Advertisement

ಬಿಜೆಪಿ ನಾಯಕರಲ್ಲಿ ‘ಸಂಕಟ’ತಂದ ‘ಸಂತೋಷ’ಹೇಳಿಕೆ; ಮಹತ್ತರ ಸುಳಿವು ನೀಡಿದ ಬಿಎಲ್ಎಸ್!

10:59 AM May 02, 2022 | Team Udayavani |

ಬೆಂಗಳೂರು: ಮುಂದಿನ ಚುನಾವಣೆಯ ಅಭ್ಯರ್ಥಿ ಆಯ್ಕೆ ಹಾಗೂ ವಂಶಾಡಳಿತ ರಾಜಕಾರಣದ ಕುರಿತಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡಿರುವ ಹೇಳಿಕೆ ಈಗ ಬಿಜೆಪಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಯಾರನ್ನು ಗುರಿಯಾಗಿಸಿಕೊಂಡು ಸಂತೋಷ್ ಈ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಪಕ್ಷದಲ್ಲಿ ಗುಸುಗುಸು ಆರಂಭವಾಗಿದೆ.

Advertisement

ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ಸಂಘಟನಾತ್ಮಕ ಸಿದ್ಧತೆ ಸೇರಿದಂತೆ ಬಿಜೆಪಿಯಲ್ಲಿ ಸಾಕಷ್ಟು ಸಿದ್ಧತೆ ನಡೆಯುತ್ತಿರುವಾಗಲೇ ಸಂತೋಷ್ ಅವರ ಹೇಳಿಕೆ ಈಗ ಎಲ್ಲಿಲ್ಲದ ಚರ್ಚೆಗೆ ಕಾರಣವಾಗಿದೆ.

ಸಂಘಟನಾತ್ಮಕವಾಗಿ ಆಯಕಟ್ಟಿನ ಸ್ಥಾನದಲ್ಲಿರುವ ಸಂತೋಷ್ ಕೇವಲ “ವಾಕ್ ಚಪಲ”ಕ್ಕಾಗಿ ಈ ಮಾತನಾಡಿರಲು ಸಾಧ್ಯವಿಲ್ಲ. ಪಕ್ಷದ ವಲಯದಲ್ಲಿ ನಡೆಯಬಹುದಾದ ಮಹತ್ತರ ಬದಲಾವಣೆಯ ಸುಳಿವನ್ನೇ ಅವರು ನೀಡಿದ್ದಾರೆ ಎಂದು ಈಗ ವ್ಯಾಖ್ಯಾನಿಸಲಾಗುತ್ತಿದೆ.

ಇದನ್ನೂ ಓದಿ:ಆತ್ಮನಿರ್ಭರ ಭಾರತದ ಕಲ್ಪನೆ ಸಾಕಾರಗೊಳಿಸಲು ಶ್ರಮಿಸಿ: ಅಂಗಾರ

ಸಂತೋಷ್ ಅವರ ಹೇಳಿಕೆಯಲ್ಲಿ ಪ್ರಮುಖವಾಗಿ ನಾಲ್ಕು ಅಂಶಗಳು ಈಗ ಚರ್ಚೆಗೆ ಕಾರಣವಾಗಿದೆ. ಅವುಗಳನ್ನು ಒಂದೊಂದಾಗಿ ವಿಶ್ಲೇಷಿಸುವುದಾದರೆ…

Advertisement

ನಾಯಕತ್ವದ ವಯಸ್ಸು:

ನಾಯಕತ್ವದ ವಯಸ್ಸಿನ ಬಗ್ಗೆ ಸಂತೋಷ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸಂಪುಟದಲ್ಲಿ ಇರುವ ಸಚಿವರ ಸರಾಸರಿ ವಯಸ್ಸು 57, ನಾನಾ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿ ವಯಸ್ಸು ಕೂಡಾ 55ರಿಂದ 57 ಎಂದು ಹೇಳುವ ಮೂಲಕ ಭವಿಷ್ಯದ ನಾಯಕತ್ವಕ್ಕೆ ವೃದ್ಧಾಪ್ಯದ ಲೇಪ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದಂತಾಗಿದೆ.

ಹಿರಿಯರಿಗೆ ಗೇಟ್ ಪಾಸ್:

ಪಕ್ಷದಲ್ಲಿ ಹಿರಿಯರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ಬಗ್ಗೆ ಸಂತೋಷ್ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಇದಕ್ಕಾಗಿ ಅವರು ಉತ್ತರ ಪ್ರದೇಶ, ಗುಜರಾತ್ ಹಾಗೂ ದಿಲ್ಲಿ ಕಾರ್ಪೋರೇಷನ್ ಚುನಾವಣೆಗೆ ನಡೆಸಿದ ಅಭ್ಯರ್ಥಿ ಆಯ್ಕೆಯ ಉದಾಹರಣೆ ನೀಡಿದ್ದಾರೆ. ‌ಒಂದು ಕ್ಷೇತ್ರದಲ್ಲಿ ಹಲವು ಬಾರಿ ಗೆದ್ದವರಿಗೆ ಇದರಿಂದ ನಡುಕ ಶುರುವಾಗಿದೆ.

ವಂಶ ರಾಜಕಾರಣ:

ಎಲ್ಲದಕ್ಕಿಂತ ಮುಖ್ಯವಾಗಿ ವಂಶವಾಹಿನಿ ರಾಜಕಾರಣದ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಅಪ್ಪನಿಂದ ಮಗನಿಗೆ ಅಧಿಕಾರ ಹಸ್ತಾಂತರಿಸಿರುವ ಪ್ರಕ್ರಿಯೆಯನ್ನು ಅವರು ಬಲವಾಗಿ ವಿರೋಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಈ ವಿಚಾರ ಪ್ರಸ್ತಾಪಿಸಿರುವುದರಿಂದ ಸಂತೋಷ್ ಹೇಳಿಕೆಗೆ ಈಗ ಮಹತ್ವ ಲಭಿಸಿದೆ.

ನಾಯಕತ್ವ ಬದಲಾವಣೆ:

ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ನಾಯಕತ್ವ ಬದಲಾವಣೆ ಬಗ್ಗೆ ಸಂತೋಷ್ ಸೂಚ್ಯವಾಗಿ ಹೇಳಿರಬಹುದೇ ಎಂದು ಚರ್ಚೆಯಾಗುತ್ತಿದ್ದು, ಇನ್ನೆರಡು ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟತೆ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next