Advertisement
ಹೌದು, ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ಪ್ರವಾಹ ಹಿಂದೆಂದೂ ಕಂಡರಿಯದಷ್ಟು ಬಂದಿವೆ. ಮೂರು ನದಿಗಳ ರುದ್ರ ನರ್ತನಕ್ಕೆ 9 ತಾಲೂಕಿನ 194 ಹಳ್ಳಿಗಳು ಅಕ್ಷರಶಃ ನಲುಗಿವೆ. ರೈತರು, ಸಣ್ಣಪುಟ್ಟ ವ್ಯಾಪಾರಸ್ಥರು, ಕೂಲಿಕಾರರು, ನೇಕಾರರು, ನಿತ್ಯ ದುಡಿದು ಜೀವನ ಸಾಗಿಸುವ ಬಡವರು, ಬೇರೊಬ್ಬ ಹೊಲ ಲಾವಣಿಗೆ ಮಾಡಿದ್ದ ರೈತರು ನಿತ್ಯ ಕಣ್ಣೀರಿನಲ್ಲಿದ್ದಾರೆ. ಮುಂದಿನ ಬದುಕು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ. ಸರ್ಕಾರ ಕೊಡುವ ಪರಿಹಾರದಲ್ಲಿ ಪುನರ್ ಬದುಕು ಕಟ್ಟಿಕೊಳ್ಳಲಾಗುತ್ತದೆಯೇ, ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ನಮಗೆಲ್ಲ ಸೂಕ್ತ ಪರಿಹಾರ ಸಿಗುತ್ತಾ ಎಂಬ ಆತಂಕ ಕಾಡುತ್ತಿದೆ.
Related Articles
Advertisement
ರೈತರಿಗೆ ಇಷ್ಟೊಂದು ಪ್ರಮಾಣದ ಹಾನಿಯಾದರೆ, ಇನ್ನು ಕಬ್ಬು ನುರಿಸಿ, ಸಕ್ಕರೆ ಉತ್ಪಾದಿಸಿ, ಮಾರಾಟ ಮಾಡುತ್ತಿದ್ದ ಜಿಲ್ಲೆಯ ಕಾರ್ಖಾನೆಗಳ ಉದ್ಯಮಿಗಳೂ ಈ ಬಾರಿ ಕಬ್ಬಿಗಾಗಿ ಪರಿತಪಿಸುವ ಅನಿವಾರ್ಯತೆ ಬಂದಿದೆ. ರೈತರು ಎಷ್ಟೇ ಗೋಳಾಡಿದರೂ, ಹೋರಾಟ ಮಾಡಿದರೂ ತಕ್ಷಣಕ್ಕೆ ಕಬ್ಬು ಕಟಾವು ಮಾಡಿಕೊಂಡು ಹೋಗದ ಹಾಗೂ ಕಬ್ಬು ನುರಿಸಿದ ಬಳಿಕ ಬಾಕಿ ಕೊಡದೇ ಸತಾಯಿಸುವ ಕಾರ್ಖಾನೆ ಮಾಲಿಕರು, ಈ ಬಾರಿ ನಮಗೆ ಕಬ್ಬು ಕೊಡಿ ಎಂದು ಕೇಳುವ ಪರಿಸ್ಥಿತಿ ಬರಲಿದೆ.
ಕಾಲು ಜಾರಿ ಬಿದ್ದ ಸಂತ್ರಸ್ತನ ರಕ್ಷಣೆ: ತಮದಡ್ಡಿ ಗ್ರಾಮದ ಸಂತ್ರಸ್ತ ಸುರೇಶ ಪೂಜಾರಿ ಎಂಬಾತನು ಗುರುವಾರ ರಾತ್ರಿ ತನ್ನ ಮನೆಗೆ ತೆರಳಿ ವಾಪಸ್ ಪರಿಹಾರ ಕೇಂದ್ರಕ್ಕೆ ಬರುವಾಗ ನೀರಿನ ಪ್ರವಾಹದಲ್ಲಿ ಕಾಲು ಜಾರಿ ಬಿದ್ದು 300 ಅಡಿ ದೂರ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಆಪತ್ಪಾಂಧವನಂತಿದ್ದ ವಿದ್ಯುತ್ ಕಂಬವೊಂದನ್ನು ಹಿಡಿದು ಅದರ ಮೇಲೆ ಹತ್ತಿ ಕುಳಿತಿದ್ದನ್ನು ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬನಹಟ್ಟಿ ವೃತ್ತ ನಿರೀಕ್ಷಕ ಅಶೋಕ ಸದಲಗಿ ಹಾಗೂ ತೇರದಾಳ ಠಾಣಾಧಿಕಾರಿ ಕೆ.ಟಿ. ಶೋಭಾ ಅವರು ಬೋಟ್ ಮೂಲಕ ಎನ್‌ಡಿಆರ್‌ಎಫ್ ತಂಡದೊಂದಿಗೆ ತೆರಳಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಬ್ಬು ಬೆಳೆಗಾರರಿಗೆ ಸಂಕಷ್ಟದ ಮೇಲೆ ಸಂಕಷ್ಟ ಬರುತ್ತಲೇ ಇವೆ. ಕಾರ್ಖಾನೆಗಳು ಒಂದೆಡೆ ಬಾಕಿ ಕೊಟ್ಟಿಲ್ಲ. ನಾಲ್ಕು ವರ್ಷದಿಂದ ಬರದಿಂದ ಕಬ್ಬು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿಲ್ಲ. ಈ ಬಾರಿ ರೈತರು ಕಷ್ಟಪಟ್ಟು ಕಬ್ಬು ಬೆಳೆದರೆ, ಮೂರು ನದಿಗಳ ಪಾತ್ರದಡಿ ಬರುವ ಸುಮಾರು 2.50 ರಿಂದ 2.80 ಲಕ್ಷ ಎಕರೆ ವರೆಗೆ ಕಬ್ಬು ಬೆಳೆ ಹಾನಿಯಾಗಿದೆ. ಈ ಹಾನಿಯ ಅಂದಾಜು ನೆನಸಿಕೊಂಡರೆ ಕಣ್ಣೀರು ಬರುತ್ತಿದೆ.•ನಾಗೇಶ ಹೆಗಡೆ, ಕಬ್ಬು ಬೆಳೆಗಾರ ಮತ್ತು ಹೋರಾಟಗಾರ
•ಶ್ರೀಶೈಲ ಕೆ. ಬಿರಾದಾರ