ಗೋಕಾಕ: ನೆರೆ ಬಂದು ಎರಡು ತಿಂಗಳು ಕಳೆದರೂ ನೆರೆ ಪೀಡಿತರ ಸಂಕಷ್ಟಗಳು ಪರಿಹಾರವಾಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ನೆರೆ ಪೀಡಿತ ಪ್ರದೇಶದ ಜನರಿಗಾಗಿ ಇಲ್ಲಿಯ ಅರಣ್ಯ ಇಲಾಖೆಯ ಭೂಮಿಯಲ್ಲಿ ತಗಡಿನ ಶೆಡ್‌ಗಳನ್ನು ಬಿಟ್ಟರೆ ಬೇರೆ ಯಾವ ನಾಗರಿಕ ಸೌಲಭ್ಯಗಳು ಒದಗಿಸದೇ ಇರುವುದರಿಂದ ಅವರ ಜೀವನ ನರಕ ಸದೃಶವಾಗಿದೆ.
ನಗರದ ಕಡಬಗಟ್ಟಿ ರಸ್ತೆಯಲ್ಲಿ ತರಾತುರಿಯಲ್ಲಿ ಕೆಲ ತಗಡಿನ ಶೆಡ್‌ಗಳನ್ನು ಹಾಕಿ ಪರಿಹಾರ ಕೇಂದ್ರದಲ್ಲಿ ಇದ್ದ ನೆರೆ ಪೀಡಿತರಿಗೆ ಅಲ್ಲಿಗೆ ಹೋಗಿ ವಾಸಿಸಲು ತಿಳಿಸಿದಾಗ ಅಲ್ಲಿಗೆ ಹೋಗಿ ನೋಡಿದ ಜನರಿಗೆ ನಿರಾಶೆಯಾಗಿದೆ. ಕೇವಲ 12×15 ಅಳತೆಯ 60 ಶೆಡ್‌ಗಳನ್ನು ನಿರ್ಮಿಸಿದ್ದು ಅದರಲ್ಲಿ 78 ಕುಟುಂಬಗಳು ವಾಸವಾಗಿವೆ.
ನೆಲವನ್ನು ಗಟ್ಟಿಗೊಳಿಸದೇ(ಕಾಂಕ್ರೀಟ್) ಹಳೆಯ ತಗಡುಗಳನ್ನು ಹಾಕಿ ಶೆಡ್ ನಿರ್ಮಿಸಲಾಗಿದ್ದು ತಗಡುಗಳಿಗೆ ಅಲ್ಲಲ್ಲಿ ತೂತು ಬಿದ್ದಿವೆ. ಇದರಿಂದ ಮಳೆಯಾದಾಗ ಸೋರುತ್ತವೆ. ಸ್ನಾನಗೃಹಗಳಿಗೆ ಬಾಗಿಲುಗಳೇ ಇಲ್ಲ. ವಿದ್ಯುತ್ ಸೌಲಭ್ಯದ ಹೆಸರಿನಲ್ಲಿ ಒಂದೆರಡು ಬಲ್ಬ್ಗಳನ್ನು ಹಾಕಲಾಗಿದ್ದು ನಿರಾಶ್ರಿತರ ಮಕ್ಕಳಿಗೆ ರಾತ್ರೀ ವೇಳೆಯಲ್ಲಿ ಅಭ್ಯಾಸ ಮಾಡಲು ಆಗುತ್ತಿಲ್ಲ. ಇದಲ್ಲದೇ ಗುಡ್ಡಗಾಡು ಪ್ರದೇಶದಲ್ಲಿ ಈ ಶೆಡ್ ಗಳಿರುವುದರಿಂದ ರಾತ್ರಿ ಸಮಯದಲ್ಲಿ ಹುಳ-ಹುಪ್ಪಡಿಗಳು ಬರುವ ಶಂಕೆಯಿದ್ದು, ರಾತ್ರಿಯೆಲ್ಲ ಜಾಗರಣೆ ಮಾಡುವ ಪರಿಸ್ಥಿತಿ ಇದೆ. ಒಂದು ಗಂಟೆ ಕುಡಿಯುವ ನೀರು ಬಿಟ್ಟಂತೆ ಮಾಡಿ ಬಂದ್ ಮಾಡುವುದರಿಂದ ಸರಿಯಾಗಿ ಕುಡಿಯಲು ನೀರು ಸಿಗುತ್ತಿಲ್ಲ.
