Advertisement

ತಳಕವಾಡ ಸಂತ್ರಸ್ತರ ಬದುಕು ಮತ್ತೆ ತಲ್ಲಣ

10:29 AM Sep 11, 2019 | Team Udayavani |

ಕುಳಗೇರಿ ಕ್ರಾಸ್‌: ಏನ್‌ ಕೇಳ್ತಿರಿ ನಮ್ಮ ಬಾಳೆ, ಮೊದಲ ಒಮ್ಮೆ ನೀರ ಬಂತ ಉರಬಿಟ್ಟ ಎಲ್ಲೆಲೋ ದಿಕ್ಕಾಪಾಲಾಗಿ ಹೋಗಿ ನೀರ ಹೋದ ಮ್ಯಾಗ ಮತ್ತ ಉರಿಗೆ ಬಂದ ಮನ್ಯಾಗಿದ್ದ ರಾಡಿ ತೊಳದ ಇರೋ ಹೊತ್ತಿಗೆ ಮತ್ತ ನೀರ ಬಂತ ನೋಡ್ರಿ.

Advertisement

ನಮಗ ಎಲ್ಲಾ ಕಡೆಯಿಂದ ಗಾಡಿ ತುಂಬಕೊಂಡ ಬಂದ ಸಹಾಯ -ಸಹಕಾರ ಮಾಡಿ ಏನೆಲ್ಲ ಕೊಟ್ಟು ಪುಣ್ಯ ಕಟ್ಗೊಂಡ್ರು, ಆದರೆ ಸರ್ಕಾರದಿಂದ ನಮಗ ಏನೂ ಪರಿಹಾರ ಬಂದಿಲ್ಲ ಬಾದಾಮಿ ತಾಲೂಕಿನ ಮಲಪ್ರಭಾ ನದಿ ಪ್ರವಾಹಕ್ಕೆ 2ನೇ ಬಾರಿ ಸಂಕಷ್ಟ ಎದುರಿಸುತ್ತಿರುವ ಕರ್ಲಕೊಪ್ಪದ ಸಂತ್ರಸ್ತರು ತಮ್ಮ ಅಳಲನ್ನ ತೋಡಿಕೊಂಡರು.

ಆ. 8ರಂದು ಬಂದ ಪ್ರವಾಹದ ಬೆನ್ನಲ್ಲೇ ಜಿಲ್ಲೆ ಹಾಗೂ ತಾಲೂಕು ಆಡಳಿತ ನೆರೆ ಪೀಡಿತ ಗ್ರಾಮಗಳಲ್ಲಿ ಬೀಡು ಬಿಟ್ಟು ಸಂತ್ರಸ್ತರ ಸಮಸ್ಯೆ ಆಲಿಸಿದ್ದರು. ಆದರೆ ನೆರೆಪೀಡಿತ ಗ್ರಾಮಗಳಲ್ಲಿ ಸರ್ಕಾರ ಸಂತ್ರಸ್ತರಿಗೆ ಕೊಡಬೇಕಾದ ಕಿಟ್, 10 ಸಾವಿರ ಸಹಾಯಧನ ಸರಿಯಾಗಿ ತಲುಪಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ತಾತ್ಕಾಲಿಕ ಶೆಡ್‌ ಅಪೂರ್ಣ: ನೆರ ಪೀಡಿತ ಗ್ರಾಮ ಕರ್ಲಕೊಪ್ಪ ಸೇರಿದಂತೆ ಬಾದಾಮಿ ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕಾಗಿ ಸಾಕಷ್ಟು ಖರ್ಚು ಮಾಡಿ ಪ್ರದರ್ಶನಕ್ಕೆ ನೀಡಿದಂತಾಗಿದೆ. ನೆರೆ ಬಂದು ತಿಂಗಳು ಕಳೆದು ಮತ್ತೆ ನೆರೆ ಬಂದರೂ ಸಂತ್ರಸ್ತರ ಶೆಡ್‌ ಮಾತ್ರ ಸಂಪೂರ್ಣ ನಿರ್ಮಾಣವಾಗಿಲ್ಲ. ಕಾರಣ ಇನ್ನೂ ಸಂತ್ರಸ್ತರು ಬೀದಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಕರ್ಲಕೊಪ್ಪ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ಸುಮಾರು 52, ಪಿಡಬ್ಲೂಡಿಯಿಂದ 12 ತಾತ್ಕಾಲಿಕ ಶೆಡ್‌ ನಿರ್ಮಿಸಲಾಗಿದೆ. ಆದರೆ, ಇವು

Advertisement

ಯಾವುದೂ ಪೂರ್ಣಗೊಂಡಿಲ್ಲ. ಆದರೆ ಅಪೂರ್ಣ ಶೆಡ್‌ನ‌ಲ್ಲಿ ಇರೋಣ ಎಂದರೆ ವಿದ್ಯುತ್‌ ಸಂಪರ್ಕ ಇಲ್ಲ, ಶೆಡ್‌ನ‌ಲ್ಲಿ ನೆಲಕ್ಕೆ ಜೋಡಿಸಬೇಕಾದ ಕಲ್ಲುಗಳು ಸಹ ಹಾಗೆ ಬಿದ್ದಿವೆ.

