯ ಜಿಲ್ಲೆ ಅಷ್ಟೇ ಅಲ್ಲ ರಾಜ್ಯ ರಾಜಧಾನಿಯ ಜನರನ್ನೂ ಆವರಿಸಿದೆ. ಶುಕ್ರವಾರ ಸಂಜೆವರೆಗೂ ಬೆಂಗಳೂರಿನಲ್ಲಿಯೇ ಇರುವ ಈತನನ್ನು ಶೀಘ್ರ ಹಾವೇರಿಗೆ ಕರೆತರಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಆತ ತನ್ನ ಟ್ರಾವೆಲ್ ಹಿಸ್ಟರಿ ಹೇಳಿದಾಗಲೇ ಎಲ್ಲೆಲ್ಲಿ ಯಾರಿಗೆಲ್ಲ ಕ್ವಾರಂಟೈನ್ ಮಾಡಬೇಕು? ತಪಾಸಣೆ ಮಾಡಬೇಕು ಎಂಬುದು ತಿಳಿಯಲಿದೆ.
ಈ ಸೋಂಕಿತ ಶಿಗ್ಗಾವಿ ತಾಲೂಕಿನ ಬಂಕಾಪುರದ ನಿವಾಸಿಯಾಗಿದ್ದು 22 ವರ್ಷದ ಯುವಕನಾಗಿದ್ದಾನೆ. ಚಾಲಕನಾಗಿರುವ ಈತನ ಮೂಲ ಗ್ರಾಮ ಯಾವುದು ಎಂಬುದು ಇನ್ನೂ ಖಚಿತವಾಗಿಲ್ಲ. ಈತ ಬಂಕಾಪುರದಲ್ಲಿ ರೂಮ್ ಒಂದನ್ನು ಬಾಡಿಗೆಗೆ ಪಡೆದಿದ್ದನು. ಮೇ 5, 8 ಹಾಗೂ 12ರಂದು ಮುಂಬಯಿ “ವಾಸಿ’ ಕೋಲ್ಡ್ ಸ್ಟೋರೇಜ್‌ಗೆ ಬಂಕಾಪುರದಿಂದ ಲಾರಿಯಲ್ಲಿ ಮೆಣಸಿನಕಾಯಿ ಲೋಡ್ ಮಾಡಿಕೊಂಡು ಹೋಗಿದ್ದನು. ಈತ ಮುಂಬಯಿಗೆ ಹೋಗಿ ಬಂದ ಸುದ್ದಿ ಅರಿತ ಸ್ಥಳೀಯರು ಆತನಿಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಒತ್ತಾಯಿಸಿದರು. ಜನರ ಒತ್ತಾಯದ ಮೇರೆಗೆ ಆತ ಮೇ 19 ರಂದು ಸ್ವಯಂ ಆಗಿ ಬಂದು ಪರೀಕ್ಷೆಗಾಗಿ ಗಂಟಲು ದ್ರವ ನೀಡಿ ಹೋಗಿದ್ದನು. ವರದಿ ಬರುವ ಮೊದಲೇ ಬೆಂಗಳೂರಿಗೆ ಅನಾನಸ್ ಲೋಡ್ ಮಾಡಿಕೊಂಡು ಹೋಗಿದ್ದಾನೆ. ಶುಕ್ರವಾರ ಬೆಳಗ್ಗೆ ವರದಿ ಪಾಸಿಟಿವ್ ಬರುತ್ತಿದ್ದಂತೆ ಆತನನ್ನು ಬೆಂಗಳೂರಿನಿಂದ ಹಾವೇರಿಗೆ ಕರೆದುಕೊಂಡು ಬರಲಾಗುತ್ತಿದೆ. ಉಳಿದೆರಡು ಪ್ರಕರಣಗಳಲ್ಲಿ ಟ್ರಾವೆಲ್ ಹಿಸ್ಟರಿ ಸ್ಪಷ್ಟವಾಗಿದ್ದು, ಒಂದು ಪ್ರಕರಣದ ಪೂರ್ಣ ಹಿಸ್ಟರಿ ಈವರೆಗೆ ಗೊತ್ತಾಗಿಲ್ಲ. ಹೀಗಾಗಿ ಈ ಸೋಂಕಿತನಿಂದ ಯಾರಿಗೆಲ್ಲ ಕ್ವಾರಂಟೈನ್ ಮಾಡಬೇಕು ಎಂಬುದು ಹಿಸ್ಟರಿ ತಿಳಿದಾಗಲೇ ಗೊತ್ತಾಗಬೇಕಿದೆ.
ಲಕ್ಷಣಗಳು ಇರಲಿಲ್ಲ… : ಪಿ-1691 ಸೋಂಕಿತನಿಗೆ ಕೋವಿಡ್
ಲಕ್ಷಣಗಳು ಇರಲಿಲ್ಲ. ಹಾಗಾಗಿ ಆತ ಆರಾಮಾಗಿದ್ದನು. ಆದರೆ, ಈತ ಮುಂಬಯಿಗೆ ಹೋಗಿ ಬಂದಿರುವ ಮಾಹಿತಿ ಇದ್ದ ಸ್ಥಳೀಯರು ಹಾಗೂ ರೂಮ್ ಬಾಡಿಗೆ ಕೊಟ್ಟವರು ಆರೋಗ್ಯ ತಪಾಸಣೆಗೆ ಒತ್ತಾಯಿಸಿದ್ದರು. ಅವರ ಒತ್ತಾಯದ ಮೇರೆಗೆ ಮೇ 19 ರಂದು ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆಗಾಗಿ ಗಂಟಲು ದ್ರವ ಕೊಟ್ಟು ಹೋಗಿದ್ದನು. ಸ್ವಯಂ ಆಗಿ ಬಂದು ತಪಾಸಣೆ ಮಾಡಿಕೊಂಡರೆ ಅವರನ್ನು ಕ್ವಾರಂಟೈನ್ ಮಾಡುವುದಿಲ್ಲ. ಮಾದರಿಯನ್ನು ನೇರವಾಗಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ವರದಿ ಪಾಸಿಟಿವ್ ಬಂದಿದೆ. ಇದರ ಬಗ್ಗೆ ಅರಿವಿಲ್ಲದ ಆತ ಅನಾನಸ್ ಲೋಡ್ ಮಾಡಿಕೊಂಡು ಬೆಂಗಳೂರಿಗೆ ಹೋಗಿದ್ದು ಆತನನ್ನು ಪೊಲೀಸರ ಸಹಾಯದಿಂದ ಹಾವೇರಿಗೆ ಕರೆತರಲಾಗುತ್ತಿದೆ. ವಿಚಾರಣೆಯಿಂದಷ್ಟೇ ಆತನ ಟ್ರಾವೆಲ್ ಹಿಸ್ಟರಿ ಗೊತ್ತಾಗಬೇಕಿದೆ. –
ಯೋಗೇಶ್ವರ, ಅಪರ ಜಿಲ್ಲಾಧಿಕಾರಿ.