ನಗರಸಭೆಯಿಂದ ಒಂದು ಟ್ಯಾಂಕರ್ ನೀರು ನಿಲ್ಲಿಸಲಾಗುತ್ತಿದ್ದು ಅದರಲ್ಲಿಯ ನೀರು ಕುಡಿಯುವ ಸ್ಥಿತಿ ಇದ್ದು ಅದು ಕೂಡ 2 ದಿನಗಳಿಂದ ಖಾಲಿಯಾಗಿ ಹಾಗೇ ನಿಂತಿದೆ. ಬರ್ಹಿದೆಸೆಗೆ ಗುಡ್ಡಕ್ಕೆ ಹೋಗಬೇಕಾಗುತ್ತದೆ. ಶೆಡ್‌ಗಳ ಒಳಗೆ ನೆಲದಲ್ಲಿ ಮರಳು, ಮಣ್ಣು ಇರುವುದರಿಂದ ಊಟವನ್ನೂ ಮಾಡಲು ಆಗದ ಸ್ಥಿತಿ ಇದೆ. ಇದರಿಂದ ನಿರಾಶ್ರಿತರ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗಿದೆ.ಈ ಶೆಡ್‌ಗಳನ್ನು ನಿರ್ಮಿಸಿದ ನಂತರ ಯಾವ ಅಧಿಕಾರಿಯೂ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ನಿರಾಶ್ರಿತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ನೆರೆ ಪೀಡಿತರಿಗೆ ಶೆಡ್‌ಗಳನ್ನು ನಿರ್ಮಿಸಲಾಗಿದೆ ಎಂದು ತೋರಿಕೆಗೆ ಮಾತ್ರ ಇದನ್ನು ಮಾಡಲಾಗಿದ್ದು ಅವರಿಗೆ ಯಾವ ಮೂಲ ಸೌಲಭ್ಯ ಒದಗಿಸಲಾಗಿಲ್ಲ. ಬೆಳಗಾವಿ ನಂತರ ಅತ್ಯಂತ ದೊಡ್ಡ ನಗರವಾದ ಗೋಕಾಕ ನಗರದಲ್ಲಿಯೇ ನೆರೆ ಪೀಡಿತರ ಪರಿಸ್ಥಿತಿ ಹೀಗಾದರೆ ಗ್ರಾಮಾಂತರ ಪ್ರದೇಶದ ಪರಿಸ್ಥಿತಿ ಹೇಗಿರಬೇಕು ಎನ್ನುವುದು ಊಹಿಸಬಹುದು.
ನೆರೆ ಬಂದ ಹೋದ ಮೇಲೆ ಗೋಕಾಕ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಾನವೀಯತೆಯ ಆಧಾರ ಮೇಲೆ ಕುಂದು ಕೊರತೆಗಳನ್ನು ವಿಚಾರಿಸಬೇಕಾದ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿಲ್ಲ, ಗೋಕಾಕದಲ್ಲಿಯ ಶೆಡ್‌ಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸೌಲಭ್ಯ ಒದಗಿಸಬೇಕೆನ್ನುವುದು ನಿರಾಶ್ರಿತರ ಬೇಡಿಕೆಯಾಗಿದೆ.
ನಿರಾಶ್ರಿತರ ವಾಸಕ್ಕೆ ತಾತ್ಕಾಲಿಕವಾಗಿ 60 ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿದೆ. ಅಲ್ಲಿ ಹೆಚ್ಚಿನವರು ಬಾಡಿಗೆದಾರರು ಇದ್ದಾರೆ. ಅವರಿಗೆ ಎಲ್ಲ ರೀತಿಯ ಮೂಲ ಸೌಲಭ್ಯ ಒದಗಿಸಲಾಗಿದೆ. ಶೆಡ್‌ಗಳಲ್ಲಿ ವಾಸವಾಗಿದ್ದರು ಕುಂದು ಕೊರತೆಗಳನ್ನು ವಿಚಾರಿಸಲು ನಮ್ಮ ಇಲಾಖೆಯಿಂದ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ಅವರಿಗೆ ಯಾವುದೇ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ.
– ಪ್ರಕಾಶ ಹೊಳೆಪ್ಪಗೋಳ, ತಹಶೀಲದಾರರು, ಗೋಕಾಕ
ನಮಗೆ ತುರಾತುರಿಯಲ್ಲಿ ಹಳೆಯ ತಗಡುಗಳನ್ನು ಹಾಕಿ ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿದ್ದು ನೆಲವನ್ನು ಕಾಂಕ್ರೀಟ್ ಹಾಕದೇ ಕೊಟ್ಟಿದ್ದಾರೆ. ನಾವು ಮಣ್ಣಿನಲ್ಲಿಯೇ ಊಟ ಮಾಡಬೇಕಾದ ಅನಿವಾರ್ಯಯತೆ ಇದೆ. ಗುಡ್ಡದ ಪ್ರದೇಶವಾದ್ದರಿಂದ ರಾತ್ರೀ ವೇಳೆಯಲ್ಲಿ ರಕ್ಷಣೆಯ ಅವಶ್ಯಕತೆ ಇದೆ.
–ರಮೇಶ, ನಿರಾಶ್ರಿತ.
-ಮಲ್ಲಪ್ಪ ದಾಸಪ್ಪಗೋಳ