ತಾತ್ಕಾಲಿಕ ಶೆಡ್‌ ಅಪೂರ್ಣಗೊಳಿಸಿ ಅಲ್ಲಿಂದ ಜಾಗಬಿಟ್ಟ ಅಧಿಕಾರಿಗಳಿಗೆ ಪೋನ್‌ ಮುಖಾಂತರ ಕೇಳಿದರೆ ನಮಗೆ ಗೊತ್ತಿಲ್ಲ. ನಾವು ಮಾಡೋದು ಅಷ್ಟೆ ಕೆಲಸ ಉಳಿದಿದ್ದು ನಿಮಗೆ ಸಂಬಂದ ಏನಾದರೂ ಮಾಡಿ ಎಂದು ಕೈ ತೊಳೆದುಕೊಳ್ಳುತ್ತಿದ್ದಾರಂತೆ.

ಇಷ್ಟು ದಿನ ಜೋಪಡಿಯಲ್ಲಿ ಮಲಗಲು ಜಾಗ ವಿಲ್ಲದೆ ರಾತ್ರಿ ಹಗಲು ಕುಳಿತೇ ಜೀವನ ಸಾಗಿಸಿದ್ದ ಸಂತ್ರಸ್ಥರು ಜೀವ ಉಳಿಸಿಕೊಳ್ಳುವ ಆತಂಕದಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬಸ್ಥರೆಲ್ಲ ಶೆಡ್‌ಗಳಿಗೆ ತಾವೆ ಕಲ್ಲು ಜೋಡಿಸಿಕೊಳ್ಳುತ್ತಿದ್ದಾರೆ. ಸಾವಿರಾರು ರೂಪಾಯಿ ಸ್ವಂತ ಕರ್ಚಿನಲ್ಲಿ ನೂರಾರು ಮೀಟರ್‌ ಉದ್ದ ವಿದ್ಯುತ್‌ ವೈರ್‌ ತಂದು ಜೋಡಿಸಿ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

ಅಷ್ಟೆಯಲ್ಲ ಚಿಕ್ಕ ಮಕ್ಕಳು, ವೃದ್ಧರು ತಾವೆ ಸ್ವತಃ ಸಲಕರಣೆಗಳಿಲ್ಲದೆ ಬುಟ್ಟಿಯಲ್ಲಿ ಮಣ್ಣು ತುಂಬಿ ಹೊತ್ತು ಶೆಡ್‌ಗಳಿಗೆ ಹಾಕಿ ನೆಲ ಸಮ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷದಿಂದ ಶಾಲೆ ಕಲಿಯುವ ಸಂತ್ರಸ್ತರ ಮಕ್ಕಳು ಕಳೆದ ಒಂದು ತಿಂಗಳಿಂದ ವಿದ್ಯೆಯಿಂದ ವಂಚಿತರಾಗಿದ್ದಾರೆ. ಪಾಲಕರೊಂದಿಗೆ ತಾತ್ಕಾಲಿಕ ಶೆಡ್‌ಗಳಿಗೆ ಮಣ್ಣು ಹೊರುತ್ತಿದ್ದಾರೆ.

ಪರಿಹಾರ ಕೇಂದ್ರಗಳನ್ನು ಸಹ ಬಂದ ಮಾಡಲಾಗಿದೆ. ಮತ್ತೆ ಪ್ರವಾಹ ಬಂದಿದ್ದು ಸಂತ್ರಸ್ತರು ಬೀದಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಯಾರನ್ನಾದರೂ ಅಧಿಕಾರಿಗಳನ್ನ ಕೇಳಿದರೆ ಒಬ್ಬರ ಮೇಲೊಬ್ಬರು ಹಾಕಿ ಜಾರಿಕೊಳ್ಳುತ್ತಿದ್ದಾರೆ.

ಜಿಲ್ಲಾಧಿಕಾರಿಗಳೆ ಇತ್ತ ಗಮನ ಹರಿಸಿ ಸಂತ್ರಸ್ಥರ ಗೋಳನ್ನ ಒಂದು ಬಾರಿ ಕಣ್ತೆರೆದು ನೋಡಿ. ಮಕ್ಕಳು ವೃದ್ಧರು ಬೀದಿಪಾಲಾಗಿದ್ದಾರೆ. ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಇಲ್ಲಿನ ಸಂತ್ರಸ್ತರ ಸಂಕಷ್ಟ ನಿವಾರಣೆಗೆ ನೆರವಾಗಿ ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

 

•ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next